Advertisement

ಕಾವ್ಯ-ಕಸುಬುಗಾರಿಕೆ

12:30 AM Jan 20, 2019 | |

ಪ್ರಕೃತಿ-ಪರಿಸರದ ಕೆಲವು  ದೃಶ್ಶಿಕೆಗಳನ್ನು ಹಾಗೂ ನವುರು ವಿದ್ಯಮಾನಗಳನ್ನು ಪ್ರತಿಮೆ/ರೂಪಕಗಳನ್ನಾಗಿ ಬಳಸಿಕೊಂಡು ತನು-ಮನಗಳ ನಲಿವು-ಸಂಕಟಗಳನ್ನು ಸಾಮಾಜಿಕ-ಸಾಂಸ್ಕೃತಿಕ ಪಾತಳಿಯಲ್ಲಿರಿಸಿ ಅಳೆದು ತೂಗಿ ಮಾತಾಡುವ 83 ಕವಿತೆಗಳನ್ನು ತನ್ನ ಈ ಪ್ರಥಮ ಸಂಕಲನದಲ್ಲಿ ನೀಡಿರುವ ಸುಜಾತಾ ಅವರು ನೋವ | ಕುಡಿದು ಅರಳಿದ| ಬಣ್ಣ ಬಣ್ಣದ ಹೂ ಸಾಲು ಹಾಗೂ ಮೆರವಣಿಗೆ ಮುಗಿದು | ಸಾಲದ ಬದುಕಿನ ಸಾವ ಕಾಯುವ ಸಾಲು ಇವೆರಡನ್ನೂ ಮುಖಾಮುಖೀ ಯಾಗಿಸುವ ಪ್ರಯತ್ನದಲ್ಲಿ ಬಹುತೇಕ ಯಶಸ್ವಿಯಾಗಿರುವುದು ಗಮನಾರ್ಹವಾಗಿದೆ. ಗಾಳಿಯಂತೆ ಪ್ರೀತಿಸಬೇಕೆಂಬ, ಬೆಟ್ಟದಂತೆ “ಬಯಲಾಗ’ಬೇಕೆಂಬ, ನ್ಯೂಯಾರ್ಕಿನ ನಾಗರಿಕತೆಯ ಪೊಗರುತನದಲ್ಲೂ ತನ್ನೂರ ಮಂಜುಹನಿ ಎಳೆಬಿಸಿಲಲ್ಲಿ ಹೊಳೆದುದನ್ನು ಕಾವ್ಯ ನೆನಪಿಸಬೇಕೆಂಬ ಆಶಯ ಈ ಕವಯತ್ರಿಯದು. 

Advertisement

ಕೀಟ ಹಿಡಿಯುವ ಕಲೆಯನ್ನು ಬಲ್ಲ ಹೂವನ್ನು ಅರಳಿಸಲು ಹೊರಟ ಬಳ್ಳಿಯ ಇದಿರಲ್ಲಿ ಮರದಿಂದ ಮರಕ್ಕೆ “ಡೇರೆ’ ಕಟ್ಟುವುದರಲ್ಲಿ ಮಗ್ನವಾಗಿರುವ ಕಾಡುಜೇಡರ ತಾಜಾ ರೂಪಕವೊಂದನ್ನು ಸಂಕಲನದ ಶೀರ್ಷಿಕೆ ಕವಿತೆಯಲ್ಲಿ ನಮ್ಮ ಕಣ್ಣೆದುರು ಹಿಡಿಯುವ ಮೂಲಕ ಈ ಕವಯಿತ್ರಿ, ಆ ಹೂವು ಅರಳುವ ಹಂತದಲ್ಲಿದ್ದರೂ ಜೇಡ ಸದ್ಯ ತೋರಿಸುತ್ತಿರುವ ಜೀವನೋತ್ಸಾಹವನ್ನು ಚಮತ್ಕಾರಿಕವಾಗಿ ಧ್ವನಿಸಿದ್ದಾರೆ. ಹಸಿರು ಮತ್ತು ನೋವು ಕವಿತೆಯೂ ಹೀಗೆ ಹುಟ್ಟು-ಸಾವುಗಳ ಪೈಪೋಟಿಯೆದುರಲ್ಲಿ “ಸೋತರೂ ಗೆದ್ದೇನು’ ಎನ್ನುವ ಮನಸ್ಸುಗಳ ಆಶಾ ನಿರೀಕ್ಷೆಗಳ ಅಸಂಗತತೆಯನ್ನು ಹಾಗೂ ಅರ್ಥಪೂರ್ಣತೆಯನ್ನು ಧ್ಯಾನಿಸುವ ಇನ್ನೊಂದು ಮುಖ್ಯ ರಚನೆ ಯಾಗಿದೆ. ಸುಜಾತಾ ಅವರ ಕಾವ್ಯ- ಕಸುಬು ಗಾರಿಕೆಯ ಮೂಲ ಪ್ರೇರಣೆ ಕೇವಲ ಪರಿಸರಪ್ರೀತಿ ಮಾತ್ರವಲ್ಲ , ಇತಿಹಾಸ ಹಾಗೂ ಪುರಾಣದ ಕೆಲವು ಸಿದ್ಧ ಪ್ರತಿಮೆಗಳನ್ನು ಭಂಜಿಸಿ, ಪುರುಷಪ್ರಧಾನ ವರ್ತನೆಯನ್ನು ಪ್ರಶ್ನಿಸುವ ಹಾಗೂ ತಾಳ್ಮೆಯಿಂದ ತಿಳಿಹೇಳುವ ತಾಯ್ತನದ್ದೂ ಆಗಿದೆ. ಇದರ ಜತೆಜತೆಗೇ ಸೃಷ್ಟಿ ಮೂಲದಲ್ಲಿರುವ ಅದಮ್ಯ ಜೀವಕಾಮದ ನಿನಾದವನ್ನು ಹೊಮ್ಮಿಸುವ ಮಾಗಿದ ರಚನೆಗಳೂ ಇಲ್ಲಿವೆ.

ಕಾಡುಜೇಡ ಹಾಗೂ ಬಾತುಕೋಳಿ ಹೂ
(ಕವನ ಸಂಕಲನ)
ಲೇ.: ಎಚ್‌.ಆರ್‌. ಸುಜಾತಾ
ಪ್ರ.: ಪಲ್ಲವ ಪ್ರಕಾಶನ, ಚನ್ನಪಟ್ಟಣ ಅಂಚೆ, 
ವಯಾ-ಎಮ್ಮಿಗನೂರು, ಬಳ್ಳಾರಿ-583113
ಮೊಬೈಲ್‌: 9480353507
ಮೊದಲ ಮುದ್ರಣ: 2018   ಬೆಲೆ: ರೂ. 200

-ಜಕಾ

Advertisement

Udayavani is now on Telegram. Click here to join our channel and stay updated with the latest news.

Next