Advertisement

POCSO ಪ್ರಕರಣದಲ್ಲಿ ಕರ್ತವ್ಯ ಲೋಪ: ಮೂವರು ಪೊಲೀಸ್ ಅಧಿಕಾರಿಗಳಿಗೆ 5 ಲಕ್ಷ ರೂ. ದಂಡ

01:13 PM Jun 27, 2023 | Team Udayavani |

ಮಂಗಳೂರು: ಪೋಕ್ಸೋ ಪ್ರಕರಣದಲ್ಲಿ ಆರೋಪಿಗಳನ್ನು ರಕ್ಷಿಸಿ ನಿರಪರಾಧಿಗಳ ಮೇಲೆ ಪ್ರಕರಣ ದಾಖಲಿಸಿದ ಆರೋಪದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಮಂಗಳೂರು ಜಿಲ್ಲಾ ಹೆಚ್ಚುವರಿ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯ ಭಾರೀ ದಂಡ ವಿಧಿಸಿದೆ.

Advertisement

ಪೋಕ್ಸೋ ಪ್ರಕರಣದ ಸಾಕ್ಷಿಗಳ ವಿಚಾರಣೆ ಮಾಡಿ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ ಪ್ರಕರಣದ ತನಿಖೆ ಮಾಡುವಲ್ಲಿ ಮಂಗಳೂರಿನ ಮೂವರು ಹಿರಿಯ ಪೊಲೀಸ್ ಅಧಿಕಾರಿಗಳು ವಿಫಲರಾಗಿದ್ದರು.

ನ್ಯಾಯಾಲಯಕ್ಕೂ ತಪ್ಪು ಮಾಹಿತಿ ನೀಡಿದ ಹಾಗೂ ದಾಖಲೆಗಳನ್ನು ನೀಡುವಲ್ಲೂ ಕರ್ತವ್ಯ ಲೋಪ ಎಸಗಿರುವ ಸರ್ಕಲ್ ಇನ್ಸ್‌ಪೆಕ್ಟರ್ ಲೋಕೇಶ್ ಎ.ಸಿ., ಸಬ್‌ ಇನ್ಸ್‌ಪೆಕ್ಟರ್ ಶ್ರೀಕಲಾ ಹಾಗೂ ಮತ್ತೋರ್ವ ಸಬ್‌ ಇನ್ಸ್‌ಪೆಕ್ಟರ್ ಪುಷ್ಪಾರಾಣಿ ಅವರ ವಿರುದ್ಧ ನ್ಯಾಯಾಲಯ ಕೆಂಡಾಮಂಡಲವಾಗಿದೆ.

ಆರೋಪಿಗಳು ನೈಜ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸದೆ ನಿರಪರಾಧಿಗಳಾದ ಚಂದ್ರಪ್ಪ ಮತ್ತು ಪ್ರಸಾದ್ ಎಂಬ ಕೂಲಿ ಕಾರ್ಮಿಕರ ಮೇಲೆ ಯಾವುದೇ ಸಾಕ್ಷ್ಯಾಧಾರ ಇಲ್ಲದಿದ್ದರೂ ಪ್ರಕರಣ ದಾಖಲಿಸಿರುವ ಈ ಮೂವರು ಪೊಲೀಸ್ ಅಧಿಕಾರಿಗಳಿಗೆ ಒಟ್ಟು ಐದು ಲಕ್ಷ ರೂ. ದಂಡ ವಿಧಿಸಿದೆ. ಈ ಪೈಕಿ ನಿರ್ದೋಷಿ ಎಂದು ಸಾಬೀತಾದ ಚಂದ್ರಪ್ಪ ಎಂಬವರಿಗೆ ನಾಲ್ಕು ಲಕ್ಷ ಹಾಗೂ ನಿರ್ದೋಷಿ ಪ್ರಸಾದ್ ಅವರಿಗೆ ಒಂದು ಲಕ್ಷ ರೂ.ಗಳನ್ನು 40 ದಿನಗಳ ಒಳಗಾಗಿ ಪಾವತಿಸಬೇಕು. ಈ ದಂಡವನ್ನು ನ್ಯಾಯಾಲಯದಲ್ಲಿ ಪಾವತಿಸಬೇಕು ಎಂದು ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಂ. ರಾಧಾಕೃಷ್ಣ ಅವರು ಆದೇಶ ಹೊರಡಿಸಿದ್ದಾರೆ.

ಗಂಭೀರ ಅಪರಾಧ ಪ್ರಕರಣವಾದ ಈ ಪ್ರಕರಣದ ತೀರ್ಪಿನ ಮಾಹಿತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮತ್ತು ಮಂಗಳೂರು ಪೊಲೀಸ್ ಕಮಿಷನರ್ ಅವರಿಗೆ ಕಳುಹಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದೆ.

Advertisement

ಪ್ರಕರಣದ ವಿವರ: ಮೂಡುಬಿದಿರೆ ತಾಲೂಕು ಶಿರ್ತಾಡಿ ಗ್ರಾಮದ ವಿದ್ಯಾನಗರ ಮಕ್ಕಿ ಎಂಬಲ್ಲಿ ಪ್ರಕರಣದ ಸಂತ್ರಸ್ತೆ ತನ್ನ ತಂದೆ, ತಾಯಿ ಹಾಗೂ ಒಬ್ಬ ಸಹೋದರನ ಜೊತೆ ವಾಸವಾಗಿದ್ದರು. ತಂದೆ-ತಾಯಿ ಕೂಲಿ ಕಾರ್ಮಿಕರಾಗಿದ್ದು, ದಿನಾಂಕ 15-07-2022ರಂದು ಸಂತ್ರಸ್ತೆಯು ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ, ತನ್ನ ಮೇಲೆ ಅದೇ ಊರಿನ ಪ್ರಸಾದ್ ಎಂಬಾತ ಅತ್ಯಾಚಾರ ಎಸಗಿ ತಾನು ನಾಲ್ಕು ತಿಂಗಳ ಗರ್ಭೀಣಿಯಾಗಲು ಕಾರಣನಾಗಿದ್ದಾನೆ ಎಂದು ದೂರು ದಾಖಲಿಸಿದ್ದರು. ಬಳಿಕ, ಮಂಗಳೂರು ಜೆಎಂಎಫ್‌ಸಿ ನ್ಯಾಯಾಧೀಶರ ಮುಂದೆ ಸಂತ್ರಸ್ತೆ ಹೇಳಿಕೆ ಹೇಳಿಕೆ ನೀಡುವಾಗಲೂ ತನ್ನ ದೂರಿನ ಅಂಶಗಳನ್ನೇ ಪುನರುಚ್ಚರಿಸಿದ್ದಳು. ಅದರಂತೆ ಮಂಗಳೂರು ಮಹಿಳಾ ಪೊಲೀಸರು ಪ್ರಸಾದ್ ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ನಂತರ, ಮಹಿಳಾ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಶ್ರೀಕಲಾ ಸಂತ್ರಸ್ತೆಯ ಮರುಹೇಳಿಕೆಯನ್ನೂ ಪಡೆದುಕೊಂಡಿದ್ದರು. ಈ ಹೇಳಿಕೆಯಲ್ಲಿ ಸಂತ್ರಸ್ತೆ ತನ್ನ ಮೇಲೆ ಅತ್ಯಾಚಾರ ಎಸಗಿದ್ದು ಪ್ರಸಾದ್ ಅಲ್ಲ, ತನ್ನ ಮಾಲಕ ಸಂದೇಶ ಎಂದು ಸ್ಪಷ್ಟವಾಗಿ ಹೇಳಿದ್ದಳು. ಜೆಎಂಎಫ್‌ಸಿ ನ್ಯಾಯಾಲಯದಲ್ಲೂ ಸಾಕ್ಷ್ಯ ಹೇಳಿಕೆ ನೀಡುವಾಗ ಸಂದೇಶನಿಗೆ ಹೆದರಿ ಪ್ರಸಾದ್ ಹೆಸರನ್ನು ಹೇಳಿದ್ದಳು.

ಇದಾದ ಬಳಿಕ, ದಿನಾಂಕ 12-10-2022ರಂದು ಸಂತ್ರಸ್ತೆಯನ್ನು ಸಬ್ ಇನ್ಸ್‌ಪೆಕ್ಟರ್ ಶ್ರೀಕಲಾ ಪುನಃ ವಿಚಾರಣೆಗೆ ಒಳಪಡಿಸಿದಾಗ, ಸಂತ್ರಸ್ತೆ ಹೇಳಿಕೆ ನೀಡಿ, ತನ್ನ ಮೇಲೆ ಅತ್ಯಾಚಾರ ಎಸಗಿದ್ದು ತನ್ನ ತಂದೆ ಚಂದ್ರಪ್ಪನೇ ಎಂದು ಹೇಳಿಕೆ ಬದಲಾಯಿಸಿರುತ್ತಾಳೆ. ಈ ಹೇಳಿಕೆಯ ಆಧಾರದಲ್ಲಿ ದಿನಾಂಕ 17-10-2022ರಂದು ಆಕೆಯ ತಂದೆ ಚಂದ್ರಪ್ಪ ರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಾರೆ.

ಈ ಪ್ರಕರಣದ ವಿಚಾರಣಾಧಿಕಾರಿ ಆಗಿದ್ದ ಮಹಿಳಾ ಪೊಲೀಸ್ ಠಾಣೆಯ ಆಗಿನ ಸರ್ಕಲ್ ಇನ್ ಸ್ಪೆಕ್ಟರ್ ಲೋಕೇಶ್ ಎ.ಸಿ. ಅವರು ಆರೋಪಿ ಸಂದೇಶನ ಮೇಲೆ ಕೇಸು ದಾಖಲಿಸದೇ ನಿರ್ಲಕ್ಷ್ಯ ತೋರಿದ ಆರೋಪ ಎದುರಿಸುತ್ತಿದ್ದಾರೆ. ಅಲ್ಲದೆ ಯಾವುದೇ ದೂರುಗಳಿಲ್ಲದ ರತ್ನಪ್ಪ ಮತ್ತು ಆರೋಪಿಗಳಾದ ಚಂದ್ರಪ್ಪರ ರಕ್ತದ ಮಾದರಿಯನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಲು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಆದರೆ, ಸಂದೇಶನ ರಕ್ತದ ಮಾದರಿಯನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಿರಲಿಲ್ಲ ಎಂದು ಆರೋಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next