ನವದೆಹಲಿ: ತಮಿಳುನಾಡಿನಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ (ಜನವರಿ 12) 11 ನೂತನ ಸರ್ಕಾರಿ ಮೆಡಿಕಲ್ ಕಾಲೇಜು ಹಾಗೂ ಚೆನ್ನೈನಲ್ಲಿ ಶಾಸ್ತ್ರೀಯ ತಮಿಳು ಭಾಷಾ ಕೇಂದ್ರದ ನೂತನ ಕ್ಯಾಂಪಸ್ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಪಾದಯಾತ್ರೆ: ಡಿಕೆಶಿ, ಸಿದ್ದರಾಮಯ್ಯ, ಖರ್ಗೆ, ದುನಿಯಾ ವಿಜಯ್ ಸೇರಿ 31 ಜನರ ವಿರುದ್ಧ ಎಫ್ಐಆರ್
ಪ್ರಧಾನಮಂತ್ರಿ ಕಚೇರಿ ಬಿಡುಗಡೆಗೊಳಿಸಿದ ಪತ್ರಿಕಾ ಪ್ರಕಟಣೆ ಪ್ರಕಾರ, ಸುಮಾರು 4,000 ಕೋಟಿ ರೂಪಾಯಿ ಅಂದಾಜು ವೆಚ್ಚದ ನೂತನ ಮೆಡಿಕಲ್ ಕಾಲೇಜುಗಳನ್ನು ತಮಿಳುನಾಡಿನಲ್ಲಿ ಕಟ್ಟಲಾಗಿದೆ. ಇದರಲ್ಲಿ 2,145 ಕೋಟಿ ರೂಪಾಯಿ ಹಣ ಕೇಂದ್ರ ಸರ್ಕಾರದ್ದಾಗಿದ್ದು, ಉಳಿದ ಹಣ ತಮಿಳುನಾಡು ಸರ್ಕಾರದ್ದಾಗಿದೆ ಎಂದು ತಿಳಿಸಿದೆ.
ತಮಿಳುನಾಡಿನ ವಿರುಧುನಗರ್, ನಾಮಕ್ಕಲ್, ನೀಲಗಿರಿ, ತಿರುಪ್ಪುರ್, ತಿರುವಳ್ಳೂರ್, ನಾಗಪಟ್ಟಣಂ, ದಿಂಡಿಗಲ್, ಕಲ್ಲಕುರುಚಿ, ಅರಿಯಾಲೂರ್, ರಾಮನಾಥಪುರಂ ಮತ್ತು ಕೃಷ್ಣಗಿರಿ ಸೇರಿದಂತೆ 11 ನೂತನ ಮೆಡಿಕಲ್ ಕಾಲೇಜುಗಳು ನಿರ್ಮಾಣಗೊಂಡಿರುವುದಾಗಿ ವರದಿ ವಿವರಿಸಿದೆ.
ಕೈಗೆಟಕುವ ವೈದ್ಯಕೀಯ ಶಿಕ್ಷಣ ಮತ್ತು ದೇಶಾದ್ಯಂತ ಆರೋಗ್ಯ ಕ್ಷೇತ್ರವನ್ನು ಮೇಲ್ದರ್ಜೆಗೇರಿಸುವ ಪ್ರಧಾನಿ ನರೇಂದ್ರ ಮೋದಿ ಅವರ ನಿರಂತರ ಪ್ರಯತ್ನದ ಫಲವಾಗಿ ತಮಿಳುನಾಡಿನಲ್ಲಿ 11 ವೈದ್ಯಕೀಯ ಕಾಲೇಜುಗಳಿಗೆ ವಿಧ್ಯುಕ್ತ ಚಾಲನೆ ನೀಡಲಾಗುತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತೀಯ ಪರಂಪರೆಯ ರಕ್ಷಣೆ ಮತ್ತು ಶಾಸ್ತ್ರೀಯ ಭಾಷೆಯ ಉತ್ತೇಜನ ನೀಡುವ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಶಾಸ್ತ್ರೀಯ ತಮಿಳು ಭಾಷಾ ಕೇಂದ್ರದ ಕ್ಯಾಂಪಸ್ ಅನ್ನು ಉದ್ಘಾಟಿಸಲಾಗುತ್ತಿದೆ ಎಂದು ಹೇಳಿದೆ.