Advertisement

ಮುಂಬಯಿ ವಿವಿಯಲ್ಲಿ  ಕವಿ ಶಾಂತಾರಾಮ ಶೆಟ್ಟಿ ಅವರ ಕೃತಿ ಬಿಡುಗಡೆ

04:46 PM Sep 16, 2018 | Team Udayavani |

ಮುಂಬಯಿ: ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದಲ್ಲಿ  ಸೆ. 8ರಂದು ಸಾಂತಾಕ್ರೂಜ್‌ ಪೂರ್ವದ ಕಲಿನಾ ಕ್ಯಾಂಪಸ್‌ನ ಕವಿವರ್ಯ ಡಾ| ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಆಯೋಜಿಸಿದ್ದ ಕೃತಿಗಳ ಲೋಕಾರ್ಪಣೆ ಸಂದರ್ಭದಲ್ಲಿ ಬೆಂಗಳೂರು ಮತ್ತು ಮುಂಬಯಿಯ ಕವಿ, ಸಾಹಿತಿ ಶಾಂತಾರಾಮ ಶೆಟ್ಟಿ ಅವರ ಮಣ್ಣ ಬಾಜನೊ (ಒರಿಂಡ ಕರ ದರಿಂಡ ಓಡು) ಕೃತಿ ಯನ್ನು ಬಿಡುಗಡೆಗೊಳಿಸಲಾಯಿತು.

Advertisement

ಪದ್ಮಶ್ರೀ ಪುರಸ್ಕೃತ ಸಾಹಿತಿ ಡಾ| ದೊಡ್ಡರಂಗೇ ಗೌಡ ಅವರು ಕೃತಿಯನ್ನು ಬಿಡುಗಡೆಗೊಳಿಸಿದರು. 

ಈ ಮೊದಲು ಶಾಂತಾರಾಮ ಶೆಟ್ಟಿ ಅವರ ಸುಳ್ಳು ಹೇಳಿದ ಸತ್ಯ ಕೃತಿಯನ್ನು ಓದಿ ಮೆಚ್ಚಿಕೊಂಡಿದ್ದೆ. ಪ್ರಸ್ತುತ ಪೇತ್ರಿ ವಿಶ್ವನಾಥ ಶೆಟ್ಟಿ ಅವರ ಕಥೆಗಳಿಗೆ ಮುನ್ನುಡಿ ಬರೆಯುವ ಅವಕಾಶ ದೊರೆತಾಗ ಅದನ್ನು ಓದಿ ಎರಡೇ ದಿನದಲ್ಲಿ ಬರೆದು ಮುಗಿಸಿದೆ. ಪ್ರತಿಭಾವಂತರಿಬ್ಬರ ಕೃತಿಗಳು ಒಂದೇ ವೇದಿಕೆಯಲ್ಲಿ ಬಿಡುಗಡೆಯಾಗುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಶಾಂತಾರಾಮ ಶೆಟ್ಟಿ ಅವರ ಕವನದಲ್ಲಿರುವ ಭಾವ ಭಾಷೆಗಳ ಸುಂದರ ಸಮನ್ವಯವನ್ನು ನಾವಿಲ್ಲಿ ಕಾಣಬಹುದು. ಅವರ ಕವಿತೆಗಳು ವಸ್ತು ಮತ್ತು ಶೈಲಿಯ ದೃಷ್ಟಿಯಿಂದ ಅನನ್ಯವಾಗಿದೆ ಎಂದು ದೊಡ್ಡರಂಗೇ ಗೌಡ ನುಡಿದರು.

ಶಾಂತಾರಾಮ ಶೆಟ್ಟಿ ಅವರ ಮಣ್ಣ ಬಾಜನೊ ಕೃತಿಯ ಕುರಿತು ಮಾತನಾಡಿದ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು, ಶಾಂತಾರಾಮ ಶೆಟ್ಟಿ ಅವರ ತುಳು ಕವನ ಸಂಕಲನದಲ್ಲಿ ತನ್ನ ಸುತ್ತಮುತ್ತ ಎಲ್ಲೆಲ್ಲಿ ಒಳ್ಳೆಯ ಅಂಶಗಳಿವೆಯೋ ಅವುಗಳನ್ನು ಪುರಸ್ಕರಿಸುತ್ತಾ ಹೋಗುತ್ತಾರೆ. ಎಲ್ಲೆಲ್ಲಿ ಕಿವಿ ಹಿಂಡಬೇಕೋ ಅಲ್ಲೆಲ್ಲ ನಮ್ರತೆಯಿಂದಲೇ ತಪ್ಪು  ಮಾಡಿದವರು ಎಚ್ಚರವಾಗುವಂತೆ ಬುದ್ದಿವಾದ ಹೇಳುತ್ತಾರೆ. ಅವರ ಕವನಗಳಲ್ಲಿ ಬರುವ ಪ್ರತಿಯೊಂದು ವಿಶಿಷ್ಟವಾದ, ಹೊಸತನದಿಂದ ಕೂಡಿದ ಪದ, ಸಾಲುಗಳು ಓದುಗನ ಮೈ ರೋಮಾಂಚನವಾಗುವಂತೆ ಮಾಡುತ್ತದೆ ಎಂದರು.

ಕೃತಿಕಾರರಾದ ಶಾಂತಾರಾಮ ಶೆಟ್ಟಿ ಅವರು ಮಾತನಾಡಿ, ನನ್ನ ಎಳೆಯ ವಯಸ್ಸಿನಲ್ಲಿ ನಡೆದ ಘಟನೆಯಿಂದ ನಾನು ಬರಹಗಾರನಾಗುವ ಕನಸು ಕಂಡೆ. ಮಗಳಿಂದ ದೂರವಿದ್ದ ತಾಯಿಯ ನಿವೇದನೆಯನ್ನು ಪತ್ರದ ಮುಖಾಂತರ ಬರೆದಾಗ ಅದಕ್ಕೆ ದೊರೆತ ಸ್ಪಂದನೆ ನನ್ನ ಬರವಣಿಗೆಗೆ ಪ್ರೇರಕ ಮತ್ತು ಪೂರಕವಾಯಿತು. ನನ್ನ ತುಳು ಬರೆಹಕ್ಕೆ ಬೆಂಗಳೂರಿನಲ್ಲಿ ಹೆಚ್ಚು ಪ್ರೋತ್ಸಾಹ ದೊರೆಯದಿದ್ದರೂ ಮುಂಬಯಿ ತುಳು ಕನ್ನಡಿಗರು ಅಭೂತಪೂರ್ವ ಪ್ರೋತ್ಸಾಹ ನೀಡಿದರು. ರಂಗ ನಿರ್ದೇಶಕ ನಂದಳಿಕೆ ನಾರಾಯಣ ಶೆಟ್ಟಿ ಅವರು ನನ್ನ ಬರಹವನ್ನು ಮೊದಲು ಗುರುತಿಸಿದವರಾದರೆ, ಪೇತ್ರಿ ವಿಶ್ವನಾಥ ಶೆಟ್ಟಿ ಅವರು ಪ್ರಚಾರ ಪ್ರಸಾರದ ಜೊತೆಗೆ ಪ್ರೋತ್ಸಾಹದ ನುಡಿಗಳನ್ನಾಡಿ ನೀರೆರೆದು ಪೋಷಿಸಿದರು. ನಾನು ಮತ್ತಷ್ಟು ಬರೆಯುವಂತೆ ಅವರು ಪ್ರೇರೇಪಿಸಿದರು. ಮಣ್ಣ ಬಾಜನೊ ಸಂಕಲನಕ್ಕೆ ಬೆಂಗಳೂರಿನ ಮೇರು ಸಾಹಿತಿ ಡಾ| ಡಿ. ಕೆ. ಚೌಟರು ಬೆನ್ನುಡಿ ಬರೆದು ಹರಸಿದ್ದು ನನ್ನ ಪಾಲಿನ ಅತ್ಯಂತ ಖುಯ ಕ್ಷಣಗಳು. ಅತ್ಯಂತ ಹಳೆಯ ವಿಶ್ವವಿದ್ಯಾಲಯ ಎನಿಸಿರುವ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಕಳೆದ 25 ವರ್ಷಗಳ ಇತಿಹಾಸದಲ್ಲಿ ಮೊತ್ತಮೊದಲ ಬಾರಿಗೆ ನನ್ನ ತುಳು ಕೃತಿ ಲೋಕಾರ್ಪಣೆಗೊಂಡಿರುವುದು ನನ್ನ ಸೌಭಾಗ್ಯ. ಇದಕ್ಕೆ ಕಾರಣರಾದ ವಿಭಾಗದ ಮುಖ್ಯಸ್ಥರಾದ ಡಾ| ಜಿ. ಎನ್‌. ಉಪಾಧ್ಯ ಅವರಿಗೆ ಹಾಗೂ ಕಾರಣಕರ್ತರಾದ ಮುಂಬಯಿಯ ಮಿತ್ರರಿಗೆ ಋಣಿಯಾಗಿರುತ್ತೇನೆ ಎಂದು ತನ್ನ ಬರೆಹಕ್ಕೆ ಸಹಕರಿಸಿದವರನ್ನು ಪ್ರೀತಿಯಿಂದ ನೆನಪಿಸಿಕೊಂಡರು.

Advertisement

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಪ್ರಾಧ್ಯಾಪಕ, ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ ಅವರು ಮಾತನಾಡಿ, ಶಾಂತಾರಾಮ ಶೆಟ್ಟಿ ಅವರು ಧ್ವನಿಶಕ್ತಿಯುಳ್ಳ ಪ್ರತಿಭಾನ್ವಿತ ಬೆರಳೆಣಿಕೆಯ ಕವಿಗಳಲ್ಲಿ ಒಬ್ಬರು. ಅವರಿಗೆ ಉಜ್ವಲ ಭವಿಷ್ಯವಿದೆ. ಹೊಸ ಹೊಸ ಪದಗಳನ್ನು ನಿರ್ಮಾಣ ಮಾಡುವ ತಾಕತ್ತು, ಕೌಶಲ ಅವರಿಗೆ ಸಿದ್ಧಿಸಿದೆ ಎಂಬುವುದಾಗಿ ವಿಶ್ವವಿದ್ಯಾಲಯದಲ್ಲಿ ಪೇತ್ರಿ ವಿಶ್ವನಾಥ ಶೆಟ್ಟಿ ಮತ್ತು ಶಾಂತಾರಾಮ ಶೆಟ್ಟಿ ಅವರ ಕೃತಿಗಳು ಬಿಡುಗಡೆಯಾಗಿರುವುದು ಮುಂಬಯಿ ಕನ್ನಡಿಗರ ಹೆಮ್ಮೆಯಾಗಿದೆ ಎಂದು ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ಪೇತ್ರಿ ಅವರ ತ್ಯಾಂಪರನ ಡೋಲು ಹಾಗೂ  ಶಾಂತಾರಾಮ ಶೆಟ್ಟಿ ಅವರ ಮಣ್ಣ ಬಾಜನೊ ಕೃತಿಗಳು ಅಂತರ್ಜಾಲದಲ್ಲಿ ಸುಲಭವಾಗಿ ಓದುಗರಿಗೆ ದೊರೆಯುವಂತೆ  ಇ-ಬುಕ್‌ನ್ನು ಮೈಸೂರು ಶ್ರೀಧರ್‌ ಅವರು ಲೋಕಾರ್ಪಣೆಗೊಳಿಸಿ ಅದರ ಕುರಿತು ಮಾಹಿತಿಯನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರಾದ ಮುದ್ರಾಡಿ ದಿವಾಕರ ಶೆಟ್ಟಿ, ಬಾಂಬೆ ಬಂಟ್ಸ್‌ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷರಾದ ಶ್ಯಾಮ್‌ ಎನ್‌. ಶೆಟ್ಟಿ, ನ್ಯಾಯವಾದಿ ಪ್ರಕಾಶ್‌ ಎಲ್‌. ಶೆಟ್ಟಿ. ಸಾಹಿತಿ ವೈ. ವಿ. ಗುಂಡೂರಾವ್‌, ಪೇತ್ರಿ ವಿಶ್ವನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next