ನಾವೀಗ ಲಾಕ್ ಡೌನ್ ನ ಎರಡನೇ ವಾರದಲ್ಲಿದ್ದೇವೆ. ಟಿವಿ, ಮೊಬೈಲ್, ಸಿನಿಮಾ, ಪುಸ್ತಕ ಎಲ್ಲವೂ ಬೇಸರ ತರಿಸಲು ಶುರುವಾಗಿದೆ. ಉಳಿದಿರುವ ದಿನಗಳನ್ನು ಸೃಜನಾತ್ಮಕವಾಗಿ ಕಳೆಯುವುದು ಹೇಗೆ ಎಂಬ ಯೋಚನೆಯಲ್ಲಿ ಇರುವವರಿಗೆ ಹೊಸ ಐಡಿಯಾ ಇಲ್ಲಿದೆ…
ಜಗತ್ತಿನಲ್ಲಿ ಜನರಿಗೆ ಹಣದ ಮೇಲಷ್ಟೇ ಅಲ್ಲ, ಜೇಬಿನ ಮೇಲೆಯೂ ಕಣ್ಣಿದೆ. ಪಿಕ್ ಪಾಕೆಟ್ ಮಾಡುವವರ ಬಗ್ಗೆ ಹೇಳಿದ್ದಲ್ಲ; ಫ್ಯಾಷನ್ ಲೋಕದಲ್ಲಿ ಟ್ರೆಂಡ್ ಆಗಿರುವ ಬಣ್ಣ ಬಣ್ಣದ ಪಾಕೆಟ್‌ಗಳ ಬಗ್ಗೆ ಹೇಳುತ್ತಿರುವುದು. ಸಿಂಪಲ್ ಡ್ರೆಸ್‌ಗೆ ಮೆರಗು ನೀಡಲು, ಬಣ್ಣಬಣ್ಣದ ಜೇಬು ಹೊಲಿಯುವುದು ಈಗಿನ ಸ್ಟೈಲ್ ನೀಲಿ ಡೆನಿಮ್ ಜಾಕೆಟ್ ಮೇಲೆ ಕಣ್ಣು ಕುಕ್ಕುವಂಥ ದೊಡ್ಡ ಜೇಬು, ಬಿಳಿ ಅಂಗಿ ಮೇಲೆ ಕಪ್ಪುಬಣ್ಣದ ಜೇಬು, ಪ್ಲೇನ್ ಬಣ್ಣದ ಉಡುಗೆಯ ಮೇಲೆ ಸಂಪೂರ್ಣ ಕಸೂತಿ ಕೆಲಸದ ಜೇಬು… ಹೀಗೆ ಬಗೆಬಗೆಯ ಜೇಬುಗಳನ್ನು ಹೊಲಿಯಬಹುದು. ನಿಮ್ಮ ಸೃಜನಶೀಲತೆಗೆ ಕಿಕ್ ಕೊಡಲು ಇದೀಗ ಒಳ್ಳೆ ಸಮಯ. ಹಳೆಯ ಉಡುಗೆಗಳನ್ನು ಕಪಾಟಿನಿಂದ ಹೊರತೆಗೆದು, ಕ್ರಿಯಾಶೀಲ ಕೌಶಲವನ್ನು ಪ್ರಯೋಗಿಸಿ.
ಚಿತ್ರ, ಅಲಂಕಾರ ಮೂಡಿಸಿ : ಜೇಬುಗಳನ್ನು ಹೊಲಿಯುವುದಷ್ಟೇ ಅಲ್ಲ, ಅವುಗಳ ಮೇಲೆ ಚಿತ್ರ ಬಿಡಿಸಿ, ಕನ್ನಡಿ ಅಂಟಿಸಿ, ಗೆಜ್ಜೆ, ಮಣಿ, ದಾರ, ಲೇಸ್ ಅಂಟಿಸಿ. ಗುಂಡಿಗಳನ್ನೂ ಜೋಡಿಸಬಹುದು. ಒಟ್ಟಿನಲ್ಲಿ ಉಡುಗೆಗಿಂತ ಭಿನ್ನವಾದ ಜೇಬನ್ನು ಸೃಷ್ಟಿಸಿ, ಅದು ಎದ್ದು ಕಾಣುವಂತೆ ಮಾಡಿ. ಈ ಜೇಬುಗಳು ಅಂಗಿಗಷ್ಟೇ ಸೀಮಿತವಾಗಿರಬೇಕಿಲ್ಲ. ಪ್ಯಾಂಟ್, ಲಂಗ, ಜಂಪ್ ಸೂಟ್, ಶಾರ್ಟ್ಸ್, ಸ್ಕರ್ಟ್ಸ್, ಕ್ಯಾಪ್ರಿಸ್, ಕುರ್ತಿ, ಜಾಕೆಟ್, ಹುಡಿ, ಸ್ವೆಟರ್, ಮುಂತಾದವುಗಳ ಮೇಲೆಯೂ ಇವನ್ನು ಮೂಡಿಸ ಬಹುದು!
ವಿವಿಧ ವಸ್ತು ಗಳಿಂದ ಜೇಬು : ಜೇಬು ಬಟ್ಟೆಯದ್ದೇ ಆಗಿರಬೇಕಿಲ್ಲ. ಲೆದರ್ (ಚರ್ಮ), ಫೇಕ್ ಲೆದರ್, ಕ್ರೋಶಾ, ವೆಲ್ವೆಟ್, ನೆಟ್ (ಸೊಳ್ಳೆ ಪರದೆಯಂಥ ಬಟ್ಟೆ), ಪ್ಲಾಸ್ಟಿಕ್, ಮುಂತಾದವು ಗಳನ್ನೂ ಬಳಸಬಹುದು. ಜೇಬು ಗಳ ಮೇಲೆ ಪ್ರಿಂಟೆಬಲ್ ಸ್ಟಿಕರ್ ಗಳನ್ನು ಅಂಟಿಸಿದರೆ ಚೆನ್ನ. ಸ್ಟೆನ್ಸಿಲ್ ಅಥವಾ ಅಚ್ಚು ಬಳಸಿ, ಬೇಕಾದ ಔಟ್‌ಲೈನ್ ಆರಿಸಿ, ಅದಕ್ಕೆ ಬಣ್ಣ ತುಂಬಬಹುದು.
ಜೇಬುಗಳ ಗಾತ್ರ ದೊಡ್ಡದಾದಷ್ಟೂ, ಅದರ ಅಂದ ಹೆಚ್ಚು. ಮೊಬೈಲ್ ಇಟ್ಟು ಕೊಳ್ಳು ವಷ್ಟು ದೊಡ್ಡ ಜೇಬುಗಳಿಂದ ಉಪಯೋಗವೂ ಇದೆ. ಇನ್ಯಾಕೆ ತಡ, ಬೇಕಾದಷ್ಟು ಸಮಯವಿದೆ. ದಿನಕ್ಕೊಂದು ಬಟ್ಟೆಗೆ ಜೇಬು ಹೊಲಿಯಲು, ಅದರ ಮೇಲೆ ಕಸೂತಿ ಚಿತ್ತಾರ ಬಿಡಿಸಲು ಮುಂದಾಗಿ. ನಿಮ್ಮ ಪ್ರಯೋಗಗಳು ಸಫಲವಾದರೆ, ಅವುಗಳ ವಿಡಿಯೋ ಅಥವಾ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಇತರರಿಗೂ ಮಾದರಿಯಾಗಿ, ಉತ್ಸಾಹ ಮತ್ತು ಪ್ರೇರಣೆ ನೀಡಿ. ಸಂಕಟದ ಈ ವಾತಾವರಣವನ್ನು ಸ್ವಲ್ಪ ಲೈಟ್ ಆಗಿಸಿ.
-ಅದಿತಿಮಾನಸ ಟಿ.ಎಸ್.