Advertisement
ಸಡಿಲವಾದ ಸಲ್ವಾರ್, ಉದ್ದನೆಯ ಗೌನ್, ಮೈಗೊಪ್ಪುವ ಜೀನ್ಸ್ ಪ್ಯಾಂಟ್, ಮೊಳಕಾಲುದ್ದದ ಸ್ಕರ್ಟ್- ಹೀಗೆ ಧರಿಸುವ ಉಡುಪು ಯಾವುದೇ ಇರಲಿ; ಅದಕ್ಕೊಂದು ಕಿಸೆ ಅಥವಾ ಜೇಬಿದ್ದರೆ? ಪರ್ಸ್, ದುಡ್ಡು, ಕೀಲಿ, ಕರ್ಚಿಫ್ ಮತ್ತು ನಮ್ಮ ಬದುಕಿನ ಅವಿಭಾಜ್ಯ ಅಂಗವೇ ಆಗಿರುವ ಮೊಬೈಲ್ ಇಡಲು ಈ ಜೇಬಿಗಿಂತ ಸೂಕ್ತ ಸ್ಥಳ ಇನ್ನೊಂದಿಲ್ಲ. ಆದರೆ, ಮಾರುಕಟ್ಟೆಯಲ್ಲಿ ಸಿಗುವ ಪುರುಷರ ಮತ್ತು ಮಹಿಳೆಯರ ಜೀನ್ಸ್ ಪ್ಯಾಂಟ್‌ಗಳನ್ನು ಗಮನಿಸಿದರೆ, ನೋಡಲು ಒಂದೇ ರೀತಿಯಾಗಿ ಕಂಡರೂ ಅನೇಕ ವ್ಯತ್ಯಾಸಗಳುಂಟು. ಅವುಗಳಲ್ಲೊಂದು ಪಾಕೆಟ್ ಅಥವಾ ಜೇಬು!
Related Articles
Advertisement
ಕಾಲ ನಿಧಾನವಾಗಿ ಬದಲಾಯಿತು. ಹತ್ತೂಂಬತ್ತನೇ ಶತಮಾನದ ಅಂತ್ಯದಲ್ಲಿ ವಿದ್ಯಾಭ್ಯಾಸದ ಮಟ್ಟ ಹೆಚ್ಚಿದಂತೆ ತಮ್ಮ ಹಕ್ಕುಗಳಿಗಾಗಿ ಮಹಿಳೆಯರು ಹೋರಾಟ ಆರಂಭಿಸಿದರು. ಸಮಾನತೆಯ ಗಾಳಿ ಬೀಸತೊಡಗಿತು. ಮಹಿಳೆಯರ ಉಡುಪಿನಲ್ಲೂ ಸುಧಾರಣೆ ಕಂಡವು. ಕೇವಲ ಪುರುಷರು ಧರಿಸುತ್ತಿದ್ದ ಪ್ಯಾಂಟುಗಳನ್ನು ಮಹಿಳೆಯರು ಧರಿಸತೊಡಗಿದ್ದು ಕ್ರಾಂತಿಗೆ ಮುನ್ನುಡಿಯನ್ನೇ ಬರೆಯಿತು. ಆದರೆ, ಪುರುಷರನ್ನೇ ಗಮನದಲ್ಲಿಟ್ಟು ವಿನ್ಯಾಸವಾಗಿದ್ದ ಅವುಗಳಲ್ಲಿ ದೊಡ್ಡ ಜೇಬುಗಳಿದ್ದವು. ಸುಂದರ ಸುಕೋಮಲ ಮಹಿಳೆಯರು ಇವುಗಳನ್ನು ಧರಿಸಿದ್ದೇ ಅಸಹನೀಯವಾಗಿರುವಾಗ ದೊಡ್ಡ ಜೇಬುಗಳಿದ್ದರೆ? ಕಿರಿದಾದ ನಡುವಿರಬೇಕಾದ ಮಹಿಳೆಗೆ ಆ ಅಂಕು-ಡೊಂಕನ್ನು ಹೆಚ್ಚಿಸುವ ಉಡುಪು ಸೂಕ್ತ. ಪ್ಯಾಂಟ್ ಧರಿಸಿದ್ದಲ್ಲದೆ, ಅದರಲ್ಲಿ ಜೇಬಿದ್ದು, ಏನಾದರೂ ಇಟ್ಟರೆ ಅದು ಉಬ್ಬಿದಂತೆ ಕಾಣುತ್ತದೆ; ಕೃಶಕಾಯರಾಗಿರಬೇಕಾದ ಮಹಿಳೆಯರು ದಪ್ಪವಾಗಿ ಕಾಣುತ್ತಾರೆ. ಇದಲ್ಲದೆ ಆಕರ್ಷಕ ಮೈಮಾಟಕ್ಕೆ ಇದರಿಂದ ಹಾನಿ ಎಂಬ ಅಭಿಪ್ರಾಯ ಆಗ ಬಲವಾಗಿತ್ತು. 1954ರಲ್ಲಿ ಪ್ರಖ್ಯಾತ ವಸ್ತ್ರ ವಿನ್ಯಾಸಕಾರ ಕ್ರಿಶ್ಚಿಯನ್ ಡಿಯೋರ್ ಹೇಳಿದ ಮಾತು ಗಮನಾರ್ಹ: ಪುರುಷರಿಗೆ ಜೇಬಿರುವುದು ವಸ್ತುಗಳನ್ನು ಇಡಲು, ಮಹಿಳೆಯರಿಗೆ ಬರೀ ಅಲಂಕಾರಕ್ಕಾಗಿ! ಅಂತೂ ಮಹಿಳೆಯರ ಅನುಕೂಲ, ಇಷ್ಟ- ಕಷ್ಟ ಯಾವುದನ್ನೂ ಪರಿಗಣಿಸದೇ ಸೌಂದರ್ಯ- ಫ್ಯಾಶನ್ ಹೆಸರಿನಲ್ಲಿ ಮಹಿಳೆಯರ ಪ್ಯಾಂಟ್‌ಗಳಿಂದ ಜೇಬುಗಳನ್ನು ತೆಗೆಯಲಾಯಿತು ಮತ್ತು ಅದು ಇಂದಿನವರೆಗೂ ಮುಂದುವರೆದಿದೆ.
ಇತ್ತೀಚೆಗೆ ಹಾಲಿವುಡ್‌ನ ಸಿನಿತಾರೆಯರಾದ ಸಾಂಡ್ರಾ ಬುಲ್ಲಕ್, ಆ್ಯಮಿ ಶೂಮರ್ ಮುಂತಾದವರು ದೊಡ್ಡ ಜೇಬಿರುವಂಥ ಉಡುಪನ್ನು ಆಸ್ಕರ್‌ನಂಥ ಪ್ರತಿಷ್ಠಿತ ಸಮಾರಂಭಗಳಲ್ಲಿ ಧರಿಸಿ ಸಂಚಲನ ಸೃಷ್ಟಿಸಿ¨ªಾರೆ. ಆದರೆ, ಸಾಮಾನ್ಯ ಯುವತಿ- ಮಹಿಳೆಯರು ತೊಡುವ ನಿತ್ಯದ ಉಡುಪಿನಲ್ಲಿ ಅನುಕೂಲಕರ ಜೇಬು ಇಂದಿಗೂ ಇಲ್ಲ. ಸಮಾನತೆಯ ಕೂಗು ಬಲವಾಗಿರುವ ಈ ಕಾಲದಲ್ಲಾದರೂ ಮಹಿಳೆಯರಿಗೆ ಬೇಕಾದ್ದನ್ನು ಇಟ್ಟುಕೊಳ್ಳುವ ಸೌಕರ್ಯ ಒದಗಿಸುವ ಜೇಬುಳ್ಳ ಉಡುಪುಗಳು ಬರಬಹುದೇ?
ಆಗಿನ ಮಹಿಳೆಯರ ಜೇಬಿನಲ್ಲಿ ಏನಿರುತ್ತಿತ್ತು?ಕ್ರೆಡಿಟ್ ಕಾರ್ಡು, ಕಾರಿನ ಕೀ, ಮೊಬೈಲ್ ಇಲ್ಲದ ಕಾಲದಲ್ಲಿ ಮಹಿಳೆಯರು ಜೇಬಿನಲ್ಲಿ ಏನಿಡುತ್ತಿದ್ದರು? ಎಂಬ ಸಂಶಯ ಮೂಡುವುದು ಸಹಜವೇ. ಯಾರಿಗೂ ಕಾಣದಂತೆ ಕೂಡಿಟ್ಟ ಚಿಲ್ಲರೆ ನಾಣ್ಯಗಳು ಜೇಬಿನಲ್ಲಿ ಸ್ಥಾನ ಪಡೆಯುತ್ತಿದ್ದವು. ಪೆನ್ಸಿಲ್, ಚಾಕು, ಕತ್ತರಿ, ಕನ್ನಡಕ ಮತ್ತು ವಾಚು… ಜೇಬಿನಲ್ಲಿ ಇರಲೇಬೇಕಾದ ವಸ್ತುಗಳಾಗಿದ್ದವು. ಇದಲ್ಲದೇ, ತಮ್ಮನ್ನು ತಾವು ಚೆಂದಗಾಣಿಸಲು ಕನ್ನಡಿ, ಸೆಂಟ್ ಬಾಟಲಿ, ಬಾಚಣಿಗೆ ಮತ್ತು ನಶ್ಯದ ಡಬ್ಬಿಯೂ ಇದರಲ್ಲಿರುತ್ತಿತ್ತು. ವಯಸ್ಸಾದ ಮಹಿಳೆಯರು, ಒಳ್ಳೆಯ ವರ್ತನೆ ತೋರಿದ ಮಗುವಿಗೆ ಮೆಚ್ಚುಗೆ ಸೂಚಿಸಲು ಬಿಸ್ಕೆಟ್ ಮತ್ತು ಕಿತ್ತಳೆ ಅಥವಾ ಸೇಬು ಹಣ್ಣನ್ನು ಜೇಬಿನಲ್ಲಿಡುತ್ತಿದ್ದರಂತೆ. ಒಳಲಂಗದೊಳಗೆ ಜೇಬು ಬಂದ ಕತೆ…
ಹದಿನೆಂಟನೇ ಶತಮಾನದಲ್ಲಿ ಮಹಿಳೆಯರ ಜೇಬು, ಲಂಗದ ಮೇಲ್ಭಾಗಕ್ಕೆ ಅಥವಾ ಸೊಂಟದ ಪಟ್ಟಿಗೆ ಸಿಕ್ಕಿಸಿ ನೇತಾಡುವ ಪುಟ್ಟ ಚೀಲದ ರೀತಿಯಲ್ಲಿ ಇರುತ್ತಿತ್ತು. ಇಂಥ ಜೇಬುಗಳ ದಾರ ಕತ್ತರಿಸಿ ಒಯ್ಯುವುದು ಕಳ್ಳರಿಗೆ ಸುಲಭವಾಗಿತ್ತು. ಇದೇ ಪಿಕ್‌ಪಾಕೆಟ್ ತಂತ್ರ. ಇದನ್ನು ತಪ್ಪಿಸಲು ಒಳಲಂಗದೊಳಗೇ ಜೇಬನ್ನು ಹೊಲಿಯುವ ಪದ್ಧತಿ ಬಂತು. ಭಾರದ, ಹಲವು ಪದರಗಳ ಮಹಿಳೆಯರ ಬಟ್ಟೆಗಳನ್ನು ತಯಾರಿಸುವಾಗ ದರ್ಜಿಗಳು ಒಳಲಂಗಕ್ಕೆ ಹೊಂದಿಕೆಯಾಗುವ ಹಾಗೆ ಜೇಬುಗಳನ್ನು ಹಳೆ ಬಟ್ಟೆಯಿಂದ ಕೈಹೊಲಿಗೆಯಲ್ಲಿ ಸಿದ್ಧಪಡಿಸುತ್ತಿದ್ದರು. ಮೇಲ್ವರ್ಗದ ಮಹಿಳೆಯರಲ್ಲಿ ವಿಶೇಷ ಜೇಬುಗಳನ್ನು ಗಿಫಾrಗಿ ನೀಡುವ ರೂಢಿಯೂ ಇತ್ತು.
—
ಜೇಬಿದ್ದರೆ ಅವಳು ಗ್ರೇಟ್!
ಹತ್ತೂಂಬತ್ತನೇ ಶತಮಾನದ ಕಡೆಯಲ್ಲಿ ಸ್ಕರ್ಟ್, ಮಹಿಳೆಯರಲ್ಲಿ ಅತ್ಯಂತ ಜನಪ್ರಿಯತೆ ಪಡೆದಿತ್ತು. ಆದರೆ, ತಾನು ಸ್ವತಂತ್ರ ಮಹಿಳೆ ಎಂದು ಭಾವಿಸಿದವರು ಮಾತ್ರ ಉಡುಪಿನಲ್ಲಿ ಜೇಬನ್ನು ಹೊಲಿಸುತ್ತಿದ್ದರು. ಪುರುಷರೊಂದಿಗೆ ರಾಜಕೀಯ ಮತ್ತು ಆರ್ಥಿಕ ಸಮಾನ ಹಕ್ಕು ಹೊಂದಬೇಕು ಎಂದು ಹೋರಾಡುತ್ತಿದ್ದ ಮಹಿಳೆಯರು ಜೇಬಿದ್ದ ಉಡುಪಿನಲ್ಲಿ ಎರಡೂ ಕೈ ಹಾಕಿ ನಿಲ್ಲುತ್ತಿದ್ದರು! – ಡಾ. ಕೆ.ಎಸ್. ಚೈತ್ರ