Advertisement

ಪಿಎಂ ಸ್ವನಿಧಿ ಯೋಜನೆ : ಬೀದಿ ಬದಿ ವ್ಯಾಪಾರಿಗಳ ಆಶಾಕಿರಣ

11:07 AM Sep 14, 2020 | sudhir |

ಮಣಿಪಾಲ: ಕೋವಿಡ್‌ -19 ಸೋಂಕು ಮತ್ತು ಲಾಕ್‌ಡೌನ್‌ಗಳು ಜನ ಜೀವನದ ಮೇಲೆ ಅಗಾಧವಾದ ಪರಿಣಾಮ ಬೀರಿವೆ. ಆರೋಗ್ಯ ಸಂಕಷ್ಟ ವನ್ನಷ್ಟೇ ಅಲ್ಲ, ಆರ್ಥಿಕ ಸಂಕಷ್ಟವನ್ನೂ ಈ ಸಾಂಕ್ರಾಮಿಕ ಪಿಡುಗು ತಂದೊಡ್ಡಿದೆ. ಈ ಹಿನ್ನೆಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳು ಮತ್ತೆ ಪುನಶ್ಚೇತನ ಕಾಣಲು ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಕಳೆದ ಜೂನ್‌ 1ರಿಂದ ದೇಶಾದ್ಯಂತ ಸ್ವನಿಧಿ ಯೋಜನೆ ಜಾರಿಯಾಗಿದೆ. ಹಾಗಾಗಿ ಈ ಯೋಜನೆಯ ಸಂಪೂರ್ಣ ಮಾಹಿತಿ ಸೇರಿದಂತೆ, ಅರ್ಜಿ ಸಲ್ಲಿಕೆ ಹೇಗೆ ? ಯೋಜನೆ ಸೌಲಭ್ಯ ಪಡೆಯಲು ಯಾರು ಅರ್ಹರು ಎಂಬಿತ್ಯಾದಿ ಮಾಹಿ ತಿ ಇಲ್ಲಿದೆ.

Advertisement

ಏನೇನು ದಾಖಲೆಗಳು ಬೇಕು?
ವ್ಯಾಪಾರಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸುವಾಗ ತಾವು ವ್ಯಾಪಾರ ಮಾಡುವ ಬಗೆಗಿನ ಸರ್ಟಿಫಿಕೇಟ್‌ (CoV) ಅಥವಾ ವ್ಯಾಪಾರಿಗಳ ಗುರುತಿನ ಚೀಟಿ (ID) ಅಥವಾ ವ್ಯಾಪಾರ ಮಾಡುವ ಪ್ರೊವಿಶನಲ್‌ ಸರ್ಟಿಫಿಕೇಟ್‌ ಅಥವಾ ಶಿಫಾರಸಿನ ಪತ್ರ (LoR)ವನ್ನು ಸಲ್ಲಿಸಬೇಕು. ಇದರ ಜತೆಗೆ ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ, ಆಧಾರ್‌ ಜೋಡಣೆಯಾಗಿರುವ ಬ್ಯಾಂಕ್‌ ಖಾತೆ ವಿವರ ಹಾಗೂ ಸ್ಥಳೀಯ ಸಾಕ್ಷಿದಾರರ ಸಹಿ ಕೂಡ ಅರ್ಜಿ ಸಲ್ಲಿಸುವಾಗ ಅಗತ್ಯವಿದೆ. ಇನ್ನು ಅರ್ಜಿಯಲ್ಲಿ 20ಕ್ಕೂ ಹೆಚ್ಚು ಕಾಲಂಗಳಿದ್ದು, ಭರ್ತಿ ಮಾಡುವಾಗ ಸೂಕ್ತ ಮಾಹಿತಿಯನ್ನು ನಮೂದಿಸಬೇಕು.

ಪಿಎಂ ಸ್ವನಿಧಿಗೆ ಸಾಲ ನೀಡುವ ಸಂಸ್ಥೆಗಳು
ಬ್ಯಾಂಕ್‌ಗಳು, ಶೆಡ್ಯೂಲ್ಡ್ ಕಮರ್ಶಿಯಲ್‌ ಬ್ಯಾಂಕ್‌ (ಎಸ್‌ಸಿಬಿ), ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ (ಆರ್‌ಆರ್‌ಬಿ), ಸಣ್ಣ ಹಣಕಾಸು ಬ್ಯಾಂಕ್‌ (ಎಸ್‌ಎಫ್ಬಿ), ಕೋ-ಆಪರೇಟಿವ್‌ ಬ್ಯಾಂಕ್‌, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಎಸ್‌ಎಚ್‌ಜಿ ಬ್ಯಾಂಕ್‌. ಉದಾ: ಸ್ಟ್ರೀಟ್‌ ನಿಧಿ, ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ (ಎನ್‌ಬಿಎಫ್ಸಿ)ಗಳು ಮತ್ತು ಸಣ್ಣ ಹಣಕಾಸು ಸಂಸ್ಥೆ (ಎಂಎಫ್ಐ)ಗಳು.

ಏನಿದು ಯೋಜನೆ ?
ಪಿಎಂ ಸ್ಟ್ರೀಟ್‌ ವೆಂಡರ್ಸ್‌ ಆತ್ಮನಿರ್ಭರ ನಿಧಿ (PM SVANidhi) ಎಂಬುದು ಸಾಲ ಯೋಜನೆಯ ಹೆಸರಾಗಿದ್ದು, ಆತ್ಮನಿರ್ಭರ ಯೋಜನೆಯ ಭಾಗವಾಗಿದೆ. ಈ ಯೋಜನೆಯಡಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ತಲಾ 10 ಸಾವಿರ ರೂ.ವರೆಗೆ ಸಾಲ ನೀಡಲಾಗುತ್ತಿದ್ದು, ಒಂದು ವರ್ಷದೊಳಗೆ ಮಾಸಿಕ ಕಂತುಗಳ ಮೂಲಕ ಹಿಂದಿರುಗಿಸಬೇಕಾಗುತ್ತದೆ.

ಯಾರು ಅರ್ಜಿ ಸಲ್ಲಿಸಬಹುದು ?
2020ರ ಮಾರ್ಚ್‌ 24ರ ವೇಳೆಯಲ್ಲಿ ಹಾಗೂ ಅದಕ್ಕೂ ಮೊದಲು ನಗರ ಪ್ರದೇಶದಲ್ಲಿ ವ್ಯಾಪಾರ ಮಾಡುತ್ತಿದ್ದವರು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ವ್ಯಾಪಾರ ಮಾಡುತ್ತಿರುವ ಗ್ರಾಮೀಣ/ನಗರ ವ್ಯಾಪಾರಿಗಳು ಪಿಎಂ ಸ್ವನಿಧಿ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ.

Advertisement

ಯೋಜನೆಯ ಲಾಭಗಳು
– ಕಾರ್ಯಸಾಧ್ಯತೆ ಬಂಡವಾಳದ ಸಾಲದ ಅವಧಿ 1 ವರ್ಷ
– ಸಮಯೋಚಿತ ಮರುಪಾವತಿಯ ಮೇಲೆ ಬಡ್ಡಿ ಸಬ್ಸಿಡಿ ಶೇ. 7, ತ್ತೈಮಾಸಿಕ ಪಾವತಿಗೂ ಅವಕಾಶ
– ಡಿಜಿಟಲ್‌ ವಹಿವಾಟಿನ ಮೇಲೆ ಮಾಸಿಕ ಕ್ಯಾಶ್‌ ಬ್ಯಾಕ್‌ ಪ್ರೋತ್ಸಾಹಕ
– ಮೊದಲ ಸಾಲದ ಸಮಯೋಚಿತ/ಶೀಘ್ರ ಪಾವತಿಯ ಮೇಲೆ ಸಾಲ ಅರ್ಹತೆ ಏರಿಸಲಾಗುತ್ತದೆ
– ದೇಶಾದ್ಯಂತ ನಗರ ಸ್ಥಳೀಯ ಸಂಸ್ಥೆಗಳನ್ನು ಈ ಯೋಜನೆಯು ಒಳಗೊಳ್ಳುತ್ತದೆ
– ಸಾಲ ಪಡೆಯಲು ಯಾವುದೇ ಮೇಲಾಧಾರ ಭದ್ರತೆಯ ಅಗತ್ಯವಿಲ್ಲ. ಶೀಘ್ರ ಪಾವತಿಗೆ ಯಾವುದೇ ದಂಡವಿಲ್ಲ
– ಮೊಬೈಲ್‌ ಅಪ್ಲಿಕೇಶನ್‌ ಮತ್ತು ವೆಬ್‌ ಪೋರ್ಟಲ್‌ ಆಧಾರಿತ ಅರ್ಜಿ ಪ್ರಕ್ರಿಯೆ

ಇಲ್ಲಿಯವರೆಗಿನ ಅಂಕಿ-ಅಂಶ
ಪಿಎಂ ಸ್ವನಿಧಿ ಯೋಜನೆಯಡಿ ಈಗಾಗಲೇ ದೇಶಾದ್ಯಂತ 10.42 ಲಕ್ಷಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳು ಅರ್ಜಿ ಸಲ್ಲಿಸಿದ್ದು, ಆ ಪೈಕಿ 3.56 ಲಕ್ಷಕ್ಕೂ ಅಧಿಕ ಮಂದಿಗೆ ಈಗಾಗಲೇ ಸಾಲ ಮಂಜೂರಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ. 2020ರ ಜೂನ್‌ 1ರಂದು ಆರಂಭಗೊಂಡ ಈ ಯೋಜನೆ ಮಾರ್ಚ್‌, 2022ರ ವರೆಗೆ ಅನುಷ್ಠಾನದಲ್ಲಿ ಇರುತ್ತದೆ.

ಅರ್ಜಿ ಸಲ್ಲಿಕೆ ಹೇಗೆ ?
ವೆಬ್‌ ಪೋರ್ಟಲ್‌ www.pmsvanidhi.mohua.gov.in ಮೂಲಕ ಸಾಲ ಪಡೆಯಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಸಾಲ ಪಡೆಯಲು “Apply for loan” ಆಯ್ಕೆಯನ್ನು ಕ್ಲಿಕ್‌ ಮಾಡಬೇಕು. ಈ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಕೆಗೆ ಬೇಕಾದ ಹೆಚ್ಚಿನ ವಿವರಗಳೂ ಲಭ್ಯವಿವೆೆ. ಪಿಎಂ ಸ್ವನಿಧಿ ಮೊಬೈಲ್‌ ಅಪ್ಲಿಕೇಶನ್‌ ಅನ್ನು ಕೂಡ ಬಳಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next