Advertisement

ಸನ್ಯಾಸಿಗಳಿಗೆ ಗೊತ್ತಾಗದ ಹಿಂದುತ್ವ ನಾಮ್‌ಧಾರ್‌ಗೆ ತಿಳಿದಿದ್ದು ಹೇಗೆ

12:10 PM Dec 04, 2018 | Team Udayavani |

ಜೋಧ್‌ಪುರ/ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಹಿಂದುತ್ವದ ಬಗ್ಗೆ ಏನು ಗೊತ್ತು ಎಂದು ಕಿಚಾಯಿಸಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಗೆ ಸೋಮವಾರ ಪ್ರಧಾನಿ ತಿರುಗೇಟು ನೀಡಿದ್ದಾರೆ. ರಾಜಸ್ಥಾನದ ಜೋಧ್‌ಪುರದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಹಿಂದುತ್ವದ ಬಗ್ಗೆ ತಮಗೆ ಎಲ್ಲಾ ವಿಚಾರ ಗೊತ್ತು ಎಂದು ಸಾಧುಗಳೂ ಕೂಡ ಹೇಳಿಲ್ಲ. ಹೀಗಿದ್ದರೂ, ನಾಮ್‌ಧಾರ್‌ (ರಾಹುಲ್‌ ಗಾಂಧಿ) ತನಗೆ ಎಲ್ಲವೂ ಗೊತ್ತು ಎಂದು ಹೇಳುತ್ತಿದ್ದಾರೆ. ನಾನು ತಿಳಿದುಕೊಂಡಿರುವುದು ಅಲ್ಪ ಮಾತ್ರ ಎಂದು ವ್ಯಂಗ್ಯಭರಿತ ಮಾತುಗಳಿಂದ ಟೀಕಿಸಿದ್ದಾರೆ.

Advertisement

‘ಚುನಾವಣೆ ವೇಳೆ ಪ್ರಧಾನಿ ಮೋದಿಗೆ ಹಿಂದುತ್ವದ ಬಗ್ಗೆ ಏನು ಗೊತ್ತು ಎಂದು ಪ್ರಶ್ನಿಸಲಾಗುತ್ತದೆ. ರಾಜಸ್ಥಾನದಲ್ಲಿ ಮತದಾರರು ಪ್ರಧಾನಿಗೆ ಹಿಂದುತ್ವದ ಬಗ್ಗೆ ಏನು ಗೊತ್ತು ಎಂಬುದನ್ನು ನೋಡಿ ಮತ ಹಾಕುತ್ತಾರೆಯೇ? ಕಾಮ್‌ಧಾರ್‌ (ಕೆಲಸಗಾರ) ಆಗಿರುವ ನನಗೆ ಈ ಬಗ್ಗೆ ಹೆಚ್ಚು ಗೊತ್ತಿಲ್ಲ.  ಆದರೆ ನಾಮ್‌ಧಾರ್‌ ಹೆಚ್ಚು ತಿಳಿದುಕೊಂಡಿರುವುದರಿಂದ ಅವರಿಗೆ ಈ ಬಗ್ಗೆ ಮಾತನಾಡಲು ಅಧಿಕಾರವಿದೆ’ ಎಂದು ತಿವಿದಿದ್ದಾರೆ.

ನೆಹರೂಗೆ ರೈತರ ಕಷ್ಟ ಗೊತ್ತಿರಲಿಲ್ಲ: ಮೊದಲ ಪ್ರಧಾನಿ ಜವಾಹರ್‌ಲಾಲ್‌ ನೆಹರೂರನ್ನೂ ಟೀಕಿಸಿದ ಪ್ರಧಾನಿ ಮೋದಿ, ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್‌ ಸೋಮನಾಥ ದೇಗುಲದ‌ ಪ್ರತಿಷ್ಠಾಪನೆಗೆ ತೆರಳಿದ್ದಕ್ಕಾಗಿ ನೆಹರೂ ಆಕ್ಷೇಪಿಸಿದ್ದರು. ನೆಹರೂ ಕೋಟ್‌ನಲ್ಲಿ ಗುಲಾಬಿ ಹೂ ಸಿಕ್ಕಿಸಿಕೊಳ್ಳುತ್ತಿದ್ದರು. ಅವರಿಗೆ ಉದ್ಯಾನದ ಬಗ್ಗೆ ಮಾತ್ರ ತಿಳಿದಿತ್ತು. ಆದರೆ ರೈತರು ಅಥವಾ ಕೃಷಿ ಬಗ್ಗೆ ಗೊತ್ತೇ ಇರಲಿಲ್ಲ. ಅದರಿಂದಾಗಿಯೇ ರೈತರು ಸಂಕಷ್ಟ ಎದುರಿಸಬೇಕಾಯಿತು ಎಂದೂ ಲೇವಡಿ ಮಾಡಿದ್ದಾರೆ.

ಸುಳ್ಳುಗಳ ವಿವಿ: ಕಾಂಗ್ರೆಸ್‌ ಎನ್ನುವುದು ಸುಳ್ಳುಗಳನ್ನು ಹರಡುವುದರ ವಿವಿಯಾಗಿದೆ. ಆ ಪಕ್ಷದಲ್ಲಿ ಅತ್ಯಂತ ಹೆಚ್ಚು ಸುಳ್ಳು ಹೇಳುವವರಿಗೆ ಉನ್ನತ ಸ್ಥಾನಗಳನ್ನು ನೀಡಲಾಗುತ್ತಿದೆ ಎಂದೂ ಮೋದಿ ಆರೋಪಿಸಿದ್ದಾರೆ. ಎಲ್ಲಾ ರಾಜ್ಯಗಳಲ್ಲಿ ಅಧಿಕಾರದಲ್ಲಿರಬೇಕು ಎಂಬ ಕಾಂಗ್ರೆಸ್‌ನ ಆಸೆ ನೆಲಕಚ್ಚಿದೆ. ರಾಜಸ್ಥಾನದಲ್ಲೂ ಅದೇ ರೀತಿ ಆಗಲಿದೆ ಎಂದಿದ್ದಾರೆ.

ಅಧಿಕಾರಕ್ಕಾಗಿ ಸಹಭಾಗಿತ್ವ: ತೆಲಂಗಾಣದ ಗದ್ವಾಲ್‌ನಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಅಧಿಕಾರದಲ್ಲಿ ಮುಂದುವರಿಯಲು ಟಿಆರ್‌ಎಸ್‌, ಬಿಜೆಪಿ ಸಹ ಭಾಗಿತ್ವಕ್ಕೆ ಮುಂದಾಗಿವೆ ಎಂದು ಟೀಕಿಸಿದ್ದಾರೆ. ‘ಹೊಸದಿಲ್ಲಿಯಲ್ಲಿ ಅಧಿಕಾರದಲ್ಲಿ ಮುಂದುವರಿಯಲು ನರೇಂದ್ರ ಮೋದಿಗೆ ಟಿಆರ್‌ಎಸ್‌ ಬೆಂಬಲಿಸುತ್ತಿದೆ. ತೆಲಂಗಾಣದಲ್ಲಿ ಕೆ.ಚಂದ್ರ ಶೇಖರ ರಾವ್‌ ಜತೆ ಬಿಜೆಪಿ ಸಹಮತ ಹೊಂದಿದೆ. 5 ವರ್ಷಗಳಲ್ಲಿ ರಾಜ್ಯ ಸರಕಾರಕ್ಕೆ ಮೋದಿ ಸರಕಾರಎಲ್ಲಾ ರೀತಿಯ ಬೆಂಬಲ ನೀಡಿದೆ. ಉತ್ತಮ ಅಭಿವೃದ್ಧಿಯ ನಿಟ್ಟಿನಲ್ಲಿ ಬಂಗಾರದ ತೆಲಂಗಾಣಕ್ಕಾಗಿ ಹೊಸ ರಾಜ್ಯ ರಚಿಸಲಾಯಿತು. ಆದರೆ ಈ ಅವಧಿಯಲ್ಲಿ ಕೆಸಿಆರ್‌ ಕುಟುಂಬ ‘ಬಂಗಾರದ ಕುಟುಂಬ’ವಾಯಿತು ಎಂದು ಟೀಕಿಸಿದ್ದಾರೆ.

Advertisement

ಶಾ ಕ್ಷಮೆ ಕೇಳಲಿ: ದೇಶಕ್ಕಾಗಿ ಕಾಂಗ್ರೆಸ್‌ ಏನು ಕೆಲಸ ಮಾಡಿದೆ ಎನ್ನುವುದನ್ನು ಅದರ ನಾಯಕರ ಕೊರಳಪಟ್ಟಿ ಹಿಡಿದು ಪ್ರಶ್ನೆ ಮಾಡಬೇಕು ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಕೇಳಿದ್ದು ಸರಿಯಲ್ಲ. ಈ ಬಗ್ಗೆ ಅವರು ಕ್ಷಮೆ ಕೇಳಬೇಕೆಂದು ರಾಜ ಸ್ಥಾನದ ಮಾಜಿ ಸಿಎಂ  ಅಶೋಕ್‌ ಗೆಹ್ಲೋಟ್‌ ಒತ್ತಾಯಿಸಿದ್ದಾರೆ.

ಟಿಆರ್‌ಎಸ್‌ ಬಿಜೆಪಿಯ ಬಿ ಟೀಂ: ರಾಹುಲ್‌: ಮೋದಿ, ಕೆಸಿಆರ್‌, ಅಸಾಸುದ್ದೀನ್‌ ಒವೈಸಿ ಎಲ್ಲರೂ ಒಂದೇ. ಅವರನ್ನು ತೆಲಂಗಾಣದ ಜನ ನಂಬಲೇಬಾರದು ಎಂದು ಟ್ವೀಟ್‌ನಲ್ಲಿ ರಾಹುಲ್‌ ಗಾಂಧಿ ಟೀಕಿಸಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಜೆಡಿಎಸ್‌, ಬಿಜೆಪಿಯ ಬಿ ಟೀಂ ಎಂದು ಟೀಕಿಸಿದ್ದ ರಾಹುಲ್‌, ತೆಲಂಗಾಣದಲ್ಲಿ ಟಿಆರ್‌ಎಸ್‌ ಬಿಜೆಪಿಯ ಬಿ ಟೀಂ ಎಂದು ಹಾಸ್ಯಮಾಡಿದ್ದಾರೆ. ಅದರ ಮುಖ್ಯಸ್ಥ ಚಂದ್ರಶೇಖರ ರಾವ್‌, ಪ್ರಧಾನಿ ಮೋದಿ ಅವರ ರಬ್ಬರ್‌ ಸ್ಟಾಂಪ್‌ ಎಂದು ಲೇವಡಿ ಮಾಡಿದ್ದಾರೆ. ಮತ್ತೆರಡು ಟ್ವೀಟ್‌ಗಳಲ್ಲಿ, ಪ್ರಧಾನಿ ಮೋದಿ 2 ಹಿಂದುಸ್ಥಾನ‌ ರಚಿಸಲು ಮುಂದಾಗಿದ್ದಾರೆ. ಒಂದು ಅನಿಲ್‌ ಅಂಬಾನಿಗಾಗಿ, ಮತ್ತೂಂದು ರೈತರಿಗಾಗಿ ಎಂದು ಹೇಳಿದ್ದಾರೆ. ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಅಧ್ಯಕ್ಷ, 750 ಕೆಜಿ ಈರುಳ್ಳಿಗೆ ಕೇವಲ 1,040 ರೂ. ಪಡೆದ ಮಹಾರಾಷ್ಟ್ರದ ರೈತ, ಆ ಹಣವನ್ನು ಮೋದಿಗೆ ರವಾನಿಸಿದ್ದನ್ನು ಪ್ರಸ್ತಾವಿಸಿದ್ದಾರೆ. ‘ಮೊದಲ ಹಿಂದುಸ್ಥಾನದಲ್ಲಿ, ವಿಮಾನ ತಯಾರಿಸಲು ಅನುಭವವೇ ಇರದ‌ ಅನಿಲ್‌ ಅಂಬಾನಿಗೆ 36,000  ಕೋಟಿ ರೂ. ಮೌಲ್ಯದ ಗುತ್ತಿಗೆ ನೀಡಲಾಗುತ್ತದೆ. ಎರಡನೇ ಹಿಂದುಸ್ಥಾನದಲ್ಲಿ 4 ತಿಂಗಳು ಬೆವರು ಸುರಿಸಿ ದುಡಿದ ರೈತನಿಗೆ 750 ಕೆಜಿ ಈರುಳ್ಳಿಗೆ ಬರೀ 1,040 ರೂ. ಸಿಗುತ್ತದೆ’ ಎಂದಿದ್ದಾರೆ.

ದಕ್ಷಿಣದ ಅಯೋಧ್ಯೆ ಈಗ ಚುನಾವಣೆ ವಿಷಯ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಚರ್ಚೆಗೆ ಬಂದಿರುವಂತೆಯೇ, ತೆಲಂಗಾಣ ಚುನಾವಣೆಯಲ್ಲಿ “ದಕ್ಷಿಣದ ಅಯೋಧ್ಯೆ’ ಎಂದು ಖ್ಯಾತಿ ಪಡೆದಿರುವ ಭದ್ರಾಚಲಂ ಅಭಿವೃದ್ಧಿ ಪ್ರಮುಖವಾಗಿ ಪ್ರಸ್ತಾಪವಾಗುತ್ತಿದೆ.  ಭದ್ರಾಚಲಂನಿಂದ 32 ಕಿಮೀ ದೂರದ ಪರ್ಣಶಾಲೆ ಎಂಬ ಸ್ಥಳದಲ್ಲಿ ರಾಮ ತನ್ನ 14 ವರ್ಷಗಳ ವನವಾಸದ ಕೆಲ ಸಮಯವನ್ನು ಕಳೆದಿದ್ದ. ಇಲ್ಲಿಂದಲೇ ರಾವಣ ಸೀತೆಯನ್ನು ಅಪಹರಿಸಿದ್ದ ಎಂಬ ಐತಿಹ್ಯವಿದೆ. ಇಂಥ ಸ್ಥಳದಲ್ಲಿ ಗೃಹ ಬಳಕೆಯ ತ್ಯಾಜ್ಯ ಹಾಕಲೂ ವ್ಯವಸ್ಥೆ ಇಲ್ಲ. ಅದನ್ನು ಗೋದಾವರಿ ತೀರದಲ್ಲಿ ಹಾಕಲಾಗುತ್ತದೆ ಎಂದು ಸ್ಥಳೀಯರು ದೂರಿದ್ದಾರೆ. 100 ಕೋಟಿ ರೂ. ವೆಚ್ಚದಲ್ಲಿ ಈ ಸ್ಥಳದ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಕೆಸಿಆರ್‌ ಹೇಳಿದ್ದರೂ, ಇದುವರೆಗೆ ಹಣ ಬಿಡುಗಡೆ ಮಾಡಿಲ್ಲ ಎಂದಿದ್ದಾರೆ ಮತ್ತೂಬ್ಬ ಸ್ಥಳೀಯ ವ್ಯಕ್ತಿ ರಾಮಪ್ರಸಾದ್‌. ಹಂಗಾಮಿ ಸಿಎಂ ಚಿನ್ನ ಜೀಯರ್‌ ಸ್ವಾಮೀಜಿ ಮಠದ ಅನುಯಾಯಿಯಾಗಿದ್ದಾರೆ. ಮಠ ಒಡೆಯಬೇಕು ಎಂಬ ಕಾರಣಕ್ಕಾಗಿ ಕೆಲಸ ಶುರುವಾಗಿಲ್ಲ ಎನ್ನುವ ಅಭಿಪ್ರಾಯ ಅವರದ್ದು. ಈ ಸ್ಥಳದಲ್ಲಿ ಗೆಲ್ಲುವುದಿಲ್ಲ ಎಂಬ ನಿರೀಕ್ಷೆಯಿಂದ ಕೆಸಿಆರ್‌ ಸೇರಿದಂತೆ ಯಾವುದೇ ಟಿಆರ್‌ಎಸ್‌ ನಾಯಕರು ಸುತ್ತಮುತ್ತಲಿನ ಸ್ಥಳಗಳಿಗೆ ಭೇಟಿ ನೀಡಿದ್ದರೂ, ಪರ್ಣಶಾಲೆಗೆ ಭೇಟಿ ನೀಡಿಲ್ಲವೆಂದು ಪ್ರತಿಪಕ್ಷಗಳು ಮತ್ತು ಸ್ಥಳೀಯರು ಅಭಿಪ್ರಾಯಪಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next