ಮಣಿಪಾಲ: ಹಳ್ಳಿಗಳ ‘ಮನೆ ಬಾಗಿಲಿಗೆ ಹೃದ್ರೋಗ ಚಿಕಿತ್ಸೆ’ ರೂವಾರಿ ಮಂಗಳೂರಿನ ಖ್ಯಾತ ವೈದ್ಯ ಡಾ. ಪದ್ಮನಾಭ ಕಾಮತ್ ಅವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶ್ಲಾಘಿಸಿದ್ದಾರೆ.
ಜನೌಷಧ ದಿನಾಚರಣೆ ಪ್ರಯುಕ್ತ ಇಂದು (ಮಾರ್ಚ್ 7) ದೇಶದ ನಾಲ್ಕು ಭಾಗಗಳ ಜನೌಷಧ ಕೇಂದ್ರದ ಮಾಲೀಕರು ಮತ್ತು ಫಲಾನುಭವಿಗಳ ಜತೆ ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಸಂವಾದದಲ್ಲಿ ವೈದ್ಯ ಡಾ. ಪದ್ಮನಾಭ ಕಾಮತ್ ಭಾಗವಹಿಸಿದರು.
ಈ ವೇಳೆ ಮಾತನಾಡಿದ ಅವರು, ಮೂರು ವರ್ಷದಿಂದ ಜನೌಷಧಿ ಅಭಿಯಾನದಲ್ಲಿ ಭಾಗಿಯಾಗಿದ್ದೇನೆ. ಗ್ರಾಮೀಣ ಭಾಗದ ಬಡಜನರಿಗೆ ಹೃದಯಾಘಾತ ಆಗುತ್ತಿತ್ತು. ಅವರಿಗೆ ತಕ್ಷಣದ ಚಿಕಿತ್ಸೆ ನೀಡುವುದು ಕಷ್ಟ ಆಗುತ್ತಿತ್ತು. ಹಾಗಾಗಿ ಜನೌಷಧಿ ಕೇಂದ್ರದಲ್ಲಿ ಇಸಿಜಿ ಯಂತ್ರ ಹಾಕಿದೆ. ಆರಂಭದಲ್ಲಿ ಜನರು ನನಗೆ ಹುಚ್ಚು ಅಂದರು. ಆದರೆ ನನಗೆ ಜನರ ಕಷ್ಟಗಳಿಗೆ ಸ್ಪಂದಿಸುವುದು ಮುಖ್ಯವಾಗಿತ್ತು. ಆರು ಕಡೆ ಜನೌಷಧಿ ಕೇಂದ್ರದಲ್ಲಿ ಇಸಿಜಿ ಯಂತ್ರ ಅಳವಡಿಸಿದೆ. ಇದರ ಫಲಾನುಭವಿಗಳ ಸಂತೋಷ ಕಂಡರೆ ಸಾರ್ಥಕ ಅನುಭವ ಆಗುತ್ತದೆ. ಈ ಮೂಲಕ ನೂರು ಹೃದಯಾಘಾತವಾಗುವ ಪ್ರಕರಣ ಪತ್ತೆ ಮಾಡಿದ್ದೇವೆ. ರೋಗಿಗಳ ಜೀವ ಉಳಿಸಿದ್ದೇವೆ. ಜನೌಷಧಿ, ಸೇವೆ ಮತ್ತು ಉದ್ಯೋಗದ ಉತ್ತಮ ಸಂದೇಶ ನೀಡಿದೆ. ಓರ್ವ ನಿರುದ್ಯೋಗಿ ಯುವಕನಿಗೆ ಹಣ ಕೊಟ್ಟು ಜನೌಷಧ ಆರಂಭಿಸಲು ಪ್ರೇರಣೆ ನೀಡಿದೆ. ಈಗ ಆ ಕೇಂದ್ರ ಅಗ್ರಪಂಕ್ತಿಯಲ್ಲಿದೆ ಎಂದರು.
ಕಾಮತ್ ಅವರ ಮಾತುಗಳನ್ನು ಆಲಿಸಿದ ಪ್ರಧಾನಿ ಮೋದಿ, ಮೊದಲಿಗೆ ನಿಮ್ಮ ಸೇವಾ ಮನೋಭಾವಕ್ಕೆ ಶುಭಾಶಯ ತಿಳಿಸುತ್ತೇನೆ ಎಂದರು. ಜತೆಗೆ ‘ಜನೌಷಧಿ ಜನ ಉಪಯೋಗಿ’ ಎನ್ನುವ ಘೋಷವಾಕ್ಯ ಸೂಚಿಸಿದರು. ನಿಮ್ಮನ್ನು ನೋಡಿದರೆ ‘ಸೇವೆ’ ಮಾಡುವುದು ನಿಮ್ಮ ಸಂಸ್ಕಾರ ಎಂದೆನ್ನಿಸುತ್ತದೆ. ನಿಜವಾದ ವೈದ್ಯರ ಪ್ರತಿರೂಪ ನೀವು, ನಿಮ್ಮನ್ನು ಭೇಟಿ ಮಾಡಿರುವುದು ಖುಷಿ ನೀಡಿತು ಎಂದರು.
ಇನ್ನು ವೈದ್ಯ ಕಾಮತ್ ಜತೆ ನಡೆಸಿದ ಸಂಭಾಷಣೆಯ ಕುರಿತು ಟ್ವೀಟ್ ಮಾಡಿರುವ ಮೋದಿ, ಮಂಗಳೂರಿನ ವೈದ್ಯ ಡಾ. ಕಾಮತ್ ಅವರು ತಮ್ಮ ಸ್ವಇಚ್ಛೆಯಿಂದ ಹೃದಯ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಜತೆಗೆ ಜನೌಷಧಿ ಯೋಜನೆ ಅತೀ ಕಡಿಮೆ ಅವಧಿಯಲ್ಲಿ ಜನ ಉಪಯೋಗಿಯಾಗಿ ಅನೇಕ ಜನರ ಆರೋಗ್ಯಯುತ ಜೀವನಕ್ಕೆ ಸಹಾಯಕವಾಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮನೆ ಬಾಗಿಲಿಗೆ ಸೇವೆ :
ಇನ್ನು ವೈದ್ಯ ಕಾಮತ್ ಅವರು ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿದ್ದಾರೆ. ಈ ಗ್ರೂಪಿನಲ್ಲಿ ವೈದ್ಯರು ಹಾಗೂ ಆ್ಯಂಬ್ಯುಲೆನ್ಸ್ ಚಾಲಕರೂ ಇದ್ದಾರೆ. ಸರ್ಕಾರಿ, ಖಾಸಗಿ ಆಸ್ಪತ್ರೆ ಮಾತ್ರವಲ್ಲ ಕ್ಲಿನಿಕಲ್ ವೈದ್ಯರೂ ಈ ಗುಂಪಿನಲ್ಲಿದ್ದಾರೆ. ತಮ್ಮಲ್ಲಿಗೆ ಬರುವ ಹೃದ್ರೋಗಿಯ ತಪಾಸಣೆ ನಡೆಸಿ ಇಸಿಜಿ ವರದಿಯನ್ನು ಫೋಟೋ ತೆಗೆದು ಈ ಗ್ರೂಪ್‌ಗೆ ಅಪ್‌ಲೋಡ್ ಮಾಡಿದರೆ ಸಾಕು. ಕ್ಷಣಮಾತ್ರದಲ್ಲಿ ಡಾ.ಪದ್ಮನಾಭ ಕಾಮತ್ ಅವರು ವರದಿಯನ್ನು ಪರಿಶೀಲಿಸಿ ಸಲಹೆ ನೀಡುತ್ತಾರೆ. ಇದರಿಂದಾಗಿ ನೂರಾರು ಹೃದ್ರೋಗಿಗಳ ಪ್ರಾಣ ಉಳಿಯುವಂತಾಗಿದೆ. ಪ್ರಸ್ತುತ ಡಾ.ಪದ್ಮನಾಭ ಕಾಮತ್ ಅವರ ಬಳಿ ನಾಲ್ಕು ವಾಟ್ಸ್‌ಆ್ಯಪ್ ಗ್ರೂಪ್ ಇದ್ದು, ಮೂರು ಗ್ರೂಪ್‌ಗಳಲ್ಲಿ ರಾಜ್ಯಾವ್ಯಾಪಿ ವೈದ್ಯರಿದ್ದರೆ. ನಾಲ್ಕನೆಯದರಲ್ಲಿ ದೇಶಾದ್ಯಂತದ ವೈದ್ಯರಿದ್ದಾರೆ.
ಡಾ.ಪದ್ಮನಾಭ ಕಾಮತ್ ಅವರು ಕಾರ್ಡಿಯಾಲಜಿ ಎಟ್ ಡೋರ್ ಸ್ಟೆಪ್(ಸಿಎಡಿ)ಹೆಸರಿನಲ್ಲಿ ಇಸಿಜಿ ಯಂತ್ರಗಳನ್ನು ವಿತರಿಸುತ್ತಿದ್ದಾರೆ. ಈ ಮೂಲಕ ಹಳ್ಳಿಗಳಿಗೆ ಮನೆ ಬಾಗಿಲಿಗೆ ಹೃದ್ರೋಗ ಚಿಕಿತ್ಸೆ ನೀಡುತ್ತಿದ್ದಾರೆ. ಇವರು ರಚಿಸಿರುವ ವೈದ್ಯರ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಖಾಸಗಿ ವ್ಯಕ್ತಿಗಳೂ ತುರ್ತು ಸಂದೇಶ ಕಳುಹಿಸಿ ವೈದ್ಯಕೀಯ ಸಲಹೆ ಪಡೆಯಬಹುದು. ವೈದ್ಯರ ವಾಟ್ಸ್‌ಆ್ಯಪ್ ಗುಂಪಿನ ಸಂಖ್ಯೆ ಹೆಲ್ಪ್ ಲೈನ್ (9743287599) ಕಾರ್ಯ ನಿರ್ವಹಿಸುತ್ತಿದೆ. ಈ ಸಂಖ್ಯೆಗೆ ಕರೆ ಹೋಗುವುದಿಲ್ಲ. ಆದರೆ ಹೃದ್ರೋಗಕ್ಕೆ ಸಂಬಂಧಿಸಿ ಯಾವುದೇ ವೈದ್ಯಕೀಯ ಸಲಹೆಗಳನ್ನು ಇವರು ನೀಡುತ್ತಾರೆ. ಯಾವುದೇ ಹೊತ್ತಿನಲ್ಲಿ ಸಮಸ್ಯೆ ಬಂದಲ್ಲಿ ಅದಕ್ಕೆ ತಕ್ಷಣ ಸ್ಪಂದಿಸುವುದು ಇವರ ಹೆಚ್ಚುಗಾರಿಕೆ.