ಪಾಟ್ನಾ: ದೇಶದ ಹಾಗೂ ಬಿಹಾರದ ಅಭಿವೃದ್ಧಿಯಲ್ಲಿ ನಿತೀಶ್ ಕುಮಾರ್ ಅವರ ಪಾತ್ರ ಮಹತ್ವದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ. ಆ ಮೂಲಕ, ಮುಂಬ ರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್ ಡಿಎ ಕಡೆಯಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ನಿತೀಶ್
ಅವರ ಉಮೇದುವಾರಿಕೆಗೆ ಪ್ರಧಾನಿ ಪರೋಕ್ಷವಾಗಿ ಮೊಹರು ಒತ್ತಿದ್ದಾರೆ.
ಅಲ್ಲದೆ, ಬಿಹಾರದಲ್ಲಿ ನಿತೀಶ್ ಅವರನ್ನು ಎನ್ ಡಿಎ ಪ್ರತಿ ನಿಧಿಯೆಂದು ಬಿಂಬಿಸುವುದನ್ನು ಪ್ರಶ್ನಿಸಿದ್ದ ಎನ್ ಡಿಎಯ ಮತ್ತೂಂದು ಅಂಗ ಪಕ್ಷವಾದ ಲೋಕಜನ ಶಕ್ತಿ ಪಕ್ಷಕ್ಕೆ ಸ್ಪಷ್ಟ ಸಂದೇಶವನ್ನು ಮೋದಿ ರವಾನಿಸಿದ್ದಾರೆ. ಈ ಹಿಂದೆ, ಬಿಜೆಪಿಯ ರಾಷ್ಟ್ರಾ ಧ್ಯಕ್ಷ ಜೆ.ಪಿ.ನಡ್ಡಾ, ಬಿಹಾರ ಚುನಾವಣೆಯಲ್ಲಿ ನಿತೀಶ್ ಅವರೇ ಎನ್ ಡಿಎ ಅಭ್ಯರ್ಥಿ ಎಂದು ಘೋಷಿಸಿದ್ದರು. ಈಗ, ಅದನ್ನು ಮೋದಿ ಅನುಮೋದಿಸಿದಂತಾಗಿದೆ.
ನಿತೀಶ್ ಗುಣಗಾನ: ಬಿಹಾರದಲ್ಲಿ ಸುಮಾರು 900 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಪರದೀಪ್ ಹಾಲ್ಡಿ ಯಾ-ದುರ್ಗಾಪುರ ನಡುವಿನ ತೈಲ ಸಾಗಾಣಿಕೆ ಪೈಪ್ ಲೈನ್ ಹಾಗೂ ಬಂಕಾ ಮತ್ತು ಹರ್ದಿಷಿಯಲ್ಲಿ 2 ಎಲ್ ಪಿಜಿ ಅನಿಲ ಬಾಟ್ಲಿಂಗ್ ಕೇಂದ್ರಗಳನ್ನು ಪ್ರಧಾನಿ ಭಾನುವಾರ ಉದ್ಘಾಟಿಸಿದರು. ಆ ವೇಳೆ ಮಾತನಾಡಿದ ಅವರು, “”15 ವರ್ಷಗಳ ಹಿಂದೆ ಬಿಹಾರ ತೀವ್ರ ಹಿಂದುಳಿದಿತ್ತು. ರಾಜ್ಯದಲ್ಲಿ ಉತ್ತಮ ರಸ್ತೆ ಸಂಪರ್ಕವಿರಲಿಲ್ಲ. ಇಂಟರ್ನೆಟ್ ಅಂತೂ ಮರೀಚಿಕೆಯಾಗಿತ್ತು. ಅಂಥ ಸಂದರ್ಭದಲ್ಲಿ ಅಧಿಕಾರ ಸ್ವೀಕರಿಸಿದ ನಿತೀಶ್, ಇಂದು ಬಿಹಾರದಲ್ಲಿ ಮೂಲ ಸೌಕರ್ಯವನ್ನು ದೊಡ್ಡಮಟ್ಟದಲ್ಲಿ ಕಲ್ಪಿಸಿದ್ದಾರೆ. ದೇಶದ ಪ್ರಗತಿಗೆ ಹಾಗೂ ಬಿಹಾರದ ಪ್ರಗತಿಗೆ ಮಹತ್ವದ ಕಾಣಿಕೆ ಕೊಟ್ಟಿ ದ್ದಾರೆ” ಎಂದು ಶ್ಲಾಘಿಸಿದರು.
“ಪ್ರತಿಭೆಗಳ ಶಕ್ತಿ ಕೇಂದ್ರ’: ಬಿಹಾರವನ್ನು “ಪ್ರತಿಭೆಗಳ ಶಕ್ತಿ ಕೇಂದ್ರ’ ಎಂದು ಬಣ್ಣಿ ಸಿದ ಅವರು, “”ದೇಶದ ಎಲ್ಲಾ ಭಾಗಗಳಲ್ಲಿ ಬಿಹಾರಿ ಯುವಜನರ ಪ್ರತಿಭೆ
ಅನುರಣಿಸುತ್ತಿದೆ. ಐಐಟಿ ವಿಚಾರಕ್ಕೆ ಬಂದರೆ ಅಲ್ಲಿ ಬಿಹಾರದ ವಿದ್ಯಾರ್ಥಿಗಳು ವಿಜೃಂಭಿಸುತ್ತಾರೆ. ಯಾವುದೇ ರಾಜ್ಯಕ್ಕೆ ಹೋದರೂ ಅಲ್ಲಿನ ಕಾರ್ಮಿಕ ವಲಯಗಳಲ್ಲಿ ಬಿಹಾರಿಗಳ ಪರಿಶ್ರಮ ಎದ್ದು ಕಾಣುತ್ತದೆ. ಹೀಗೆ, ಪ್ರತಿ ರಾಜ್ಯದ ಅಭಿವೃದ್ಧಿಯಲ್ಲಿಯೂ ಬಿಹಾರಿಗಳು ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ” ಎಂದರು.