Advertisement
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿರುವ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಸೋಮವಾರ ನಡೆದ ಗೋಷ್ಠಿಯಲ್ಲಿ ಮಹಾಕವಿ ಷಡಕ್ಷರ ದೇವನನ್ನು ಕುರಿತು ಅವರು ಮಾತನಾಡಿದರು.
Related Articles
Advertisement
ಈತನ ತನ್ನ ಕಾಲದ ಚಂಪೂ ಕವಿಗಳಿಗೆ ಮಾರ್ಗದರ್ಶಕನಾದ. ಈತನಿಂದ ಪ್ರಭಾವಕ್ಕೊಳಗಾಗಿ ಅನೇಕ ಕವಿಗಳು ಚಂಪೂವಿನಲ್ಲಿ ಸಾಹಿತ್ಯ ಬರೆಯಲು ಆಸಕ್ತಿ ವಹಿಸಿದರು. ಕನ್ನಡ ಚಂಪೂ ಮಾಗಧಲಿ ಪಂಪ ಮೊದಲಿಗನಾದರೆ, ಷಡಕ್ಷರಿ ಕೊನೆಯವನು ಎಂದು ಹೇಳಿದರು.
ಮಲೆಯೂರು ದೇವಚಂದ್ರನನ್ನು ಕುರಿತು ಮಾತನಾಡಿದ ಸಹ ಪ್ರಾಧ್ಯಾಪಕ ಎ.ಎಂ. ಶಿವಸ್ವಾಮಿ, ದೇವಚಂದ್ರನ ರಾಜಾವಳಿ ಕಥೆ ಭಾರತದ ರಾಜರ ಕತೆಗಳು, ಮಹಾಭಾರತ, ರಾಜರ ಚೆರಿತ್ರೆಗಳು, ಸಾಮಾನ್ಯ ನೀತಿ ಕತೆಗಳು ಎಲ್ಲವನ್ನೂ ತಿಳಿಸುವ ಮಹತ್ವದ ಕೃತಿಯಾಗಿದೆ ಎಂದರು.
ಜೈನ ಧರ್ಮದಿಂದ ವೈದಿಕ ಧರ್ಮಕ್ಕೆ: ಚಾಮರಾಜನಗರ ಜಿಲ್ಲೆಯ ಮಲೆಯೂರು ಗ್ರಾಮದ ಜೈನಕವಿ ದೇವಚಂದ್ರ 18 ನೇ ಶತಮಾನದ ಅಂತ್ಯದಿಂದ 19ನೇ ಶತಮಾನದ ಆದಿಯವರೆಗೆ ಜೀವಿಸಿದ್ದ. ಆತ ಲೋಕಸೃಷ್ಟಿಯ ಸಂಗತಿಯಿಂದ ಮೊದಲುಗೊಂಡು ಜಾತಿಯ ಬಗೆಗಿನ ಎಲ್ಲ ಸಂಗತಿಗಳನ್ನು ತನ್ನ ಕೃತಿಯಲ್ಲಿ ಹೇಳಿದ್ದಾನೆ.
ಈ ಕೃತಿಯಲ್ಲಿ ಸಾಮಾನ್ಯ ಚೆರಿತ್ರೆಗೆ ತದ್ವಿರುದ್ಧವಾದ ಅನೇಕ ವಿಚಾರಗಳನ್ನು ಹೇಳಲಾಗಿದೆ. ರಾಮಾನುಜಾಚಾರ್ಯರು ಜೈನ ಮತದವರನ್ನು ವೈಷ್ಣವರಾಗಿ ಪರಿವರ್ತಿಸಲು, ಶಂಕರಾಚಾರ್ಯರು ಜೈನ ಧರ್ಮದಿಂದ ವೈದಿಕ ಧರ್ಮಕ್ಕೆ ಪರಿವರ್ತಿಸಲು ಬಂದವರು ಎಂದು ತಿಳಿಸಿದ್ದಾನೆ ಎಂದರು.
ಸ್ವಾರಸ್ಯಕರವಾದ ಕತೆ: ಸಾಹಿತ್ಯ ಮತ್ತು ಸಮಾಜ ಶಾಸ್ತ್ರೀಯ ಅಧ್ಯಯನಕ್ಕೆ ರಾಜಾವಳಿ ಕಥೆ ಒಂದು ಆಕರ ಗ್ರಂಥವಾಗಿದೆ. ಸುಲಲಿತವಾದ ತಿಳಿಗನ್ನಡದಲ್ಲಿ, ರೋಚಕವಾದ ಸ್ವಾರಸ್ಯಕರವಾದ ಕತೆಗಳನ್ನು ಹೇಳಲಾಗಿದೆ. ತನ್ನ ಕೃತಿಯಲ್ಲಿ ವೃದ್ಧರನ್ನು ತಾಯಿ ತಂದೆಯರನ್ನು ಚೆನ್ನಾಗಿ ನೋಡಿಕೊಳ್ಳುವುದೇ ಧರ್ಮ ಎಂಬ ನೀತಿಯನ್ನು ಹೇಳಿದ್ದಾನೆ ಎಂದು ಶಿವಸ್ವಾಮಿ ತಿಳಿಸಿದರು.
ಕಾವ್ಯದಲ್ಲಿ ಬದುಕು ಮೂಡಿದೆ: ಸಂಚಿ ಹೊನ್ನಮ್ಮಳ ಕುರಿತು ಉಪನ್ಯಾಸಕಿ ಜೆ. ಪುಷ್ಪಲತಾ ಮಾತನಾಡಿ, ಯಳಂದೂರಿನ ಸಂಚಿ ಹೊನ್ನಮ್ಮ ನಮ್ಮ ಜಿಲ್ಲೆಯ ಮೊದಲ ಕವಯತ್ರಿ. 16ನೇ ಶತಮಾನದಲ್ಲಿದ್ದ ಈಕೆ ಚಿಕ್ಕದೇವರಾಜ ಒಡೆಯರ್ ಅವರ ಪಟ್ಟದರಸಿ ದೇವಾಜಮ್ಮಣ್ಣಿಯವರ ಬಾಲ್ಯದ ಗೆಳತಿಯಾಗಿದ್ದಳು. ಹಾಗಾಗಿ ದೇವಾಜಮ್ಮಣ್ಣಿಯವರು ಈಕೆಗೆ ವಿದ್ಯಾಭ್ಯಾಸ ಕೊಡಿಸಿದರು. ಶಿಕ್ಷಣ ಪಡೆದ ಈಕೆ ಕಾವ್ಯ ಬರೆಯಲಾರಂಭಿಸಿದಳು ಎಂದರು.
ಹೊನ್ನಮ್ಮ ಬರೆದ ಹದಿಬದೆಯ ಧರ್ಮ ಆ ಕಾಲದ ಹೆಣ್ಣು ಮಕ್ಕಳ ಬದುಕನ್ನು ಕಾವ್ಯದಲ್ಲಿ ಮೂಡಿಸಿದೆ. ಅಂದಿನವರಿಗೆ ಸಾಂಸಾರಿಕ ಬದುಕು ಪ್ರಧಾನವಾಗಿತ್ತು. ಉತ್ತಮ ನಡತೆ, ಜಾಣತನ, ಸಹನಾಶೀಲತೆ, ಉದಾರತೆ, ಸ್ನೇಹಭಾವ, ಬಂಧು ಪ್ರೀತಿ, ಆದರಾತಿಥ್ಯಗುಣವನ್ನು ಗೃಹಿಣಿಯಾದವಳು ಹೊಂದಿರಬೇಕು ಎಂದು ತನ್ನ ಕೃತಿಯಲ್ಲಿ ಹೇಳಿದ್ದಾಳೆ.
ಸಲಹೆ: ಆ ಕಾಲದಲ್ಲೇ ಹೆಣ್ಣು ಗಂಡೆಂಬ ಭೇದವನ್ನು ಆಕೆ ಖಂಡಿಸಿದ್ದಾಳೆ. ಕುವರಿಯಾದರೇನು, ಕುವರನಾದರೇನು? ಎಂದು ಪ್ರಶ್ನಿಸಿದ್ದಾಳೆ. ನಿಮ್ಮ ಹೆಣ್ಣನ್ನು ಹಣದಾಸೆಗೆ ಯಾವನಿಗೋ ಮದುವೆ ಮಾಡಬೇಡಿ. ಜವ್ವನಿಗ, ಗುಣವಂತ ನಿಗೆ ಮದುವೆ ಮಾಡಿ ಎಂದು ಸಲಹೆ ನೀಡುತ್ತಾಳೆ ಎಂದು ಪುಷ್ಪಲತಾ ಹೇಳಿದರು.
ಗಮಕಿ ವಾಚನ: ಗೋಷ್ಠಿಯಲ್ಲಿ ಆಯಾ ಕವಿಯ ಕಾವ್ಯದ ಸಾಲುಗಳನ್ನು ಗಮಕಿಗಳು ವಾಚಿಸಿದರು. ಷಡಕ್ಷರದೇವನ ಕಾವ್ಯವನ್ನು ಕೆ.ಎಂ. ವೀರಶೆಟ್ಟಿ ಗಮಕದ ಮೂಲಕ ವಾಚಿಸಿದರು. ಸಂಚಿ ಹೊನ್ನಮ್ಮನ ಹದಿಬದೆಯ ಧರ್ಮವನ್ನು ವಿದುಷಿ ಪಿ. ಶ್ರೀಮತಿದೇವಿ ಗಮಕದ ಮೂಲಕ ಪ್ರಸ್ತುತ ಪಡಿಸಿದರು. ದೇವಚಂದ್ರನ ರಾಜಾವಳಿ ಕಥೆಯನ್ನು ಉಪನ್ಯಾಸಕ ಮಹದೇವಪ್ರಭು ವಾಚಿಸಿದರು.
ವಿನೂತನ ಪ್ರಯತ್ನ: ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಕನ್ನಡ ಪ್ರಾಧ್ಯಾಪಕಿ ಡಾ. ಎಚ್.ಟಿ. ಶೈಲಜಾ ಮಾತನಾಡಿ, ವಿಚಾರಗೋಷ್ಠಿಯಲ್ಲಿ ಉಪನ್ಯಾಸ ಮಾತ್ರವಲ್ಲದೇ ಗಾಯನ, ವಾಚನ, ಗಮಕ ಏರ್ಪಡಿಸಿರುವುದು ವಿನೂತನ ಪ್ರಯತ್ನ ಎಂದು ಶ್ಲಾ ಸಿದರು. ಷಡಕ್ಷರಿ, ಸಂಚಿಹೊನ್ನಮ್ಮ, ಮಲೆಯೂರು ದೇವಚಂದ್ರ ಜಿಲ್ಲೆಯ ಕವಿಗಳೆಂಬ ಹೆಗ್ಗಳಿಕೆ ಮಾತ್ರವಲ್ಲದೇ, ಇವರು ಕನ್ನಡ ಸಾಹಿತ್ಯದಲ್ಲೂ ಪ್ರಮುಖ ಸ್ಥಾನವನ್ನು ಪಡೆದವರು. ಇಂಥವರ ಬಗ್ಗೆ ಗೋಷ್ಠಿಯನ್ನು ಏರ್ಪಡಿಸಿರುವುದು ಪ್ರಶಂಸನೀಯ ಎಂದರು.
ಸಿದ್ದಾರ್ಥ ಪದವಿ ಕಾಲೇಜು ಪ್ರಾಂಶುಪಾಲ ಎನ್. ಮಹದೇವಸ್ವಾಮಿ ಆಶಯ ನುಡಿಗಳನ್ನಾಡಿದರು. ಸಮ್ಮೇಳನಾಧ್ಯಕ್ಷ ಡಾ. ಶಿವರಾಜಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್. ವಿನಯ್, ನರೇಂದ್ರನಾಥ, ಪ್ರಭುಸ್ವಾಮಿ, ಉಮಾಶಂಕರ್, ನಂದೀಶ್ ಉಪಸ್ಥಿತರಿದ್ದರು.