ಬೆಂಗಳೂರು: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ (ಪಿಎಂ ಸ್ವನಿಧಿ)ಯೋಜನೆ ಸವಲತ್ತುಗಳನ್ನು ಸಕಾಲದಲ್ಲಿ ಸದುಪಯೋಗ ಮಾಡಿಕೊಳ್ಳುವಲ್ಲಿ ರಾಜಧಾನಿಯ ಬೀದಿ ಬದಿ ವ್ಯಾಪಾರಿಗಳು ಮುಂದಿದ್ದಾರೆ.
ಇಡೀ ರಾಜ್ಯಕ್ಕೆ ಹೋಲಿಕೆ ಮಾಡಿದರೆ ಸಿಲಿಕಾನ್ ಸಿಟಿಯಲ್ಲಿರುವ ಬೀದಿ ಬದಿ ವ್ಯಾಪಾರಿಗಳು ಪ್ರಧಾನ ಮಂತ್ರಿಗಳ ಸ್ವನಿಧಿ ಯೋಜನೆ ಸಂಪೂರ್ಣ ಲಾಭ ಪಡೆದುಕೊಂಡಿದ್ದು. 2ನೇ ಸ್ಥಾನದಲ್ಲಿ ಮೈಸೂರು, 3ನೇ ಸ್ಥಾನದಲ್ಲಿ ಹುಬ್ಬಳ್ಳಿ-ಧಾರವಾಡ ಮತ್ತು 4ನೇ ಸ್ಥಾನದಲ್ಲಿ ಬಳ್ಳಾರಿ ಇದೆ. ಬೆಂಗಳೂರಿನಲ್ಲಿ ಪಿಎಂ ಸ್ವನಿಧಿ ಯೋಜನೆ ಸವಲತ್ತು ಪಡೆಯುವಲ್ಲಿ 57,788 ಮಂದಿ ಅರ್ಹರಿದ್ದು, ಇದರಲ್ಲಿ 35,459 ಫಲಾನುಭವಿಗಳಿಗೆ ಪಿಎಂ ಸ್ವನಿಧಿಯಿಂದ ಅನುದಾನ ಬಿಡುಗಡೆ ಆಗಿದೆ. ಇದರಲ್ಲಿ 26,836 ಮಂದಿಗೆ ಪ್ರಧಾನ ಮಂತ್ರಿ ಸ್ವನಿಧಿಯಿಂದ ಹಣ ಪಾವತಿ ಆಗಿದೆ.
ಕಡಿಮೆ ಬಡ್ಡಿದರದಲ್ಲಿ ಸಾಲ: ಪಿಎಂ ಸ್ವನಿಧಿಯಡಿ ಬೀದಿಬದಿ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರ ಯಾವುದೇ ಆಧಾರದ ಅವಶ್ಯಕತೆಯಿಲ್ಲದೆ ಒಂದು ವರ್ಷದ ಅವಧಿಯೊಂದಿಗೆ 10 ಸಾವಿರ ರೂ.ವರೆಗೆ ಸಾಲ ನೀಡುತ್ತಿದೆ. ಮಾಸಿಕ ಕಂತುಗಳಲ್ಲಿ ಸಾಲ ಮರುಪಾವತಿಗೆ ಅವಕಾಶ ನೀಡಲಾಗಿದೆ. ಹಾಗೆಯೇ ಡಿಜಿಟಲ್ ವಹಿವಾಟಿಗೆ ಉತ್ತೇಜಿಸ ಲಾಗುತ್ತದೆ. ವಾರ್ಷಿಕ ಶೇ.7ರಷ್ಟು ಬಡ್ಡಿ ಸಹಾಯಧನ ಮತ್ತು ವಾರ್ಷಿಕ 12 ಸಾವಿರ ವರೆಗೆ ಕ್ಯಾಶ್ ಬ್ಯಾಕ್ ಪಡೆ ಯಬಹುದಾಗಿದೆ. 30 ದಿನಗಳಿಗಿಂತ ಕಡಿಮೆ ಸಮ ಯ ದಲ್ಲಿ ಸಾಲ ಪಡೆಯಬಹುದಾಗಿದೆ. ಹಾಗೆಯೇ ಕೋವಿಡ್ ಸಂದರ್ಭದಲ್ಲಿ ತಮ್ಮ ಸ್ವಗ್ರಾಮಗಳಿಗೆ ತೆರಳಿದ್ದ ಬೀದಿ ಬದಿ ವ್ಯಾಪಾರಿಗಳು ಸಹ ವಾಪಸ್ ಬಂದ ಬಳಿಕ ಅವರು ಕೂಡ ಸಾಲಕ್ಕೆ ಅರ್ಹರಾಗಿದ್ದಾರೆ. 1 ಲಕ್ಷಕ್ಕೂ ಅಧಿಕ ಜನ ಬೀದಿ ಬದಿ ವ್ಯಾಪಾರಿಗಳು ಪಿಎಂ ಸ್ವನಿಧಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಹೀಗಾಗಿ ಈ ಸಂಖ್ಯೆಯ ಮುಂದಿನ ದಿನಗಳಲ್ಲಿ ಮತ್ತಷ್ಟು ದ್ವಿಗುಣಗೊಳ್ಳುವ ಸಾಧ್ಯತೆ ಇದೆ. ಪ್ರಧಾನ ಮಂತ್ರಿಗಳ ಸ್ವನಿಧಿ ಬಳಕೆ ಬಗ್ಗೆ ಮತ್ತು ಕೇಂದ್ರದಲ್ಲಿ ದೊರೆಯುತ್ತಿರುವ ಸವಲತ್ತುಗಳ ಬಗ್ಗೆ ರಾಜಧಾನಿಯಲ್ಲಿ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ವತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಿಗಳಲ್ಲಿ ಅರಿವು ಮೂಡಿಸಲಾಗಿದೆ. ಈ ಬಗ್ಗೆ ಕಾರ್ಯಾಗಾರಗಳನ್ನು ಆಗಾಗ್ಗೆ ಅಲ್ಲಲ್ಲಿ ಹಮ್ಮಿಕೊಳ್ಳಲಾಗಿತ್ತು. ಆ ಹಿನ್ನೆಲೆಯಲ್ಲಿ ವ್ಯಾಪಾರಿಗಳಲ್ಲಿ ಕೇಂದ್ರ ಸರ್ಕಾರದ ಸವಲತ್ತು ಪಡೆಯುವಲ್ಲಿ ಆಸಕ್ತಿತೋರುತ್ತಿದ್ದಾರೆ ಎಂದು ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಸದಸ್ಯರು ಮಾಹಿತಿ ನೀಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ ಸಂದರ್ಭದಲ್ಲಿ ಈ ಯೋಜನೆ ಜಾರಿಗೆ ತಂದರು. ಇದರಿಂದಾಗಿ ತಿಂಗಳಿಗೆ 10 ಸಾವಿರ ಪಡೆದು ಬೀದಿ ಬದಿಗಳಲ್ಲಿ ವ್ಯಾಪಾರ ಮಾಡಲು ಸಾಧ್ಯವಾಗಿದೆ ಎಂದು ಬೀದಿಬದಿ ವ್ಯಾಪಾರಿ ಸುರೇಶ್ ಹೇಳುತ್ತಾರೆ.
ಕೇಂದ್ರ ಸರ್ಕಾರ ಬೀದಿ ಬದಿ ವ್ಯಾಪಾರಿಗಳು ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಉತ್ತಮ ಯೋಜನೆ ರೂಪಿಸಿದೆ. ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ ಕೂಡ ಇದರಲ್ಲಿ ಸೇರಿದೆ. ಈಗಾಗಲೇ ಪಿಎಂ ಸ್ವನಿಧಿ ಯೋಜನೆಯ ಸವಲತ್ತುಗಳನ್ನು ಪಡೆಯುವ ಬಗ್ಗೆ ಜತೆಗೆ ಆನ್‌ಲೈನ್ ಅರ್ಜಿ ಸಲ್ಲಿಸುವ ಬಗ್ಗೆ ಬೀದಿ ಬದಿ ವ್ಯಾಪಾರಿಗಳಿಗೆ ಅರಿವು ಮೂಡಿಸ ಲಾಗಿದೆ. ಆ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಗಳ ಫಲಾನು ಭವಿಗಳ ಸಂಖ್ಯೆ ಅಧಿಕವಾಗುತ್ತಿರುವುದು ಖುಷಿಯ ವಿಚಾರ.
-ರಂಗಸ್ವಾಮಿ, ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ
-ದೇವೇಶ ಸೂರಗುಪ್ಪ