ನೀರ್ಚಾಲು: ಕಾಲಕಾಲಕ್ಕೆ ಕಾವ್ಯಮಾರ್ಗ ಬದಲಾಗಿದೆ. ನವ್ಯ ಪಂಥದ ಬಳಿಕ ನವ್ಯೋತ್ತರ ಎಂಬ ಕಾವ್ಯ ಪ್ರಕಾರ ಬಂದಿದ್ದರೂ ಅದಕ್ಕೆ ದೊಡ್ಡ ಶಕ್ತಿ ಕೂಡಿ ಬರಲಿಲ್ಲ. ಈಗ ಹೊಸ ತಲೆಮಾರಿನ ಕವಿಗಳು ಅಲ್ಲಲ್ಲಿ ಶಕ್ತಿಯುತವಾಗಿ ಕಾವ್ಯ ರಚನೆ ಮಾಡುತ್ತಿದ್ದರೂ ಅವರೆಲ್ಲ ದ್ವೀಪಗಳಂತೆ ಬೇರೆ ಬೇರೆಯಾಗಿ ಬರೆಯುತ್ತಿರುವುದರಿಂದ ಅದಕ್ಕೆ ಶಕ್ತಿ ಕೂಡಿ ಬರಲಿಲ್ಲ. ಸಂವಾದ, ಚರ್ಚೆಗಳಿಂದ ಕಾವ್ಯ ಬೆಳೆಯಬೇಕಾಗುತ್ತದೆ. ಅದಕ್ಕೆ ಕಮ್ಮಟಗಳು ತೀರ ಅಗತ್ಯ. ಆಗ ವಾಟ್ಸ್ಯಪ್, ಫೇಸ್‌ಬುಕ್‌ಗಳಲ್ಲಿ ಬರೆಯುತ್ತಿರುವ ಯುವ ಕವಿಗಳಿಗೆ ಸರಿಯಾದ ಮಾರ್ಗದರ್ಶನ ಸಿಗುತ್ತದೆ ಎಂದು ಹಿರಿಯ ಕವಿ, ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ| ವಸಂತಕುಮಾರ ಪೆರ್ಲ ಅವರು ಹೇಳಿದರು.
ಕೊಲ್ಲಂಗಾನದ ಅನಂತಶ್ರೀಯಲ್ಲಿ ಜರಗಿದ ಗಡಿನಾಡ ಬೆಳದಿಂಗಳ ಬೆಳಕು ಕಾರ್ಯಕ್ರಮದ ಬಹುಭಾಷಾ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಮ್ಮಟಗಳಲ್ಲಿ ಕವಿಗಳಿಗೆ ಸರಿಯಾದ ಮಾರ್ಗ ದರ್ಶನ ಸಿಗುತ್ತದೆ. ಪೂರಕ ವಾತಾವರಣ ನಿರ್ಮಾಣವಾಗುತ್ತದೆ. ಕವಿಗಳ, ಸಾಹಿತಿಗಳ ಸಂಘಟನೆ ನಿರ್ಮಾಣವಾಗಿ ಸಾಹಿತ್ಯ ರಚನೆಗೆ ಬಲ ಬರುತ್ತದೆ ಎಂದು ಡಾ| ಪೆರ್ಲ ಅವರು ಹೇಳಿದರು.
ಕಾರ್ಯಕ್ರಮದ ಸಂಯೋಜಕ ನಿವೃತ್ತ ಪ್ರಾಧ್ಯಾಪಕ ಪ್ರೊ|ಎ.ಶ್ರೀನಾಥ್ ಸ್ವಾಗತಿಸಿದರು. ಕವಿಗಳಾದ ಸುರೇಶ್ ನೆಗಳಗುಳಿ, ಕೆ.ಶೈಲಾ ಕುಮಾರಿ, ಸತ್ಯವತಿ ಕೊಳಚಪ್ಪು, ವೆಂಕಟ ಭಟ್ ಎಡನೀರು, ಬಾಲ ಮಧುರಕಾನನ, ಸಂಧ್ಯಾಗೀತಾ, ಗಣೇಶ್ ಪೈ ಬದಿಯಡ್ಕ, ಗುಣಾಜೆ ರಾಮಚಂದ್ರ ಭಟ್, ಪ್ರಸನ್ನಕುಮಾರಿ, ವಿದ್ಯಾಗಣೇಶ್, ಗಣಪತಿ ಭಟ್ ಮಧುರಕಾನನ, ರವೀಂದ್ರನ್ ಪಾಡಿ, ಮೊಹಮ್ಮದ್ ಅಜೀಮ್, ಪರಿಣಿತಾ ರವಿ, ಚೇತನಾ ಕುಂಬಳೆ ಮೊದಲಾದವರು ವಿವಿಧ ಭಾಷೆಗಳ ಕವಿತೆಗಳನ್ನು ಮಂಡಿಸಿದರು.
ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಗಡಿನಾಡಾದ ಕಾಸರಗೋಡಿನ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ತಮ್ಮ ಕವಿತೆಗಳಲ್ಲಿ ಹಿಡಿದಿಟ್ಟ ಕವಿಗಳನ್ನು ಅವರು ಶ್ಲಾಘಿಸಿದರು.
ಕಾರ್ಯಕ್ರಮದ ಅಂಗವಾಗಿ ಮಂಗಳೂರಿನ ನೃತ್ಯಪಟು ವಿದುಷಿ ಅಯನಾ ಪೆರ್ಲ ಅವರಿಂದ ಭರತನಾಟ್ಯ ಆಯೋಜನೆಗೊಂಡಿತ್ತು. ಪುರು ಷೋತ್ತಮ ಭಟ್ ಪುದ್ಕೋಳಿ ಕಾರ್ಯಕ್ರಮ ನಿರೂಪಿಸಿದರು. ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಕಾರ್ಯದರ್ಶಿ ಅಖೀಲೇಶ್ ವಂದಿಸಿದರು.