Advertisement

PM Vishwakarma Yojana: ಪಿಎಂ ವಿಶ್ವಕರ್ಮ ಯೋಜನೆ; ಸದ್ಯ 18 ಜಿಲ್ಲೆಗಳಿಗೆ ಮಾತ್ರ ಅವಕಾಶ 

11:51 AM Oct 12, 2023 | Team Udayavani |

ಉಡುಪಿ: ಕೇಂದ್ರ ಸರಕಾರ ಇತ್ತೀಚೆಗೆ ಜಾರಿ ಮಾಡಿರುವ ಪಿಎಂ ವಿಶ್ವಕರ್ಮ ಯೋಜನೆಗೆ ರಾಜ್ಯದ 18 ಜಿಲ್ಲೆಗಳನ್ನು ಮಾತ್ರ ಮೊದಲ ಹಂತದಲ್ಲಿ ಆಯ್ಕೆ ಮಾಡಿಕೊಂಡಿದ್ದು ಉಡುಪಿ, ದಕ್ಷಿಣ ಕನ್ನಡ ಸಹಿತ 13 ಜಿಲ್ಲೆಗಳ ಫ‌ಲಾನುಭವಿಗಳಿಗೆ ಸದ್ಯ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಲ್ಲ.

Advertisement

ಪಾರಂಪರಿಕವಾಗಿ ನಡೆದುಕೊಂಡು ಬರುತ್ತಿರುವ ಸುಮಾರು 18 ವೃತ್ತಿಗಳವರಿಗೆ ಕೌಶಲ ಮತ್ತು ಆರ್ಥಿಕ ಬಲ ನೀಡಿ ಜೀವನ ಮಟ್ಟ ಸುಧಾರಿಸುವ ಜತೆಗೆ ದೇಶದ ಆರ್ಥಿಕ ಪ್ರಗತಿಗೆ ಅನುಕೂಲವಾಗುವಂತೆ ಕೇಂದ್ರ ಸರಕಾರ ಈ ಯೋಜನೆ ರೂಪಿಸಿದೆ.

ಇದರಲ್ಲಿ ಬಡಗಿಗಳು, ದೋಣಿ ತಯಾರಕರು, ಕುಲುಮೆ ಕೆಲಸಗಾರರು, ಕಮ್ಮಾರರು, ಬುಟ್ಟಿ-ಚಾಪೆ, ಬಾಸ್ಕೆಟ್‌ ನೇಯ್ಗೆಗಾರರು, ಅಕ್ಕ ಸಾಲಿಗರು, ಅಗಸರು, ಶಿಲ್ಪಿ ಗಳು, ಸಾಂಪ್ರದಾಯಿಕ ಗೊಂಬೆ ತಯಾರಕರು, ಕುಂಬಾ ರರು, ಚಮ್ಮಾ ರರು, ದರ್ಜಿ ಗಳು, ಕೇಶ ವಿನ್ಯಾಸಕರು, ಗಾರೆಗಾರರು, ಮಾಲೆ ತಯಾರಕರು, ಮೀನುಗಾರಿಕೆ ಬಲೆ ತಯಾರಕರಿದ್ದಾರೆ.

ತಾಂತ್ರಿಕ ಸಮಸ್ಯೆ ತಡೆಯಲು:

ಮೊದಲ ಹಂತದಲ್ಲಿ ಎಲ್ಲ ಜಿಲ್ಲೆಯ ಫ‌ಲಾನುಭವಿಗಳಿಗೆ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದರೆ ತಾಂತ್ರಿಕ ಸಮಸ್ಯೆ ಸರಿಪಡಿಸಲು ಕಷ್ಟವಾಗಬಹುದು ಎಂಬ ಕಾರಣಕ್ಕೆ 18 ಜಿಲ್ಲೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.  ಎರಡನೇ ಹಂತದಲ್ಲಿ ಎಲ್ಲ ಜಿಲ್ಲೆಗಳಿಗೂ ಅವಕಾಶ ಸಿಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

Advertisement

ಆಯ್ಕೆಯಾದ ಜಿಲ್ಲೆಗಳು:

ಬೆಳಗಾವಿ, ಯಾದಗಿರಿ, ರಾಯಚೂರು, ಬೀದರ್‌, ಕಲಬುರಗಿ, ಬಾಗಲಕೋಟೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಪ್ಪಳ, ಹಾವೇರಿ, ದಾವಣಗೆರೆ, ಗದಗ, ತುಮಕೂರು, ಕೋಲಾರ, ಬಳ್ಳಾರಿ, ವಿಜಯಪುರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಜಿಲ್ಲೆಯ ಫ‌ಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಬಾಕಿ ಇರುವ ಜಿಲ್ಲೆಗಳು:

ಉಡುಪಿ, ದ.ಕ., ಉ.ಕ., ಕೊಡಗು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಧಾರವಾಡ,

ರಾಮನಗರ, ಮಂಡ್ಯ, ಮೈಸೂರು, ಚಾಮರಾಜ ನಗರ, ವಿಜಯನಗರ ಜಿಲ್ಲೆಗಳು ಮೊದಲ ಹಂತ ದಲ್ಲಿ ಆಯ್ಕೆಯಾಗಿಲ್ಲ. ಉಡುಪಿ ಮತ್ತು ದ.ಕ.ದಲ್ಲಿ ಈ ವೃತ್ತಿಯನ್ನು ಮಾಡಿಕೊಂಡಿರುವವರು ಅನೇಕ

ರಿದ್ದು ತತ್‌ಕ್ಷಣವೇ ಈ ಜಿಲ್ಲೆಗಳ ಫ‌ಲಾನುಭವಿ ಗಳಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.

ಎರಡು ಸಮಿತಿ :

ಯೋಜನೆಯ ಸಂಪರ್ಕ ಅನುಷ್ಠಾನ ಹಾಗೂ ಮೇಲ್ವಿಚಾರಣೆಗೆ ಪ್ರತ್ಯೇಕ ಸಮಿತಿ ರಚಿಸಲಾಗಿದೆ. ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಎಂಎಸ್‌ಎಂಇ ಮತ್ತು ಗಣಿ)ಯ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿಯು ರಾಜ್ಯಮಟ್ಟದ ಮೇಲ್ವಿಚಾರಣ ಸಮಿತಿಯ ಅಧ್ಯಕ್ಷರಾಗಿದ್ದು, ವಿವಿಧ ಇಲಾಖೆಯ ಕಾರ್ಯದರ್ಶಿಗಳು, ನಿರ್ದೇಶಕರು, ಆಯುಕ್ತರು ಸದಸ್ಯರಾಗಿದ್ದಾರೆ. ಎಂಎಸ್‌ಎಂಇ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯಲ್ಲಿ ಜಿ.ಪಂ. ಸಿಇಒ ಸಹ ಅಧ್ಯಕ್ಷರಾಗಿದ್ದು, ಲೀಡ್‌ ಬ್ಯಾಂಕ್‌ ಮ್ಯಾನೇಜರ್‌, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ, ನಗರಾಭಿವೃದ್ಧಿ ಕೋಶದ ಯೋಜನ ನಿರ್ದೇಶಕರು, ಕೇಂದ್ರ ಸರಕಾರದ ಎಂಎಸ್‌ಎಂಇ ಕಚೇರಿ ಪ್ರತಿನಿಧಿ, ವಿವಿಧ ಕ್ಷೇತ್ರದ ತಜ್ಞರು, ಸಾಮಾನ್ಯ ಸೇವಾ ಕೇಂದ್ರದ ಜಿಲ್ಲಾ ವ್ಯವಸ್ಥಾಪಕರು ಸದಸ್ಯರಾಗಿದ್ದು, ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.

ಯೋಜನೆಯ ಮೊದಲ ಹಂತದಲ್ಲಿ 18 ಜಿಲ್ಲೆಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗಿದೆ. ಮುಂದಿನ ಹಂತದಲ್ಲಿ ಉಡುಪಿ, ದ.ಕ. ಸೇರುವ ಸಾಧ್ಯತೆಯಿದೆ. 18 ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳ ಫ‌ಲಾನುಭವಿಗಳಿಗೆ ಸದ್ಯ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಲ್ಲ. – ನಾಗರಾಜ ವಿ. ನಾಯಕ್‌, ಗೋಕುಲ್‌ದಾಸ್‌ ನಾಯಕ್‌,ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕೆ ಕೇಂದ್ರ, ಉಡುಪಿ, ದ.ಕ.

Advertisement

Udayavani is now on Telegram. Click here to join our channel and stay updated with the latest news.

Next