ಉಡುಪಿ: ಕೃಷಿ ಸಮಾಜದಲ್ಲಿ ಅಡುಗೆ ಮನೆಗೆ ಮಹತ್ವವಿತ್ತು. ಆದರೆ ಆಧುನಿಕ ಅಡುಗೆ ಮನೆಗಳು ಎಲೆಕ್ಟ್ರಾನಿಕ್ ಸಾಮಗ್ರಿಗಳಿಂದ ಸ್ಪಲ್ಪಮಟ್ಟಿಗೆ ಮಹತ್ವ ಕಳೆದುಕೊಳ್ಳುತ್ತಿವೆ. ಆದರೂ ಅಡುಗೆ ಕೋಣೆ ಎಷ್ಟೋ ಸಾಹಿತಿಗಳನ್ನು, ಬರೆಹಗಾರರನ್ನು ಹುಟ್ಟುಹಾಕಿದೆ. ಕವಿಗಳಿಗೆ ಅಡುಗೆ ಕೋಣೆಯೇ ಸ್ಫೂರ್ತಿ ಎಂದು ಬಂಗಾಲಿ ಲೇಖಕಿ ಡಾ| ನವನೀತಾ ದೇವ್‌ಸೇನ್ ಹೇಳಿದರು.
ಅವರು ಮಣಿಪಾಲ ವಿ.ವಿ.ಯ ಡಾ| ಟಿಎಂಎ ಪೈ ಭಾರತೀಯ ಸಾಹಿತ್ಯ ಪೀಠವು ಮಣಿಪಾಲದ ಡಾ| ಗಂಗೂಬಾಯಿ ಹಾನಗಲ್ ಸಭಾಂಗಣದಲ್ಲಿ ಆಯೋಜಿಸಿದ ಅಡುಗೆ ಮನೆ ಸಾಹಿತ್ಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಅಡುಗೆ ಒಂದು ಉತ್ತಮ, ಪರಿಣಾಮಕಾರಿ ಕಲೆ. ಮಹಿಳೆಯರಿಗೆ ಕೆಲವೊಮ್ಮೆ ಜೈಲಿನ ಕಟ್ಟುಪಾಡಿನಂತೆ ಕಾಣುತ್ತದೆ. ಅದರಿಂದಲೇ ಆತ್ಮಹತ್ಯೆ, ಬೆಂಕಿ ಅವಘಡಗಳು ಸಂಭವಿಸುತ್ತವೆ. ಆಧುನಿಕ ಸಮಾಜದಲ್ಲಿ ಮಹಿಳೆ ಹಾಗೂ ಪುರುಷ ಇಬ್ಬರೂ ಸಮಾನವಾಗಿ ಅಡುಗೆ ಕೋಣೆಯಲ್ಲಿ ಪಾಲ್ಗೊಳ್ಳುವಂತಾಗಲಿ ಎನ್ನುವ ಆಶಯ ವ್ಯಕ್ತಪಡಿಸಿದರು.
ಅಡುಗೆ ಮನೆ ಪ್ರೇರಣೆ: ನಟಿ, ರಂಗಕರ್ಮಿ ಅರುಂಧತಿ ನಾಗ್ ಮಾತನಾಡಿ, ನಾನು ನಾಟಕ, ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಗಳಿಸಲು, ಉತ್ತಮ ಸಾಧನೆ ಮಾಡಲು ಅಡುಗೆ ಮನೆಯೇ ಪ್ರೇರಣೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ವಿ. ವಿ. ಸಹ ಕುಲಾಧಿಪತಿ ಡಾ| ಎಚ್. ಎಸ್. ಬಲ್ಲಾಳ್ ಮಾತನಾಡಿ, 21ನೇ ಶತಮಾನ ಎನ್ನುವುದು ಮಹಿಳಾ ಶತಮಾನ ಎಂದೇ ಹೆಸರಾಗಿದೆ.
ಶಿಕ್ಷಣ, ವೈದ್ಯಕೀಯ, ಸಾಹಿತ್ಯ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಅಡುಗೆಯಲ್ಲಿ ಮಹಿಳೆಯರು ಮಾತ್ರವಲ್ಲ. ಯುವಕರೂ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಸಾಹಿತ್ಯಕ್ಕೂ ಅಡುಗೆ ಮನೆಗೂ ಆತ್ಮೀಯ ಸಂಬಂಧವಿದೆ ಎಂದರು.
ಮಣಿಪಾಲ ವಿ. ವಿ.ಯ ಡಾ| ಟಿಎಂಎ ಪೈ ಭಾರತೀಯ ಸಾಹಿತ್ಯ ಪೀಠಾಧ್ಯಕ್ಷೆ ವೈದೇಹಿ ಉಪಸ್ಥಿತರಿದ್ದರು. ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ವರದೇಶ್ ಹಿರೇಗಂಗೆ ಸ್ವಾಗತಿಸಿದರು. ಅನಿತಾ ಕಾರ್ಯಕ್ರಮ ನಿರ್ವಹಿಸಿದರು.