ಚಂಡೀಗಢ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಕೂಡಾ ಪಾಕಿಸ್ತಾನದ ರೀತಿಯೇ ಗುಪ್ತ ಅಜೆಂಡಾ ಹೊಂದಿದ್ದು, ಭಾರತವನ್ನು ಇಬ್ಬಾಗ ಮಾಡಿ ಪ್ರತ್ಯೇಕವಾದಿಗಳ ಜತೆ ಕೈಜೋಡಿಸುವುದು ಅವರ ಕನಸಾಗಿದೆ. ಇದಕ್ಕೆ ಕುಮಾರ್ ವಿಶ್ವಾಸ್ ಆರೋಪದ ಹೇಳಿಕೆಯನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಪ್ರತಿಕ್ರಿಯೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:ಸ್ಮಾರ್ಟ್ ನಗರದಲ್ಲಿ ಸ್ಮಾರ್ಟ್ ‘ಸೈಕಲ್ ಟ್ರ್ಯಾಕ್’ ! ಸೈಕಲ್ ಸ್ನೇಹಿ ಮಂಗಳೂರು
“ಪ್ರಧಾನಿ ಮೋದಿಜೀಯವರೇ ನಿಮ್ಮ ಎಲ್ಲಾ ಗುಪ್ತಚರ ಇಲಾಖೆಯನ್ನು ರದ್ದು ಮಾಡಿ, ಗಾಜಿಯಾಬಾದ್ ಕವಿ(ಕುಮಾರ್ ವಿಶ್ವಾಸ)ಯನ್ನು ಆ ಕೆಲಸಕ್ಕೆ ನೇಮಕ ಮಾಡಿದರೆ, ಭಯೋತ್ಪಾದಕರು ಯಾರು ಎಂಬುದನ್ನು ಅವರೇ ಹೇಳುತ್ತಾರೆ” ಎಂದು ಕೇಜ್ರಿವಾಲ್ ವ್ಯಂಗ್ಯವಾಡಿರುವುದಾಗಿ ವರದಿ ತಿಳಿಸಿದೆ.
ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್ ಮುಖ್ಯಮಂತ್ರಿ ಅಥವಾ ಸ್ವತಂತ್ರ (ಖಲಿಸ್ತಾನ್) ಪ್ರಧಾನಿಯಾಗುವ ಬಯಕೆ ವ್ಯಕ್ತಪಡಿಸಿದ್ದರು ಎಂದು ಕುಮಾರ್ ವಿಶ್ವಾಸ್ ಇತ್ತೀಚೆಗೆ ಆರೋಪಿಸಿದ್ದರು. ಈ ಹೇಳಿಕೆಯನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ಸೋಮವಾರ (ಫೆ.21) ಚುನಾವಣಾ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು.
ಆಮ್ ಆದ್ಮಿ ಪಕ್ಷ ಅಧಿಕಾರ ಪಡೆಯಲು ಪ್ರತ್ಯೇಕವಾದಿಗಳ ಜತೆ ಕೈಜೋಡಿಸಲು ಸಿದ್ಧವಾಗಿದೆ. ಒಂದು ವೇಳೆ ಅಗತ್ಯ ಬಿದ್ದರೆ ಅವರು ದೇಶವನ್ನು ಇಬ್ಭಾಗ ಮಾಡಲು ತಯಾರಾಗಿದ್ದಾರೆ. ಅವರ ಅಜೆಂಡಾ ಕೂಡಾ ನಮ್ಮ ವಿರೋಧಿ ದೇಶವಾದ ಪಾಕಿಸ್ತಾನಕ್ಕಿಂತ ಭಿನ್ನವಾಗಿಲ್ಲ ಎಂದು ಪ್ರಧಾನಿ ಮೋದಿ ಕಿಡಿಕಾರಿದ್ದರು.