Advertisement

ಸಂಸತ್ ನಲ್ಲಿ ಮಾಸ್ಕ್ ಗಳ ಪುನರಾಗಮನ; ಜೋಡೋ ವಿಚಾರದಲ್ಲಿ ತೀವ್ರ ರಾಜಕೀಯ ಸಮರ

05:43 PM Dec 22, 2022 | Team Udayavani |

ನವದೆಹಲಿ : ದೇಶದಲ್ಲಿ ಮತ್ತೊಂದು ಕೋವಿಡ್ ಅಲೆಯ ಆತಂಕದ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಮಹತ್ವದ ಉನ್ನತ ಮಟ್ಟದ ಸಭೆ ನಡೆಸಿದರು. ಸಭೆ ಮುಗಿದ ನಂತರ, ಕೇಂದ್ರ ಸರಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪರೀಕ್ಷೆ ಮತ್ತು ಕಣ್ಗಾವಲು ಹೆಚ್ಚಿಸಲು ಸಲಹೆ ನೀಡುವ ಟಿಪ್ಪಣಿಯನ್ನು ಹೊರಡಿಸುವ ಸಾಧ್ಯತೆಯಿದೆ.

Advertisement

ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಆಚರಣೆ ವೇಳೆ ಜನಸಂದಣಿ ಇರುವ ಸ್ಥಳಗಳಲ್ಲಿ ಮಾಸ್ಕ್ ಗಳನ್ನು ಬಳಸಲು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಜನರನ್ನು ಒತ್ತಾಯಿಸುವ ಸಾಧ್ಯತೆಗಳಿವೆ.

ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ನೀತಿ ಆಯೋಗ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್ವರನ್ ಅಯ್ಯರ್ ಸೇರಿದಂತೆ ಇತರರು ಭಾಗವಹಿಸಿದ್ದರು.

ರಾಜ್ಯಸಭೆಯಲ್ಲಿ ಚರ್ಚೆ

ಕೋವಿಡ್ ಸಾಂಕ್ರಾಮಿಕವು ಇಂದಿನವರೆಗೂ ಪ್ರಪಂಚದ ಆರೋಗ್ಯ ಮತ್ತು ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಲೇ ಇದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾವು ಕೋವಿಡ್ ಅನ್ನು ಸಮರ್ಥವಾಗಿ ನಿರ್ವಹಿಸಿದ್ದೇವೆ. ದೇಶದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ನಾವು ಜಾಗತಿಕ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.

Advertisement

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವಿದೇಶದಿಂದ ಆಗಮಿಸುವ ಪ್ರಯಾಣಿಕರ ಕಡ್ಡಾಯ ಆರ್ ಟಿ-ಪಿಸಿಆರ್ ಮಾದರಿ ಪರೀಕ್ಷೆಯನ್ನು ಪ್ರಾರಂಭಿಸಲಾಗಿದೆ ಎಂದು ಮಾಂಡವಿಯಾ ತಿಳಿಸಿದ್ದಾರೆ.

ಕೋವಿಡ್ ವಿಷಯದಲ್ಲಿ ನಾವು ಯಾವುದೇ ರಾಜಕೀಯ ಮಾಡಿಲ್ಲ. ದೇಶಾದ್ಯಂತ ದೊಡ್ಡ ಆಸ್ಪತ್ರೆಗಳಲ್ಲಿ ಆಮ್ಲಜನಕ ಘಟಕಗಳನ್ನು ಸ್ಥಾಪಿಸಲಾಗಿದೆ ಮತ್ತು ನಡೆಸಲಾಗುತ್ತಿದೆ. ನಾವು ದೇಶದಲ್ಲಿ ಸಾಕಷ್ಟು ಪ್ರಮಾಣದ ಔಷಧಗಳನ್ನು ಪರಿಶೀಲಿಸಿದ್ದೇವೆ ಎಂದು ಹೇಳಿದರು.

ಇಂದು ಸಂಸತ್ತಿನಲ್ಲಿ ಎಲ್ಲಾ ಸಂಸದರು ಮಾಸ್ಕ್ ಧರಿಸಿದ್ದಾರೆ.. ಕೋವಿಡ್ 19 ಪರಿಸ್ಥಿತಿಗೆ ಸಂಬಂಧಿಸಿದಂತೆ ಭಾರತ ಸರ್ಕಾರವು ಎಲ್ಲಾ ರಾಜ್ಯಗಳು/ಯುಟಿಗಳಿಗೆ ಸಲಹೆಗಳನ್ನು ನೀಡಿದೆ. ರಾಹುಲ್ ಗಾಂಧಿ ತಮ್ಮ ಭಾರತ್ ಜೋಡೋ ಯಾತ್ರೆಯನ್ನು ಮುಂದುವರೆಸಬಹುದು ಆದರೆ ಕೋವಿಡ್ 19 ಪ್ರೋಟೋಕಾಲ್ ಗಳನ್ನು ಅನುಸರಿಸಬೇಕು ಎಂದು ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಹೇಳಿದ್ದಾರೆ.

ನಾವು ರಾಜಸ್ಥಾನದಲ್ಲಿ ನಮ್ಮ ‘ಜನ ಆಕ್ರೋಶ ಯಾತ್ರೆ’ಯನ್ನು ಸ್ಥಗಿತಗೊಳಿಸಿದ್ದೇವೆ…ರಾಹುಲ್ ಗಾಂಧಿ ಕೋವಿಡ್ 19 ಮಾರ್ಗಸೂಚಿಗಳನ್ನು ಅನುಸರಿಸಬೇಕು. ಜನರ ಸುರಕ್ಷತೆ ಅತ್ಯಂತ ಮುಖ್ಯ ಎಂದು ಸಂಸತ್ತಿನಲ್ಲಿ ಬಿಜೆಪಿ ಸಂಸದ ಅರುಣ್ ಸಿಂಗ್ ಹೇಳಿಕೆ ನೀಡಿದ್ದಾರೆ.

ಯಾತ್ರೆಯನ್ನು ನಿಲ್ಲಿಸಲು ಯತ್ನ
ಇದು ಬಿಜೆಪಿಯವರ ಹೊಸ ಆಲೋಚನೆ, ಅವರು ನನಗೆ ಕೋವಿಡ್ ಬರುತ್ತಿದೆ ಮತ್ತು ಯಾತ್ರೆಯನ್ನು ನಿಲ್ಲಿಸಿ ಎಂದು ಪತ್ರ ಬರೆದಿದ್ದಾರೆ. ಈ ಯಾತ್ರೆಯನ್ನು ನಿಲ್ಲಿಸಲು ಇವೆಲ್ಲವೂ ಕಾರಣಗಳು, ಅವರು ಭಾರತದ ಕುರಿತಾಗಿನ ಸತ್ಯಕ್ಕೆ ಹೆದರುತ್ತಾರೆ ಎಂದು ಯಾತ್ರೆಯಲ್ಲಿ ಕೋವಿಡ್ ಪ್ರೋಟೋಕಾಲ್‌ಗಳಿಗೆ ಸಂಬಂಧಿಸಿ ಪತ್ರದ ಕುರಿತು ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತ್ ಜೋಡೋ ಯಾತ್ರೆ ರಾಜಸ್ಥಾನದ ಮೂಲಕ ಸಾಗಿದ್ದು, ಕೋವಿಡ್ ಬಗ್ಗೆ ಯಾವುದೇ ದೂರು ಬಂದಿಲ್ಲ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಬಗ್ಗೆ ಸಾರ್ವಜನಿಕ ಪ್ರತಿಕ್ರಿಯೆಗಳನ್ನು ನೋಡಿ ಬಿಜೆಪಿ ಹೆದರಿದೆ. ಈ ರೀತಿಯ ತಾರತಮ್ಯ ರಾಜಕಾರಣ ಮಾಡಬಾರದು. ರಾಜಸ್ಥಾನದಲ್ಲಿ ಪರಿಸ್ಥಿತಿ ಸಹಜವಾಗಿದೆ. ಎಂದು ರಾಜ್ಯ ಆರೋಗ್ಯ ಸಚಿವ ಪಿಎಲ್ ಮೀನಾ ಹೇಳಿಕೆ ನೀಡಿದ್ದಾರೆ.

ತಾಜ್ ಮಹಲ್ ಕೋವಿಡ್ ಅಲರ್ಟ್‌
ತಾಜ್ ಮಹಲ್‌ಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಪರೀಕ್ಷೆಯಿಲ್ಲದೆ ಪ್ರವಾಸಿಗರಿಗೆ ಪ್ರವೇಶ ನೀಡಲಾಗುತ್ತಿಲ್ಲ.

ಬಿಹಾರದಲ್ಲಿ ಪರಿಸ್ಥಿತಿ ಸಹಜವಾಗಿದ್ದು, ಕೋವಿಡ್ ಅನ್ನು ಎದುರಿಸಲು ನಾವು ಸಂಪೂರ್ಣ ಸಿದ್ಧರಿದ್ದೇವೆ. ಚಿಂತಿಸುವ ಅಗತ್ಯವಿಲ್ಲ. ವರದಿಗಳ ಮೇಲೆ ನಿಗಾ ಇಡುತ್ತೇವೆ ಎಂದು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next