Advertisement

Health Department ನ್ಯುಮೋನಿಯಾ ಮುನ್ನೆಚ್ಚರಿಕೆ ಪ್ರಕಟ; ಇಲ್ಲಿದೆ ಮಾರ್ಗಸೂಚಿ

12:51 AM Nov 29, 2023 | Shreeram Nayak |

ಬೆಂಗಳೂರು: ಚೀನದಲ್ಲಿ ನಿಗೂಢ ನ್ಯುಮೋನಿಯಾ ವೈರಾಣು ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಆರೋಗ್ಯ ಇಲಾಖೆಯು ಕೋವಿಡ್‌ ಸಂದರ್ಭದಲ್ಲಿ ಜಾರಿಯಲ್ಲಿದ್ದ ಸರ್ವೇಕ್ಷಣ ಕಣ್ಗಾವಲು ಪಡೆ ಸಕ್ರಿಯಗೊಳಿಸುವುದು ಸೇರಿದಂತೆ ವಿವಿಧ ಮುನ್ನೆಚ್ಚರಿಕೆ ಕ್ರಮಗಳನ್ನು ಒಳಗೊಂಡ ಹೊಸ ಮಾರ್ಗಸೂಚಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ.

Advertisement

ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗುವ ಎಲ್ಲ ಸಾರಿ ಹಾಗೂ ಐಎಲ್‌ಐ ಪ್ರಕರಣಗಳ ಸಂಪೂರ್ಣ ಮಾಹಿತಿಯನ್ನು ಪ್ರತಿನಿತ್ಯ ಐಡಿಎಸ್‌ಪಿ- ಐಎಚ್‌ಐಪಿ ವೆಬ್‌ಸೈಟ್‌ಗೆ ಆಪ್‌ಲೋಡ್‌ ಮಾಡಬೇಕು. ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸೂಚಿಸಲಾಗಿದೆ.

ಕೋವಿಡ್‌ ಪ್ರಕರಣಗಳ ನಿರ್ವಹಣೆಗೆ ಆಸ್ಪತ್ರೆಯಲ್ಲಿ ಅಳವಡಿಸಿಕೊಳ್ಳಲಾದ ವ್ಯವಸ್ಥೆಯನ್ನು ಮರುಪರಿಶೀಲನೆ ನಡೆಸಬೇಕು. ಜತೆಗೆ ಹಾಸಿಗೆ, ಆಕ್ಸಿಜನ್‌ ಬೆಡ್‌, ಐಸಿಯು, ವೆಂಟಿಲೇಟರ್‌, ಔಷಧ, ಪಿಪಿಇ ಕಿಟ್‌, ಎನ್‌95 ಮಾಸ್ಕ್, ಮೆಡಿಕಲ್‌ ಮಾಸ್ಕ್, ಪ್ರಯೋಗಾಲಯ, ಆ್ಯಂಬುಲೆನ್ಸ್‌ ಮತ್ತಿತರ ವ್ಯವಸ್ಥೆಯನ್ನು ಮಕ್ಕಳ ಹಾಗೂ ವಯಸ್ಕರ ನ್ಯುಮೋನಿಯಾ ಚಿಕಿತ್ಸೆಗೆ ಸನ್ನದ್ಧಗೊಳಿಸುವಂತೆ ಆದೇಶ ನೀಡಿದೆ.

ಸಮುದಾಯ ಮಟ್ಟದ ಸರ್ವೇಕ್ಷಣ ಕಣ್ಗಾವಲು ಪಡೆ ಸಕ್ರಿಯವಾಗಿ ಕಾರ್ಯಾಚರಿಸಲು ಸೂಚಿಸಿದ್ದು, ಶಂಕಿತ ಪ್ರಕರಣಗಳು ಅಥವಾ ನ್ಯುಮೋನಿಯಾ ಹೆಚ್ಚಾಗಿ ಕಂಡುಬರುವ ಪ್ರದೇಶಗಳನ್ನು ಗುರುತಿಸಿ, ಐಎಚ್‌ಐಪಿಗೆ ವರದಿ ಸಲ್ಲಿಕೆ ಮಾಡಲು ಸೂಚಿಸಿದೆ. ಜತೆಗೆ ಕೋವಿಡ್‌ ನೆಗೆಟಿವ್‌ ಬಂದು ಸಾರಿ, ಐಎಲ್‌ಐನಿಂದ ಮೃತಪಟ್ಟ ವ್ಯಕ್ತಿಯ ಮಾದರಿಯನ್ನು ಸಮೀಪದ ಪ್ರಯೋಗ ಶಾಲೆಗೆ ಕಡ್ಡಾಯವಾಗಿ ರವಾನಿಸಬೇಕು. ಪರೀಕ್ಷಾ ವಿವರವನ್ನು ಕಡ್ಡಾಯವಾಗಿ ಆರೋಗ್ಯ ಇಲಾಖೆಗೆ ಸಲ್ಲಿಕೆ ಮಾಡಬೇಕು.

ಏನು ಮಾಡಬೇಕು ಮಾಡಬಾರದು?
- ಸೀನುವಾಗ ಹಾಗೂ ಕೆಮ್ಮುವಾಗ ಕರವಸ್ತ್ರ ಬಳಸಬೇಕು.
- ಕೈಗಳನ್ನು ಸಾಬೂನಿನಿಂದ ತೊಳೆಯಬೇಕು.
-ಅನಗತ್ಯವಾಗಿ ಕಣ್ಣು, ಬಾಯಿ, ಮೂಗು ಮುಟ್ಟಿಕೊಳ್ಳುವುದು ಕಡಿಮೆ ಮಾಡಬೇಕು.
- ಜನಸಂದಣಿ ಪ್ರದೇಶಗಳಿಗೆ ದೂರವಿರಬೇಕು.
- ಮಾಸ್ಕ್ ಧರಿಸಬೇಕು.
-ಶಂಕಿತ ವ್ಯಕ್ತಿಗಳು, ಶೀತ, ಜ್ವರ, ನೆಗಡಿ ಲಕ್ಷಣಗಳಿರುವವರಿಂದ ಅಂತರ ಕಾಯ್ದುಕೊಳ್ಳಬೇಕು.
- ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳಬಾರದು.
- ಪೌಷ್ಟಿಕಾಂಶ ಆಹಾರ ಸೇವಿಸಿ, ರೋಗನಿರೋಧಕ ಶಕ್ತಿ ಹೆಚ್ಚಿಸಿ.
- ಅನಾರೋಗ್ಯದಿಂದ ಬಳಲುವವರು ಪ್ರಯಾಣ ಕಡಿತಗೊಳಿಸಿ.
-ಸತತ 4ರಿಂದ 5 ದಿನಗಳ ಕಾಲ ಶೀತ, ನೆಗಡಿ ಕೆಮ್ಮು ಜ್ವರವಿದ್ದರೆ ತಪಾಸಣೆಗೆ ಒಳಗಾಗಬೇಕು.
- ಗರ್ಭಿಣಿಯರು ಸ್ವಯಂ ಚಿಕಿತ್ಸೆಗೆ ಒಳಗಾಗದೆ ವೈದ್ಯರನ್ನು ಭೇಟಿ ಮಾಡಬೇಕು.
- ಲಕ್ಷಣಗಳಿದ್ದರೆ ಸಮೀಪದ ಆಸ್ಪತ್ರೆಗೆ ತೆರಳಿ ಪರೀಕ್ಷೆಗೆ ಒಳಗಾಗಬೇಕು.
- ಲಕ್ಷಣಗಳಿದ್ದವರು ಮಾಸ್ಕ್ ಧರಿಸಿಕೊಂಡು, ಮನೆಯಲ್ಲಿ ಇರಬೇಕು.
- ಲಕ್ಷಣಗಳಿರುವವರು 7 ದಿನಗಳ ಕಾಲ ಪ್ರತ್ಯೇಕವಾಗಿರಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next