Advertisement
ಬಿ.ಎ.ಯಲ್ಲಿ ನಮ್ಮ ಕಾಲೇಜಿನಲ್ಲಿ ನಾವು ಮೂರ್ನಾಲ್ಕು ಜನ ಮರಿಕವಿಗಳಿ¨ªೆವು. ವಾರ್ಷಿಕ ಸಂಚಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಮ್ಮ ಕವಿತೆಗಳು ಆಗಾಗ ಬೆಳಕು ಕಾಣುತ್ತಿದ್ದವು. ಆಗ ಪ್ರಸಿದ್ಧ ಮರಿಕವಿಗಳಾದ ನಮ್ಮನ್ನು ಎಲ್ಲರೂ ಕೆಳಗೆ ಮೇಲೆ ನೋಡುತ್ತಿದ್ದರು. ನಾವು ಸರಿಯಾಗಿ ಪಠ್ಯಪುಸ್ತಕಗಳನ್ನು ಓದದೆ ಕಾವ್ಯಲೋಕದಲ್ಲಿ ವಿಹರಿಸುತ್ತ ಇರುತ್ತಿ¨ªೆವು. ಬಹುಶಃ ಪಠ್ಯಪುಸ್ತಕಗಳನ್ನು ಸರಿಯಾಗಿ ಓದಿ ಪರೀಕ್ಷೆ ಬರೆದು ಹೆಚ್ಚಿನ ಅಂಕ ಶೇಖರಿಸಿ ಅನ್ನ ಸಂಪಾದಿಸಲು ಒಂದು ನೌಕರಿ ಹಿಡಿಯುವ ಬದಲು ಈ ಮರಿಕವಿಗಳೆಲ್ಲಿ ಆಕಾಶದ ಆ ಮಗ್ಗುಲಕ್ಕಿರುವ ಅಪ್ಸರೆಯರನ್ನು ಹುಡುಕಿಕೊಂಡು ಹಾರಿಹೋಗಿ ಬಿಡುತ್ತಾರೆಂಬ ದೂರಾಲೋಚನೆಯಿಂದ ನಮ್ಮ ಕನ್ನಡ ಪಂಡಿತರು ನಮ್ಮ ತಲೆಗೆ ಕುಟ್ಟಿ ನಿರುತ್ಸಾಹಗೊಳಿಸಿ ಕುಳ್ಳಿರಿಸುತ್ತಿದ್ದರೆಂದು ತೋರುತ್ತದೆ. ಹೀಗಾಗಿ ಬಿ.ಎ. ಮೂರನೇ ವರ್ಷಕ್ಕೆ ಬರುವುದರೊಳಗೆ ನನ್ನನ್ನುಳಿದು ಉಳಿದ ಮರಿಕವಿಗಳು ಸರಿಯಾದ ಸಹೃದಯರು ಸಿಗದೆ, ಕನಿಷ್ಠ ಒಂದು ಹುಡುಗಿಯೂ ಬುಟ್ಟಿಗೆ ಬೀಳದೆ ಹೆಚ್ಚುಕಡಿಮೆ ಬೀದಿಪಾಲಾದರು. ನಾನೊಬ್ಬ ಮಾತ್ರ ಬಿಡದೆ ಕವಿತೆ ಬರೆಯುತ್ತ ಸಾಗಿದೆ. ನೂರಾರು ಕವಿತೆಗಳಾದ ಮೇಲೆ ಒಂದು ಕವನ ಸಂಕಲನ ತರಬೇಕೆಂದು ಯೋಚಿಸಿ ಗೆಳೆಯರೊಂದಿಗೆ ಸಮಾಲೋಚಿಸಿದಾಗ ಅವರು ಒನ್ ಬೈ ಟು ಚಾ ಗಿಟ್ಟುವ ಆಸೆಯಲ್ಲಿ ಹುರಿದುಂಬಿಸಿದರು. ಇದೇ ವಿಚಾರವನ್ನು ನಮ್ಮ ಕಾಲೇಜಿನ ಕನ್ನಡ ಪಂಡಿತರ ಮುಂದೆ ಹೇಳಲಾಗಿ ಅವರು “ನೋ ನೋ…’ ಎಂದು ಬಿಟ್ಟರು!
Related Articles
Advertisement
ಸಾವರಿಸಿಕೊಂಡು, “”ಹಜರತಅಲಿಯವರೆ, ನಿಮ್ಮ ಕಾರ್ಯಕ್ರಮ ನಿಜವಾಗಿಯೂ ಇವತ್ತೇ ಇದೆಯೇ? ನನಗೊಂದು ಪೂರ್ವನಿಗದಿತ ಕಾರ್ಯಕ್ರಮವಿದೆಯಲ್ಲ. ಮೈಸೂರಿಗೆ ನಾನು ಹೋಗಲೇಬೇಕು. ದಯವಿಟ್ಟು ತಪ್ಪು ತಿಳಿಯಬೇಡಿ. ಯಾರಾದರೂ ಸಿಗುತ್ತಾರೆ. ಕರೆದು ಪುಸ್ತಕ ಬಿಡುಗಡೆ ಮಾಡಿ. ಬಿಡುಗಡೆಯಾದ ನಂತರ ನಿಮ್ಮ ಪುಸ್ತಕದ ಬಗ್ಗೆ ಪತ್ರಿಕೆಗೆ ವಿಮರ್ಶೆ ಬರೆಯುತ್ತೇನೆ.ಶುಭವಾಗಲಿ” ಎಂದು ಹೇಳಿ ಹೊರಟೇಬಿಟ್ಟರು; ನಾನೂ ನನ್ನ ಕಾರ್ಯಕ್ರಮವೂ ಏನೂ ಅಲ್ಲವೇ ಅಲ್ಲವೆನ್ನುವಂತೆ ! ನನ್ನ ಮೈಯಲ್ಲಿ ಏಕದಮ್ 110 ಡಿಗ್ರಿ ಉರಿ ಬಂದವು. ಆದರೆ ಏನು ಮಾಡುವುದು, ಕವಿಗಳೂ ಸಾಹಿತಿಗಳು ನಿರಂಕುಶರಲ್ಲವೆ? ಸಾಹಿತ್ಯ-ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಗುತ್ತಿಗೆ ಪಡೆದವರಲ್ಲವೆ? ಈ ಉದ್ದಂಗಿ ಸಾಹಿತಿಗಳಿಗೆ ಎಂಟು ದಿನ ಮುಂಚೆಯೇ ಹೇಳಿ ಆಮಂತ್ರಣ ಪತ್ರಿಕೆ ತಲುಪಿಸಿದ್ದರೂ ನನ್ನ ಕಾರ್ಯಕ್ರಮ ಪೂರ್ವನಿಯೋಜಿತವಾಗಿ ಕಾಣಲಿಲ್ಲ. ಉದ್ದಂಗಿ ಸಾಹಿತಿಗಳು ಹೀಗೆ ಐನ್ ವಕ್ತದಲ್ಲಿ ಕೈಕೊಟ್ಟ ನಂತರ ಎರಡೇ ತಾಸಿನಲ್ಲಿ ಅಧ್ಯಕ್ಷತೆಗೆ ಇನ್ನೊಬ್ಬರನ್ನು ಒಪ್ಪಿಸುವ ತುರ್ತು ಬಂತು. ದೇವರ ದಯೆಯೆಂಬಂತೆ ಮುಜರಾಯಿ ಇಲಾಖೆಯಲ್ಲಿ ಸೇವೆಯಲ್ಲಿರುವ ನನ್ನ ಗೆಳೆಯರೊಬ್ಬರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲು ಒಪ್ಪಿಕೊಂಡು ಸರಿಯಾದ ಸಮಯಕ್ಕೆ ಕಾರ್ಯಕ್ರಮಕ್ಕೆ ಬಂದು ಸುಂದರವಾಗಿ ಪುಸ್ತಕ ಬಿಡುಗಡೆಗೊಳಿಸಿದರು. ಯಾವುದೇ ಲೆವೆಲ್ ಮೆಯಿಂಟೇನ್ ಮಾಡದೆ ಅದೂ-ಇದೂ ಎನ್ನದೆ ಘನತೆ-ಗೌರವಗಳ ಲೆಕ್ಕಹಾಕದೆ ಐತವಾರದ ತಮ್ಮ ಖಾಸಗಿ ಕಾರ್ಯಕ್ರಮಗಳನ್ನು ಬದಿಗೊತ್ತಿ ಕರೆದ ತಕ್ಷಣ ಒಪ್ಪಿಕೊಂಡು ಬಂದ ಇಂಥ ಸಂವೇದನಾಶೀಲ ಅಧಿಕಾರಿ ಮಿತ್ರರ ಸಂತತಿ ಸಾವಿರವಾಗಲಿ ಎಂದು ಹಾರೈಸುವೆ.
ದೇವರನ್ನು ಆತುಕೊಂಡವರಿಗೆ ಆತ ಸಹಾಯ ಮಾಡುತ್ತಾನೆಂಬಂತೆ ಸರಿಯಾದ ಸಮಯಕ್ಕೆ ಕಾರ್ಯಕ್ರಮ ಪ್ರಾರಂಭವಾಯಿತು. ನನ್ನ ಗೆಳೆಯರೆಲ್ಲರೂ ಬಂದು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಬಹುದೂರದಿಂದ ಸರಿಯಾದ ಸಮಯಕ್ಕೆ ಆಗಮಿಸಿದ್ದ ಬಿಜಾಪುರದ ಸಾಹಿತಿಗಳು ಸೊಂಟದ ಕೆಳಗೆ ಜಾರುತ್ತಿದ್ದ ಇನ್ ಪ್ಯಾಂಟನ್ನು ಮೇಲಕ್ಕೆ ಎಳೆದುಕೊಳ್ಳುತ್ತ ಪುಸ್ತಕ ಪರಿಚಯ ಮಾಡಲು ನಿಂತರು. ಕಾವ್ಯದ ಬಗೆಗೆ ಅಷ್ಪೇನೂ ತಿಳಿಯದ ಜನ ಮುಂದೆ ಆಸೀನರಾಗಿದ್ದರು. ಎಲ್ಲವ್ವನ ಗುಡ್ಡಕ್ಕೆ ಬಂದಿದ್ದ ಬಿಜಾಪುರದ ಸಾಹಿತಿಗಳು ಪುಸ್ತಕ ಪರಿಚಯವೆಂಬ ಸತ್ಯವ್ವನ ಜೋಗುಳಬಾವಿಯಲ್ಲಿ ಮೊದಲು ಮುಳುಗು ಹಾಕದೆ ಹಾಗೇ ಏಳು ಕೊಳ್ಳಗಳನ್ನು ಸುತ್ತತೊಡಗಿದರು! ಬಹಳ ಹೊತ್ತಿನ ನಂತರ ಎಚ್ಚರವಾದವರಂತೆ ಬಂದು ಒಮ್ಮೆ ಮುಳುಗೆದ್ದು ಈ ಕವನ ಸಂಕಲನದಲ್ಲಿ ಸುಮಾರು ಎಂಬತ್ತರಷ್ಟು ಕವಿತೆಗಳು ಉತ್ತಮವಾಗಿವೆ ಎಂದು ಅದ್ಭುತವಾಗಿ ಘೋಷಿಸಿಬಿಟ್ಟರು. ನನ್ನ ಹೋದ ಜೀವ ಬಂದಂತಾಯಿತು.
ಬಿಜಾಪುರದ ಸಾಹಿತಿಗಳು ಹೇಳಿದ ಈ ಶೇ. 80ರಷ್ಟು ಒಳ್ಳೆಯ ಕವಿತೆಗಳಿವೆಯೆಂಬ ಮಾತು ಮಂತ್ರದಂತೆ ಕೆಲಸ ಮಾಡಿತು. ಹೀಗೆಂದು ನನಗೆ ವೈಯಕ್ತಿಕವಾಗಿ ಖಾತ್ರಿಯಾದದ್ದು ಮುಖ್ಯ ಅತಿಥಿಗಳಾಗಿದ್ದ ನಮ್ಮ ಮೇಲಧಿಕಾರಿ ಟಿಮ್ ಟಿಮ್ ಸಾಹೇಬರು ಮಾತನಾಡಲು ನಿಂತಾಗ. ಇಲ್ಲಿಯವರೆಗೆ ಬಹುಶಃ ಅವರು ನಾನೊಬ್ಬ ಥರ್ಡ್‌ಕ್ಲಾಸ್ ಅಧಿಕಾರಿ ಮತ್ತು ಕವಿಯೆಂದು ಭಾವಿಸಿದ್ದರೋ ಏನೋ! ಆದರೆ ದೊಡ್ಡ ಸಾಹಿತಿಗಳೆಲ್ಲ ನನ್ನ ಕವಿತೆಗಳನ್ನು ಹೊಗಳಿ ಶೇ. 80ರಷ್ಟು ಕವಿತೆಗಳು ಶ್ರೇಷ್ಠವಾಗಿವೆ ಎಂದುದರ ಅರ್ಥ ನಾನು ಕಾವ್ಯ ವ್ಯವಸಾಯದಲ್ಲಿ ಶೇ. 80 ಅಂಕ ಪಡೆದಂತೆ! ಶೇ. 80 ಅಂಕ ಪಡೆಯುವುದೆಂದರೆ ಡಿಸ್ಟಿಂಕ್ಷನ್ನು! ಥರ್ಡ್ ಕ್ಲಾಸ್ ಎಲ್ಲಿ ಡಿಸ್ಟಿಂಕ್ಷನ್ ಎಲ್ಲಿ! ನಮ್ಮ ಟಿಮ್ ಟಿಮ್ ಸಾಹೇಬರು ದಂಗಾಗಿ ಹೋಗಿರಬಹುದು! ಹೊಗಳಿದ್ದೇ ಹೊಗಳಿದ್ದು. ಅಲ್ಲದೆ ಸಾಹೇಬರು ಭಾಷಣದಲ್ಲಿ ಎರಡು-ಮೂರು ಸಲ “ಸ್ಸಾರಿ’ ಬೇರೆ ಕೇಳಿಬಿಟ್ಟರು! ಮೇಲಿನ ಸಾಹೇಬರಾಗಿ ಕೆಳಗಿನ ಸಾಹೇಬನಾಗಿರುವ ನನ್ನಲ್ಲಿ ಹೀಗೆ ಸ್ಸಾರಿ ಕೇಳಿದ್ದು ಅಂದಿನ ಸಭೆಯಲ್ಲಿದ್ದವರಿಗೆ ಆಶ್ಚರ್ಯ ವನ್ನುಂಟುಮಾಡುವುದರೊಂದಿಗೆ ಗೊಂದಲವನ್ನೂ ಹುಟ್ಟಿಸಿರಬಹುದು. ನನಗೇನೂ ಹಾಗೇ ಅನಿಸಲಿಲ್ಲ. ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿ¨ªಾರೆ ಪಾಪ, ಎನಿಸಿತು!
ನಾನು ಬೆಳಗಾವಿಯಲ್ಲಿ¨ªಾಗ ನಾನೂ ಅವರೂ ಒಂದೇ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದೆವು. ಅವರು ದೊಡ್ಡ ಸಾಹೇಬರಾಗಿ ಮೇಲೆ, ನಾನು ಸಣ್ಣ ಸಾಹೇಬನಾಗಿ ಕೆಳಗೆ. ನಾನು ಇನ್ನೊಬ್ಬರ ಉಸಾಬರಿಗೆ ಹೋಗದೆ ನನ್ನ ಕೆಲಸವಾಯಿತು, ನಾನಾಯಿತು ಇರುತ್ತಿ¨ªೆ. ಕವಿಯಾದ ನಾನು ಏಕಾಂತಪ್ರಿಯನಾಗಿದ್ದರಿಂದ ಬ್ಯಾಚಿನ ಇತರ ಗೆಳೆಯರೊಂದಿಗೆ ಹೆಚ್ಚಿಗೆ ಬೆರೆಯುತ್ತಿರಲಿಲ್ಲ. ಮುಖ್ಯವಾಗಿ ಅವರ ರಂಗೇರುವ ಮೂರೂಚಂಜಿಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ಅವರ ಗುಂಡು ಗೋಷ್ಠಿ, ತುಂಡು ಗೋಷ್ಠಿಗಳಂತಹ ತರತರದ ಗೋಷ್ಠಿಗಳಿಂದ ನಾನು ಗಾವುದ ದೂರವಿರುತ್ತಿ¨ªೆ. ಉತ್ತರದ ಬಯಲುಸೀಮೆಯಾದ್ಯಂತ ಪ್ರಸಿದ್ಧವಾಗಿರುವ ಬೆಳಗಾವಿ ಕ್ಲಬ್ಬಿಗೆ (ನಮ್ಮ ಟಿಮಟಿಮ ಸಾಹೇಬರು ಅಲ್ಲಿಯ ಮುಖ್ಯ ಗಿರಾಕಿಗಳು) ಒಮ್ಮೆಯೂ ಹಣಿಕಿ ಹಾಕಿದವನಲ್ಲ. ಬಹುಪತ್ನಿàವಲ್ಲಭರಾದ ಗೆಳೆಯರು ಗೋವಾ ಟೂರಿಗೆ ಕರೆದರೆಂದು ಕಟ್ಟಾ ಏಕಪತ್ನಿವ್ರತಸ್ಥನಾದ ನಾನು ಹೋಗಲಾಗುತ್ತದೆಯೇ? ಸಾಹೇಬರಿಗೆ ತಕ್ಕುದಲ್ಲದ ನನ್ನ ಎಲ್ಲ ಈ ವಿಲಕ್ಷಣ ಚರ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ನಮ್ಮ ಆಲರಾವುಂಡರ ಟಿಮ್ ಟಿಮ್ ಸಾಹೇಬರು ಈ ಒಂದೂ ಹವ್ಯಾಸವಿಲ್ಲದ ನಾನು ಇಂಥ ಈ ಒಂದು ಕಾಲದಲ್ಲಿ ಸಾಹೇಬನಾಗಲು ಅಯೋಗ್ಯನೆಂದು ಭಾವಿಸಿದ್ದರು.
ಅಲ್ಲದೆ ಸ್ವಾಭಿಮಾನಿಯಾದ ನಾನು ಅವರಿಗೆ ತಿಂಗಳು ತಿಂಗಳು ನಿಯಮಿತವಾಗಿ ಸಲ್ಲಿಕೆಯಾಗಬೇಕಿದ್ದ ಕಪ್ಪು ಕಾಣಿಕೆಗಳನ್ನು ಬೇರೆ ಸಲ್ಲಿಸುತ್ತಿರಲಿಲ್ಲ! ಇದರೊಂದಿಗೆ ಅವರು ಆಜ್ಞಾಪಿಸುತ್ತಿದ್ದ ಕಾನೂನುಬದ್ಧವಲ್ಲದ ಕೆಲಸಗಳಿಗೆ ಕಿವಿ ಕಿವುಡು, ಕಣ್ಣು ಕುರುಡು ಮಾಡಿಬಿಡುತ್ತಿ¨ªೆ. ಚಮಚಾಗಿರಿ ಮಾಡಿ ಡೊಗ್ಗುಸಲಾಮು ಹೊಡೆಯುತ್ತಿರಲಿಲ್ಲ. ಅಲ್ಲದೆ ಆರಂಭದಲ್ಲಿ ನಾನು ಬಂಡಾಯ ಕವಿಯೆಂಬುದು ಅವರಿಗೆ ತಿಳಿದಿರಲಿಲ್ಲ. ಈ ಎಲ್ಲ ಕಾರಣಗಳಿಂದಾಗಿ ನಾನು ಬೆಳಗಾವಿಯಂಥ ರಮ್ಯ ಪ್ರದೇಶಲ್ಲಿರಲು ಲಾಯಕ್ಕಲ್ಲವೆಂದು ನಿರ್ಧರಿಸಿ ನನ್ನನ್ನು ನಿಪ್ಪಾಣಿಗೆ ಎತ್ತಂಗಡಿ ಮಾಡಿಸಿದರು. ನಾನೂ ಕಮಕ್-ಕಿಮಕ್ ಎನ್ನದೆ ಪಾಲಿಗೆ ಬಂದದ್ದು ಧಾರವಾಡ ಪೇಡೆಯೆಂದು ಭಾವಿಸಿ ಸೀದಾ ನಿಪ್ಪಾಣಿಗೆ ಹೊರಟುಬಂದೆ. ಈ ಎತ್ತಂಗಡಿಯಿಂದಾಗಿ ಆನೆ ಕಾಯುವವನಿಗೆ ಆಡು ಹಚ್ಚಿದಂತಾಗಿ ಸಾಕಷ್ಟು ಸಮಯ ಸಿಗಲಾಗಿ ನಾನು ಮೊದಲ ಪುಸ್ತಕ ಪ್ರಕಟಿಸಲು ಸಿದ್ಧತೆ ಮಾಡಿದೆ! ಈ ವರ್ಗಾವಣೆ ಪ್ರಾಯೋಜಿಸಿದ ಅವರಿಗೆ ಅಪರಾಧಿಪ್ರಜ್ಞೆ ಕಾಡುತ್ತಿತ್ತೆಂದು ಕಾಣುತ್ತದೆ. ಈ ಕಾರಣದಿಂದ ಪುಸ್ತಕ ಬಿಡುಗಡೆಯ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಸಭಾಸದರಾದ ಬಹುಜನರೆದುರು ಮತ್ತೆ ಮತ್ತೆ ಕ್ಷಮೆ ಕೇಳಿದರು!
ಬೆಳಗಾವಿಯಿಂದ ನಿಪ್ಪಾಣಿಗೆ ಎತ್ತಂಗಡಿ ಮಾಡಿಸಿದ ಈ ಟಿಮ್ ಟಿಮ್ ಸಾಹೇಬರನ್ನು “ನಿಮ್ಮ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹೇಗೆ ಕರೆದಿರಿ? ನಿಮ್ಮಲ್ಲಿ ಸಿಟ್ಟಿರಲಿಲ್ಲವೆ?’ ಎಂದು ನೀವು ಕೇಳಬಹುದು. ದೇವರ ದಯೆಯಿಂದ ಪರರು ಬಗೆಯುವ ಕೇಡುಗಳನ್ನು ಮನಸ್ಸಿಗೆ ಬಹಳಷ್ಟು ಹಚ್ಚಿಕೊಳ್ಳದ ಒಂದು ಮನಃಸ್ಥಿತಿ ನನಗೆ ಸಿದ್ಧಿಸಿದೆಯೆಂದು ನಮ್ರನಾಗಿ ಹೇಳಬೇಕಾಗಿದೆ. ಅಲ್ಲದೆ ಅವರು ಕಾರ್ಯಕ್ರಮಕ್ಕೆ ಬಂದಿದ್ದರಿಂದ ನನ್ನ ಕುರಿತು ಅವರ ಮನ ಹೊಕ್ಕಿದ್ದ ಕೆಟ್ಟ ಹಕ್ಕಿಗಳು ಏಕಸಾಥ್ ಹಾರಿಹೋದವು!
“ಹೆತ್ತವರಿಗೆ ಹೆಗ್ಗಣ ಮುದ್ದು’ ಎಂಬಂತೆ ನನ್ನ ಕವಿತೆಗಳ ಬಗ್ಗೆ ನನಗೆ ವಿಪರೀತ ಅಭಿಮಾನವಿತ್ತು.(ಈಗಲೂ ಒಂದರ್ಧ-ಗಿರ್ಧ ಉಳಿದಿದೆ!) ಇದರಿಂದಲೇ ನಾನು ಯಾರನ್ನೂ ಕೇಳದೆ ಯಾರಿಗೂ ಕವಿತೆ ತೋರಿಸದೆ ಕಾವ್ಯಪರೀಕ್ಷೆ ಮಾಡಿಸದೆ ಅಷ್ಟು ಅವಸರದಿಂದ ಪುಸ್ತಕ ಮಾಡಿ ಬಿಡುಗಡೆ ಮಾಡಿದ್ದು. ಕವಿತೆಗಳು ಬಹಳ ಅಳ್ಳಕವಾಗಿವೆ, ಇತ್ಯಾದಿಯಾಗಿ ಮುನ್ನುಡಿಯ ಸಮಾಲೋಚನೆಗಾಗಿ ಹೋದಾಗ ಆ ಬೆಳಗಾವಿಯ ಕವಿಗಳಾದರೂ ಕಿವಿಹಿಂಡಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಅವರೂ ಹೊಗಳಿದರು, ಇವರೂ ಹೊಗಳಿದರು ನಾನು ಪುಸ್ತಕ ಮಾಡಿಬಿಟ್ಟೆ! ಗಣ್ಯಮಾನ್ಯ ಸಾಹಿತಿಗಳಿಗೆ ಪುಸ್ತಕ ಕಳಿಸಿಕೊಟ್ಟೆ . ಹೊಸಪೇಟೆ ಪುರವಾಸಿಗಳಾದ ಸಾಹಿತಿಗಳೊಬ್ಬರು ಮಾತ್ರ ಪುಸ್ತಕ ಓದಿ ತಮಗೆ ಇಷ್ಟವಾಗಿದ್ದ ಇಂತಿಂಥ ಒಂದೆರಡು ಕವಿತೆಗಳು ಉತ್ತಮವಾಗಿವೆಯೆಂದರು. ಉಳಿದಂತೆ ಯಾವ ಸಾಹಿತಿಗಳೂ ವಿಮರ್ಶಕರೂ ಬಾಯಿತೆರೆಯಲಿಲ್ಲ. ಆದರೆ ನಿಜವಾದ ಕಾವ್ಯ ಓದುಗರಾದ ಶಿಕ್ಷಕರು, ಕಾಲೇಜಿನಲ್ಲಿ ಕಲಿಯುವ ಬಿಎ, ಎಂಎ ವಿದ್ಯಾರ್ಥಿಗಳು, ವಣಿಕರು, ಲೆಕ್ಕಪರಿಶೋಧಕರು, ಯುವಕವಿಗಳು, ಮರಿಕವಿಗಳು ಬಹಳಷ್ಟು ಸಾಮಾನ್ಯ ಜನ ಪುಸ್ತಕ ಮೆಚ್ಚಿಕೊಂಡರು. ಅದರಲ್ಲೂ ಗೃಹಿಣಿಯರು ನನ್ನ ಕಾವ್ಯದ ನಿಜವಾದ ಅಭಿಮಾನಿಗಳಾಗಿ¨ªಾರೆಂದು ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತದೆ. ಬಿಜಾಪುರದಿಂದ ಫೋನು ಮಾಡಿದ್ದ ಒಬ್ಬ ಮಧ್ಯವಯಸ್ಕ ಗೃಹಿಣಿಯ ಸಂಭ್ರಮ, ಸಂತೋಷ ಹೇಳತೀರದು. ಕಾವ್ಯಕ್ಷೇತ್ರದಲ್ಲಿರುವ ಹಿರಿತಲೆಗಳ ಅಸಡ್ಡೆಯ ನಡುವೆ ಜನಸಾಮಾನ್ಯರಿಂದ ಸಿಕ್ಕಿರುವ ಇಂತಹ ಪ್ರೋತ್ಸಾಹವು ನನ್ನನ್ನು ಕಾವ್ಯದ ಕುರಿತು ತುಸು ಭಿನ್ನವಾಗಿ ಯೋಚಿಸುವಂತೆ ಮಾಡಿದೆ. ಕವಿತೆಯಿಂದ ಜನ ದೂರಾಗುತ್ತಿರುವ ಈ ಹೊತ್ತಿನಲ್ಲಿ ಜನಸಾಮಾನ್ಯರು ನನ್ನ ಕಾವ್ಯದ ಬಗ್ಗೆ ಪ್ರೀತಿ ತೋರಿಸುತ್ತಿರುವುದು ಬಹಳ ವಿಚಿತ್ರವಾಗಿದೆ. ಈಗ ಕವಿತೆ ಬರೆಯುವುದಾದರೆ ಯಾರಿಗಾಗಿ ಬರೆಯಬೇಕೆಂಬ ಮತ್ತು ಯಾರನ್ನು ಮೆಚ್ಚಿಸಲು ಬರೆಯಬೇಕೆಂಬ ದಾರಿ ನನಗೆ ಸ್ಪಷ್ಟವಾಗಿದೆ.
– ಹಜರತಅಲಿ ಇ. ದೇಗಿನಾಳ