ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅಥ್ಲೀಟ್ ಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 15ರಂದು ಕೆಂಪು ಕೋಟೆಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳನ್ನಾಗಿ ಆಹ್ವಾನಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಅಶೋಕ ಲೇಲ್ಯಾಂಡ್ ನ ಮಧ್ಯಮ ಗಾತ್ರದ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಹೆಚ್ಚಳ..!
ಕೆಂಪುಕೋಟೆಯಲ್ಲಿನ ಕಾರ್ಯಕ್ರಮ ಹಾಗೂ ದೆಹಲಿಯ ಲೋಕ್ ಕಲ್ಯಾಣ್ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ನಡೆಸಲಿರುವ ಸಂವಾದದಲ್ಲಿ ಎಲ್ಲಾ ಅಥ್ಲೀಟ್ ಗಳು ಪಾಲ್ಗೊಳ್ಳುವಂತೆ ಆಹ್ವಾನ ನೀಡಿರುವುದಾಗಿ ಪಿಟಿಐ ವರದಿ ಮಾಡಿದೆ.
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತದಿಂದ 120 ಮಂದಿ ಅಥ್ಲೀಟ್ಸ್ ಗಳು ಭಾಗವಹಿಸಿದ್ದು, ಇದರಲ್ಲಿ 56 ಮಂದಿ ಮಹಿಳಾ ಕ್ರೀಡಾಪಟುಗಳಿರುವುದು ವಿಶೇಷತೆಯಾಗಿದೆ ಎಂದು ವರದಿ ವಿವರಿಸಿದೆ. ಸೋಮವಾರ ಒಲಿಂಪಿಕ್ಸ್ ಹಾಕಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ಮಹಿಳೆಯರು ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಗುರ್ಜಿತ್ ಕೌರ್ ಅವರ ಏಕೈಕ ಗೋಲಿನ ನೆರವಿನಿಂದ ಎದುರಾಳಿ ಆಸ್ಟ್ರೇಲಿಯಾ ವಿರುದ್ಧ ಜಯಭೇರಿ ಬಾರಿಸಿತ್ತು. ಬುಧವಾರ (ಆಗಸ್ಟ್ 04) ಭಾರತದ ಹಾಕಿ ತಂಡ ಅರ್ಜೆಂಟೀನಾ ವಿರುದ್ಧ ಸೆಣಸಲಿದೆ.
ಟೋಕಿಯೊ ಒಲಿಂಪಿಕ್ಸ್ 2020ಯಲ್ಲಿ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಭಾರತಕ್ಕೆ ಮೊದಲ ಬೆಳ್ಳಿ ಪದಕವನ್ನು ತಂದುಕೊಟ್ಟಿದ್ದಾರೆ. ಚಾನು 49 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಈ ಬೆಳ್ಳಿ ಪದಕವನ್ನು ಜಯಿಸಿದ್ದರು. ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಪದಕ ಪಡೆದ ಎರಡನೇ ಭಾರತೀಯ ಆಟಗಾರ್ತಿಯಾಗಿದ್ದಾರೆ.