Advertisement

ಫೆ. 18 ಕ್ಕೆ ಅಡಿಗ ಶತಮಾನ ಸಂಪನ್ನ: ಹುತ್ತಗಟ್ಟದೆ ಚಿತ್ತ!

12:30 AM Feb 17, 2019 | |

ನನ್ನ ಕಾಲದವರು ಕಾವ್ಯವನ್ನು ಬರೆಯಲು ಆರಂಭಿಸಿದಾಗ ಬಂಡಾಯ-ದಲಿತ ಸಾಹಿತ್ಯದ ಬರಹಗಳು ಮುಂಚೂಣಿಯಲ್ಲಿದ್ದವು. ಅದಾಗಲೇ ಮೊಗೇರಿ ಗೋಪಾಲಕೃಷ್ಣ ಅಡಿಗರ ಮೇಲೆ ಸಾಮಾಜಿಕ ಸಿಟ್ಟಿನ ವಿಮರ್ಶೆಗಳು ರಚನೆಗೊಳ್ಳುತ್ತಿದ್ದವು. ಅಡಿಗರು ಕ್ಷಿಷ್ಟ , ಸ್ವಲ್ಪ ಮಟ್ಟಿಗೆ ಬಲಪಂಥೀಯ, ಅತಿಗಾಂಭೀರ್ಯದ ಕವಿ ಎಂಬೆಲ್ಲ ಅನಿಸಿಕೆಗಳು ವ್ಯಕ್ತವಾಗುತ್ತಿದ್ದ ಕಾಲ. ಅಡಿಗರನ್ನು ಹಲವು ಬಾರಿ ಓದಿದೆ. ಅರ್ಥಮಾಡಿಕೊಳ್ಳಲು ಒದ್ದಾಡಿದೆ. ಕೊನೆಗೆ ನನ್ನಂಥ ಎಳೆಯ ಕವಿಗಳು ಅಡಿಗರಿಂದ ಕಲಿಯಬೇಕಾದದ್ದು ಬಹಳಷ್ಟಿದೆ ಅನ್ನಿಸಿತು. ಅವರ ಕುರಿತು ಬಂದ ನವ್ಯ ವಿಮರ್ಶೆ ತನ್ನ ಮಿತಿಗಳೊಂದಿಗೆ ಅವರನ್ನು ನೋಡಲು ಒಂದು ದಾರಿ ಕಲ್ಪಿಸಿತ್ತು. ಮುಖ್ಯವಾಗಿ ಪ್ರಾಮಾಣಿಕತೆ ಕಾವ್ಯದೊಳಗೆ ಯಾವ್ಯಾವ ಸ್ವರೂಪದಲ್ಲಿ ಕಾರ್ಯನಿರ್ವಹಿಸುತ್ತದೆ ಎಂಬುದಕ್ಕೆ ಅಲ್ಲಿ ಸೂಚನೆಗಳಿದ್ದವು. ವಸ್ತು, ಭಾಷೆ, ಆಶಯ ಎಲ್ಲವನ್ನೂ ಒಟ್ಟಂದದಲ್ಲಿ ರೂಪಿಸುವ ಪ್ರಾಮಾಣಿಕ ಅಭಿವ್ಯಕ್ತಿಯ ಸ್ವರೂಪವೇನು? ಹುಸಿತನವಿಲ್ಲದೆ, ಜನಪ್ರಿಯತೆಯ ಹಂಗಿಲ್ಲದೆ, ಹಿಪೋಕ್ರಸಿಯನ್ನು ದಾಟಿ ಅನುಭವವನ್ನು ಒಳಗಾಗಿಸಿಕೊಳ್ಳುವ ಕ್ರಮಗಳೇನು? ತನ್ನ ಚಡಪಡಿಕೆ, ದ್ವಂದ್ವ , ಅಳು, ನಗು, ಗೊಂದಲಗಳಿಗೆ ಒಗ್ಗುವ ನುಡಿಗಟ್ಟುಗಳನ್ನು ಪ್ರಾಮಾಣಿಕವಾಗಿ ಹಿಡಿಯುವ ಬಗೆ ಎಂಥದ್ದು? ತನ್ನನ್ನು ಸೀಳಿಕೊಂಡು ಹುಡುಕುವ ಬಗೆ ಹೇಗಿರುತ್ತದೆ? ಇಂಥಾದ್ದಕ್ಕೆಲ್ಲ ಅಡಿಗರ ಕಾವ್ಯದಲ್ಲಿ ಕೆಲವು ಗುಪ್ತ ಸೂಚನೆಗಳಿವೆ ಎನಿಸಿತು. ದೊಡ್ಡಬಾಯಿ, ಶಬ್ದಾಡಂಬರ, ಹುಸಿಕಾಳಜಿಗಳ ಕಾವ್ಯದ ಕುರಿತು ಅಡಿಗರಿಗೆ ಒಂದು ಅನುಮಾನ ಸದಾ ಇದ್ದಂತೆ ಕಾಣುತ್ತದೆ. ಅಡಿಗರ ಕೆಲ ವಿಚಾರಗಳನ್ನು ಒಪ್ಪಬಹುದು ಬಿಡಬಹುದು. ಆದರೆ, ಅವರ ಅನುಭವ ಶೋಧದ ಪ್ರಾಮಾಣಿಕತೆ, ಶ್ರದ್ಧೆ, ಬದ್ಧತೆ, ಶಿಸ್ತು, ಕುಸುರಿತನ, ಶಿಲ್ಪ ಸೌಷ್ಟವ ಮರೆಯಲಾಗುವುದಿಲ್ಲ. ಕಾವ್ಯವನ್ನು ಜೀವನ್ಮರಣದ ಪ್ರಶ್ನೆಯಾಗಿ ಸ್ವೀಕರಿಸಿದ ಹಠಮಾರಿತನ, ಆಳದ ಮುಗ್ಧತೆಯನ್ನು ನಂಬದೇ ಇರಲಿಕ್ಕಾಗುವುದಿಲ್ಲ. 

Advertisement

ಅಡಿಗರ ಕಾವ್ಯದಲ್ಲಿ ವಿಡಂಬನೆ, ವ್ಯಂಗ್ಯವೂ ಇದೆ. ನನಗೆ ಮೊದಮೊದಲು ಇದು ಇಷ್ಟವಾಗುತ್ತಿತ್ತು. ಆದರೆ, ಇದು ಈಗ ಒಮ್ಮೊಮ್ಮೆ ದಣಿವು ಉಂಟುಮಾಡುತ್ತದೆ. ವಿಡಂಬನೆಯ ಭರದಲ್ಲಿ ವ್ಯಕ್ತಿ, ಸಮಾಜದ ಯಾವುದೋ ಒಂದೆರಡು ಮುಖಗಳೇ ಮುಂದಾಗಿ ಉಳಿದವುಗಳು ಹಿಂದೆ ಬೀಳುವ ಸಾಧ್ಯತೆ ಇರುವುದುಂಟು. ಅವರ ಹಳೆ ಮನೆಯ ಮಂದಿ ಕವಿತೆ ತನ್ನೆಲ್ಲ ತೀಕ್ಷ್ಣತೆ ನಡುವೆಯೂ ಇದಲ್ಲ ಅಡಿಗರ ಮಾರ್ಗ ಎನಿಸುವುದು ಇದೇ ಕಾರಣಕ್ಕಾಗಿ. ಭಂಜಿಸುವ ಭರದಲ್ಲಿ ಅಡಿಗರ ಕಾವ್ಯದ ಆವೇಶ ಜೀವನದ ಕೆಲವು ತಪ್ತ ಒಳಗುದಿಗಳನ್ನು ನಿರ್ಲಕ್ಷಿಸಿತೇನೊ ಅನ್ನಿಸಿದೆ. ಆ ಕಾರಣಕ್ಕಾಗಿಯೇ ನಾನು ಅಡಿಗರ ಕಾವ್ಯದ ವ್ಯಂಗ್ಯ, ವಿಡಂಬನೆಯಿಂದ ಕೊಂಚ ಅಂತರ ಕಾಯ್ದುಕೊಂಡೆ. 

ಅವರ ಇಪ್ಪತ್ತು-ಮೂವತ್ತು ಕವಿತೆಗಳು ನನ್ನೊಳಗೆ ಸದಾ ಹೊಸ ಹೊಸ ಲೋಕಗಳನ್ನು ಕಾಣಿಸುತ್ತಲೇ ಇರುತ್ತವೆ. ಮನುಷ್ಯನ ಸ್ವಾತಂತ್ರ್ಯವನ್ನು ತಮ್ಮ ಹಲವಾರು ಕವಿತೆಗಳಲ್ಲಿ ಅಡಿಗರು ಕಾಣಿಸುತ್ತಲೇ ಹೋದರು. ಅಡಿಗರಿಗೆ ಅತ್ಯಂತ ಅಪಾಯಕಾರಿಯಾಗಿ ಕಂಡುಬಂದದ್ದು ಇನ್ನೊಬ್ಬರೆದುರು ಡೊಗ್ಗು ಸಲಾಮು ಹೊಡೆದುಕೊಂಡು ನಿಲ್ಲಬೇಕಾದ ಪ್ರಸಂಗ. ಮನುಷ್ಯನ ಅಸಹಾಯಕತೆ, ಅವಕಾಶವಾದಿತನ ಎರಡನ್ನೂ ಒಟ್ಟಿಗೆ ಹೇಳಿದರು. ಮನುಷ್ಯನ ಕುಸಿತ ಅವರನ್ನು ಆಳದಲ್ಲಿ ಕಲಕಿದೆ. ಅವನ ಕುಸಿತಕ್ಕೆ ಕಾರಣವಾದ ಸಮಾಜ, ವ್ಯವಸ್ಥೆ, ರಾಜಕಾರಣ, ಪ್ರಭುತ್ವ ಅವರ ಕಾವ್ಯದಲ್ಲಿ ಹೊಸ ನುಡಿಗಟ್ಟಿನೊಂದಿಗೆ ಬೆತ್ತಲಾಗಿವೆ. ಅಡಿಗರ ಕಾವ್ಯದ ಕೆಚ್ಚು ಅಪರೂಪದ್ದು. ಹೊಸಬರಿಗೆ ಅಲ್ಲಿ ತಿಳಿಜಲವಿದೆ. ಆದರೆ, ಅದಕ್ಕೆ ತಾಳ್ಮೆ ಬೇಕು. ಅವರ ಕಾವ್ಯದ ದಾರಿಯಲ್ಲಿ ಬಿದ್ದಿರುವ ಮುಳ್ಳಿನ ಕಂಟಿಗಳನ್ನು ಪಕ್ಕಕ್ಕಿಟ್ಟು ನಡೆಯುವ ವ್ಯವಧಾನ ಬೇಕು. ಮೊಳೆಯದೆಲೆಗಳ ಮೂಕಮರ್ಮರ ಆಲಿಸುವ ಪ್ರೀತಿ ಇರಬೇಕು. ಅಡಿಗರು ನಿಮ್ಮ ಎದೆಯಂಗಳಕ್ಕೆ ಬರುತ್ತಾರೆ. ಅವರನ್ನು ಬಿಟ್ಟುಕೊಳ್ಳದಿದ್ದರೆ ಅದರಿಂದ ನಮ್ಮ ಕಲಿಕೆಗೆ ತೊಂದರೆಯೇ ಹೊರತು ಅಡಿಗರಿಗಲ್ಲ.

ವಿಕ್ರಮ್‌ ವಿಸಾಜಿ

Advertisement

Udayavani is now on Telegram. Click here to join our channel and stay updated with the latest news.

Next