ಹೊಸದಿಲ್ಲಿ : ‘ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ಥಾನದ ವಿಷಯದಲ್ಲಿ ಆಳವಾದ ಆಲೋಚನೆಯ ತಂತ್ರಗಾರಿಕೆಯನ್ನು ಅನುಸರಿಸುತ್ತಿಲ್ಲ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದಿಲ್ಲಿ ಆರೋಪಿಸಿದ್ದಾರೆ.
ಒಂದು ದಿನದ ಹಿಂದಷ್ಟೆ ರಾಹುಲ್ ಗಾಂಧಿ, “ಬಿಜೆಪಿ ಮತ್ತು ಆರ್‌ಎಸ್‌ಎಸ್ ಭಾರತದಲ್ಲಿ ದ್ವೇಷ ಹರಡುತ್ತಿವೆ’ ಎಂದು ಆರೋಪಿಸುವ ಮೂಲಕ ವಿವಾದವೆಬ್ಬಿಸಿದ್ದರು.
ಲಂಡನ್‌ನ ‘ಅಂತಾರಾಷ್ಟ್ರೀಯ ವ್ಯೂಹಗಾರಿಕೆ ಅಧ್ಯಯನ ಕೇಂದ್ರ’ ದಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, “ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಕ್ ವಿಷಯದಲ್ಲಿ ಯಾವುದೇ ಕ್ರಮಬದ್ಧ ತಂತ್ರಗಾರಿಕೆ ಇದ್ದಂತೆ ಕಾಣುವುದಿಲ್ಲ. ಪಾಕಿಸ್ಥಾನದ ಜತೆಗೆ ವ್ಯವಹರಿಸುವುದು ತುಂಬ ಕಷ್ಟ, ಏಕೆಂದರೆ ಅಲ್ಲಿ ಯಾವುದೇ ಒಂದು ಸಮ್ಮಿಳಿತ ಅಧಿಕಾರ ಪಾರಮ್ಯದ ಕೇಂದ್ರ ಎಂಬುದಿಲ್ಲ. ಆದುದರಿಂದ ಪಾಕಿಸ್ಥಾನದವರು ತಾವೇ ಅಂತಹ ಸಮ್ಮಿಳಿತ ಪರಮೋಚ್ಚ ಸಂರಚನೆಯನ್ನು ರೂಪಿಸಿಕೊಂಡು ಮುಂದೆ ಬರುವುದನ್ನು ನಾವು ಕಾಯಬೇಕಾಗುತ್ತದೆ’ ಎಂದು ಹೇಳಿದರು.
ಭಾರತ – ಚೀನ ಸೇನೆಯ ನಡುವಿನ ಸುದೀರ್ಘ ಮುಖಾಮುಖೀಗೆ ಕಾರಣವಾದ ಡೋಕ್ಲಾಂ ವಿಷಯವನ್ನು ಕೂಡ ಕೇಂದ್ರ ಸರಿಯಾಗಿ ನಿರ್ವಹಿಸಿಲ್ಲ ಎಂದು ರಾಹುಲ್ ಮೋದಿ ಸರಕಾರವನ್ನು ಟೀಕಿಸಿದರು.
“ಡೋಕ್ಲಾಂ ಒಂದು ಪ್ರತ್ಯೇಕ ವಿಷಯವೆಂದು ನಾನು ಭಾವಿಸುವುದಿಲ್ಲ. ಅದು ಕ್ರಮಾನುಸಾರ ಸಂಭವಿಸಿರುವ ಘಟನೆಗಳ ಒಂದು ಭಾಗವೇ ಆಗಿತ್ತು ಮತ್ತು ಅದೊಂದು ಪ್ರಕ್ರಿಯೆಯೂ ಆಗಿತ್ತು. ಪ್ರಧಾನಿಯವರು ಪ್ರತಿಯೊಂದು ವಿಷಯವನ್ನೂ ಪ್ರತ್ಯೇಕ ವಿಷಯವಾಗಿ ಕಾಣುತ್ತಾರೆ; ಅವರ ದೃಷ್ಟಿಯಲ್ಲಿ ಡೋಕ್ಲಾಂ ಒಂದು ಪ್ರಕರಣವಾಗಿತ್ತು. ಒಂದೊಮ್ಮೆ ಪ್ರಧಾನಿ ಮೋದಿ ಆ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದರೆ ಡೋಕ್ಲಾಂ ಬಿಕ್ಕಟ್ಟು ಘಟಿಸುವುದನ್ನು ತಡೆಯಬಹುದಿತ್ತು” ಎಂದು ರಾಹುಲ್ ಗಾಂಧಿ ಹೇಳಿದರು.