Advertisement

ಪೋಕ್ಸೋದಡಿ ದಾಖಲಾದ ಪ್ರಕರಣಗಳ ವಿಚಾರಣೆಗೆ ವಿಳಂಬ

02:08 PM Jun 30, 2017 | Karthik A |

ಮಂಗಳೂರು: ರಾಜ್ಯದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದರೂ, ತಪ್ಪಿತಸ್ಥರಿಗೆ ಶಿಕ್ಷೆಯಾಗುವಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ. ಪೋಕ್ಸೋ ಕಾಯ್ದೆಯಡಿ ಕಳೆದ ಐದು ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ 189 ಪ್ರಕರಣ ದಾಖಲಾದರೂ, ಐದಾರು ಪ್ರಕರಣಗಳಷ್ಟೇ ಇತ್ಯರ್ಥಗೊಂಡಿವೆ! ಉಡುಪಿಯಲ್ಲಿ ಒಟ್ಟು 110 ಪ್ರಕರಣ ದಾಖಲಾಗಿದ್ದು, 13 ಇತ್ಯರ್ಥಗೊಂಡರೂ, ಆರೋಪಿಗೆ ಶಿಕ್ಷೆಯಾಗಿರುವುದು ಒಂದು ಪ್ರಕರಣದಲ್ಲಿ ಮಾತ್ರ! 

Advertisement

ಮೂಲಗಳ ಪ್ರಕಾರ, ಕಳೆದ ಐದು ವರ್ಷಗಳಿಂದ ರಾಜ್ಯದಲ್ಲಿ ಪೋಕ್ಸೋ ಕಾಯ್ದೆಯಡಿ ಬಹಳಷ್ಟು ಪ್ರಕರಣಗಳು ದಾಖಲಾಗುತ್ತಿದ್ದರೂ, ರಾಜ್ಯದ ಯಾವುದೇ ಜಿಲ್ಲೆಗಳಲ್ಲಿಯೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಇತ್ಯರ್ಥಕ್ಕೆ ಮಕ್ಕಳ ಸ್ನೇಹಿ ವಿಶೇಷ ನ್ಯಾಯಾಲಯಗಳು ಸ್ಥಾಪನೆಗೊಂಡಿಲ್ಲ. ಮಕ್ಕಳ ಮೇಲೆ ಆಗುವ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಕಠಿನ ಹಾಗೂ ತ್ವರಿತ ಗತಿಯಲ್ಲಿ ಶಿಕ್ಷೆಗೆ ಗುರಿಪಡಿಸುವ ಉದ್ದೇಶದಿಂದಲೇ ಪೋಕ್ಸೋದಂತಹ ವಿಶೇಷ ಕಾಯ್ದೆಯನ್ನು 2012ರಲ್ಲಿ ಜಾರಿಗೆ ತರಲಾಯಿತು. ಆದರೆ, ಇಷ್ಟು ವರ್ಷ ಕಳೆದರೂ ಇನ್ನೂ ಪೋಕ್ಸೋ ಕಾಯ್ದೆಯಡಿ ದಾಖಲಾದ ಪ್ರಕರಣ, ಅದರಲ್ಲಿಯೂ ಮಕ್ಕಳ ಮೇಲಿನ ಪ್ರಕರಣಗಳ ವಿಲೇವಾರಿಗೆ ಎಲ್ಲ ಜಿಲ್ಲೆಗಳಲ್ಲಿ ಮಕ್ಕಳ ಸ್ನೇಹಿ ವಿಶೇಷ ನ್ಯಾಯಾಲಯಗಳು ಅಸ್ತಿತ್ವಕ್ಕೆ ಬರದಿರುವುದು ಗಮನಾರ್ಹ.

ದ.ಕ. ಜಿಲ್ಲೆಯಲ್ಲಿ 2012-13ರಿಂದ ಇಲ್ಲಿವರೆಗೆ ಒಟ್ಟು 189 ದೂರುಗಳು ಪೋಕ್ಸೋ ಕಾಯ್ದೆಯಡಿಯಲ್ಲಿ ದಾಖಲಾಗಿವೆ. ಈ ಪೈಕಿ ಗಂಭೀರ ಪ್ರಕರಣಗಳೆಂದು ಪರಿಗಣಿಸಿದ 147 ದೂರುಗಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ವರ್ಗಾಯಿಸಲಾಗಿದೆ. ಆದರೆ, ಮಕ್ಕಳ ಪ್ರಕರಣಕ್ಕೆ ಪ್ರತ್ಯೇಕವಾದ ಮಕ್ಕಳಸ್ನೇಹಿ ನ್ಯಾಯಾಲಯ ಇಲ್ಲವಾದ ಕಾರಣಕ್ಕೆ ಸದ್ಯಕ್ಕೆ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರತ್ಯೇಕ ಬೆಂಚ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಅಲ್ಲಿ ಸಿವಿಲ್‌ ಮತ್ತಿತರ ಪ್ರಕರಣಗಳ ವಿಚಾರಣೆಯೂ ನಡೆಯುತ್ತಿರುವುದರಿಂದ ಪೋಕ್ಸೋ ಅಡಿಯಲ್ಲಿ ದಾಖಲಾದ ದೂರುಗಳ ವಿಚಾರಣೆ ವಿಳಂಬವಾಗುತ್ತಿದೆ. ಅಲ್ಲದೆ, ಮಕ್ಕಳಿಗೂ ವಿಚಾರಣೆಗೆ ಹಾಜರಾಗಲು ಸಮಸ್ಯೆಯಾಗುತ್ತಿದೆ. 

ಈ ಕಾರಣದಿಂದ ಕಳೆದ ಸುಮಾರು ಐದು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಕೇವಲ ಐದಾರು ಪ್ರಕರಣಗಳು ಮಾತ್ರ ಇತ್ಯರ್ಥಗೊಂಡಿವೆ. ಉಡುಪಿಯಲ್ಲಿಯೂ ಜಿಲ್ಲಾ ನ್ಯಾಯಾಲಯದಲ್ಲಿಯೇ ವಿಚಾರಣೆ ನಡೆಯುತ್ತಿದ್ದು, 2012ರಿಂದ ಇಲ್ಲಿವರೆಗೆ 100 ದೂರುಗಳ ಪೈಕಿ ಕೇವಲ 13 ದೂರುಗಳು ಮಾತ್ರ ಇತ್ಯರ್ಥಗೊಂಡಿವೆ. ಬೆಂಗಳೂರು ಗ್ರಾಮಾಂತರ ಮತ್ತು ನಗರದಲ್ಲಿನ ನ್ಯಾಯಾಲಯದಲ್ಲಿ ಮಕ್ಕಳ ಸ್ನೇಹಿ ವಾತಾವರಣ ನಿರ್ಮಿಸಲಾಗಿದ್ದರೂ, ಇದಕ್ಕೆಂದೇ ಪ್ರತ್ಯೇಕ ನ್ಯಾಯಾಲಯ ಇಲ್ಲ.

ಈ ಬಗ್ಗೆ ‘ಉದಯವಾಣಿ’ಗೆ ಪ್ರತಿಕ್ರಿಯಿಸಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ | ಕೃಪಾ ಅಮರ್‌ ಆಳ್ವ, ‘ರಾಜ್ಯದೆಲ್ಲೆಡೆ ಈಗಿರುವ ನ್ಯಾಯಾಲಯಗಳಲ್ಲೇ ಪೋಕ್ಸೋದಡಿ ದಾಖಲಾದ ವಿಚಾರಣೆಯೂ ಪ್ರತ್ಯೇಕವಾಗಿ ನಡೆಯುತ್ತಿದೆ. ಪ್ರತಿ ಜಿಲ್ಲೆಗಳಲ್ಲಿಯೂ ಪ್ರತ್ಯೇಕ ಮಕ್ಕಳ ಸ್ನೇಹಿ ನ್ಯಾಯಾಲಯ ಸ್ಥಾಪನೆ ಮಾಡಬೇಕೆಂದು ಕಾಯ್ದೆ ಹೇಳುತ್ತದೆ. ಈಗಾಗಲೇ ತುಮಕೂರಿನಲ್ಲಿ ಇದಕ್ಕಾಗಿ ಜಾಗವನ್ನು ಮೀಸಲಿಡಲಾಗಿದ್ದು, ಅಲ್ಲಿ ಸ್ಥಾಪನೆಗೊಂಡರೆ ರಾಜ್ಯದ ಮೊದಲ ಮಕ್ಕಳ ವಿಶೇಷ ನ್ಯಾಯಾಲಯ ಅದಾಗಲಿದೆ. ಉಳಿದ ಜಿಲ್ಲೆಗಳಲ್ಲಿಯೂ ಈ ಸಂಬಂಧ ಪ್ರಯತ್ನಿಸಲಾಗುವುದು’ ಎಂದು ತಿಳಿಸಿದ್ದಾರೆ.

Advertisement

ನಾಲ್ಕು ರಾಜ್ಯಗಳಲ್ಲಿ ಮಾತ್ರ
ಮಕ್ಕಳ ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಖಾಂತರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೂ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಈ ಸಂಬಂಧ ಸೂಕ್ತ ಕ್ರಮ ವಹಿಸಲಾಗುವುದು ಎಂದು ಭರವಸೆಯನ್ನೂ ಆಯೋಗದವರು ನೀಡಿದ್ದಾರೆ. ದೇಶದಲ್ಲಿ ಹೊಸದಿಲ್ಲಿ, ಗೋವಾ, ತೆಲಂಗಾಣದಲ್ಲಿ ಮಾತ್ರ ಮಕ್ಕಳ ಮೇಲಿನ ಪ್ರಕರಣಗಳ ಇತ್ಯರ್ಥಕ್ಕೆ ವಿಶೇಷ ನ್ಯಾಯಾಲಯ ಇದೆ. ಆದರೆ ಪ್ರತೀ ಜಿಲ್ಲೆಗಳಲ್ಲಿಯೂ ಮಕ್ಕಳಸ್ನೇಹಿ ನ್ಯಾಯಾಲಯ ಸ್ಥಾಪನೆಗೊಂಡರೆ ಮಕ್ಕಳಿಗೆ ವಿಚಾರಣೆಗೆ ಹಾಜರಾಗುವುದೂ ಸುಲಭವಾಗುತ್ತದೆ ಎಂದು ದ.ಕ. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಕೆ. ನಿಕೇಶ್‌ ಶೆಟ್ಟಿ ತಿಳಿಸಿದ್ದಾರೆ.

‘2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರತ್ಯೇಕ ಬೆಂಚ್‌ನಲ್ಲಿ ಪೋಕ್ಸೋ ಅಡಿಯಲ್ಲಿ ದಾಖಲಾಗಿರುವ ದೂರುಗಳ ವಿಚಾರಣೆ ನಡೆಯುತ್ತಿದೆ. ಕಾಯ್ದೆ ಪ್ರಕಾರ ಈ ದೂರುಗಳ ವಿಚಾರಣೆಗಾಗಿ ಪ್ಲೇ ಹೋಂ ಮಾದರಿಯಲ್ಲೇ ಪ್ರತ್ಯೇಕ ವಿಶೇಷ ನ್ಯಾಯಾಲಯ ಇರಬೇಕೆಂದಿದೆ. ಅದು ಇದ್ದಲ್ಲಿ ವಿಚಾರಣೆಗಳು ಕೂಡಾ ತ್ವರಿತವಾಗಿ ನಡೆಯುತ್ತವೆ’ ಎನ್ನುತ್ತಾರೆ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲನ ಗೌಡ.

2015-16ರಲ್ಲಿ ಅತಿಹೆಚ್ಚು ದೂರು ದಾಖಲು!
ಮಕ್ಕಳ ಕಲ್ಯಾಣ ಸಮಿತಿಗೆ ಬಂದ ದೂರುಗಳ ಪೈಕಿ ದ.ಕ. ಜಿಲ್ಲೆಯಲ್ಲಿ ಪೋಕ್ಸೋ ಕಾಯ್ದೆ-2012 ಅಡಿಯಲ್ಲಿ 2015-16ರಲ್ಲಿ ಅತೀ ಹೆಚ್ಚು ಅಂದರೆ 60 ದೂರು ದಾಖಲಾಗಿವೆ. ಉಳಿದಂತೆ 2014-15ರಲ್ಲಿ 27, 2016-17ರಲ್ಲಿ 53, 2017-18ನೇ ಜೂನ್‌ 7ರವರೆಗೆ ಒಟ್ಟು 7 ದೂರು ದಾಖಲಾಗಿವೆ. 

ಏನಿದು ಮಕ್ಕಳಸ್ನೇಹಿ ನ್ಯಾಯಾಲಯ?
ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ವಿಚಾರಣೆಗಾಗಿಯೇ ಈ ನ್ಯಾಯಾಲಯಗಳು ಇರುವುದರಿಂದ ಸಂತ್ರಸ್ತ ಮಕ್ಕಳಿಗೆ ಪೂರಕ ವಾತಾವರಣವನ್ನು ಕಲ್ಪಿಸಿಕೊಡಬೇಕು ಎಂಬುದಾಗಿ ಕಾಯ್ದೆ ಹೇಳುತ್ತದೆ. ಪ್ಲೇ ಹೋಂ ಮಾದರಿಯಲ್ಲಿ ಗೊಂಬೆ ಮತ್ತಿತರ ಮಕ್ಕಳಿಗೆ ಇಷ್ಟವಾಗುವ ವಸ್ತುಗಳು ಅಲ್ಲಿರಬೇಕು. ವಿಚಾರಣೆ ನಡೆಸುವ ನ್ಯಾಯವಾದಿಗಳು, ಪೊಲೀಸರು ಮತ್ತು ಮಕ್ಕಳಿಗೆ ಸಂಬಂಧಪಟ್ಟವರು ಕೂಡ ಮನೆಯ ವಾತಾವರಣದಲ್ಲಿ ಮಕ್ಕಳನ್ನು ಕೂರಿಸಿಕೊಂಡು ವಿಚಾರಣೆ ನಡೆಸಬೇಕು. ಯಾವುದೇ ಕಾರಣಕ್ಕೂ ಸಂತ್ರಸ್ತರು ಮತ್ತು ಆರೋಪಿಗಳು ಮುಖಾಮುಖೀಯಾಗದಂತೆ ನೋಡಿಕೊಳ್ಳಬೇಕು. ಸಂತ್ರಸ್ತರಿಗೆ ಸ್ನ್ಯಾಕ್ಸ್‌, ಹಾಲು, ಕಾಫಿ, ಚಾ ಮುಂತಾದವುಗಳನ್ನೂ ಒದಗಿಸುತ್ತಿರಬೇಕು.

– ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next