ಮುಂಬಯಿ : ವಿದೇಶಕ್ಕೆ ಪಲಾಯನ ಮಾಡಿರುವ ಬಿಲಿಯಾಧಿಪತಿ ವಜ್ರಾಭರಣ ಉದ್ಯಮಿ ನೀರವ್ ಮತ್ತು ಆತನ ಚಿಕ್ಕಪ್ಪ ಮೆಹುಲ್ ಚೋಕ್ಸಿ, ಆಮದು ಹಣಕಾಸು ಸೌಲಭ್ಯ ಮಾರ್ಗದ ಮೂಲಕ ಪಂಜಾಬ್ ನ್ಯಾಶನಲ್ ಬ್ಯಾಂಕಿಗೆ 12,600 ಕೋಟಿ ರೂ.ಗಳನ್ನು ವಂಚಿಸಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಆ ಮಾರ್ಗವನ್ನು ಮುಚ್ಚುವ ಕ್ರಮವಾಗಿ ಬ್ಯಾಂಕುಗಳು ಲೆಟರ್ ಆಫ್ ಅಂಡರ್‌ಟೇಕಿಂಗ್ (ಎಲ್‌ಓಯು) ರೂಪದಲ್ಲಿ ಭದ್ರತೆ ನೀಡುವುದನ್ನು ನಿಷೇಧಿಸಿದೆ.
ಆಮದು ಉದ್ಯಮಿಗಳು ತಮ್ಮ ಸಾಗರೋತ್ತರ ಖರೀದಿಗಳಿಗೆ ಹಣ ಒದಗಿಸಲು ಬಳಸುವ ಲೆಟರ್ ಆಫ್ ಕಂಫರ್ಟ್ ಸೌಕರ್ಯವನ್ನು ಕೂಡ ಆರ್‌ಬಿಐ ತತ್‌ಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿದೆ.
ಆದರೆ ಲೆಟರ್ ಆಫ್ ಕ್ರೆಡಿಟ್ ಮತ್ತು ಬ್ಯಾಂಕ್ ಗ್ಯಾರಂಟಿಗಳು ಈ ಹಿಂದಿನಂತೆಯೇ ಮುಂದುವರಿಯಲಿವೆ; ಆದರೆ ಕೆಲವು ಶರತ್ತುಗಳಿಗೆ ಒಳಪಟ್ಟಿರುತ್ತವೆ ಎಂದು ಆರ್‌ಬಿಐ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಅವರು ಪಂಜಾಬ್ ನ್ಯಾಶನಲ್ ಬ್ಯಾಂಕಿನ ಬ್ರ್ಯಾಡಿ ಹೌಸ್ ಶಾಖೆಯ ನೌಕರರೊಂದಿಗೆ ಶಾಮೀಲಾಗಿ ಯಾವುದೇ ಮಾರ್ಜಿನ್ ಹಣವನ್ನು ಕೂಡ ಭದ್ರತೆಗಾಗಿ ಒದಗಿಸಿದೇ, ಅಕ್ರಮ ಲೆಟರ್ ಆಫ್ ಅಂಡರ್ ಟೇಕಿಂಗ್‌ಗಳನ್ನು ಪಡೆದುಕೊಂಡು ಬ್ಯಾಂಕಿಗೆ ಸಾವಿರಗಟ್ಟಲೆ ಕೋಟಿ ರೂ.ಗಳನ್ನು ವಂಚಿಸಿದ್ದರು.
ಮೋದಿ ಮತ್ತು ಚೋಕ್ಸಿ ಅವರಿಗೆ ಯಾವುದೇ ಪೂರ್ವಾನುಮತಿಯ ಕ್ರೆಡಿಟ್ ಲಿಮಿಟ್ ಕೂಡ ಇರಲಿಲ್ಲ ಎಂಬುದು ಅನಂತರದಲ್ಲಿ ಬೆಳಕಿಗೆ ಬಂದಿತ್ತು.