ಪಣಜಿ: ಫೆಬ್ರವರಿ 6 ರಿಂದ 9 ರವರೆಗೆ ಮಡಗಾಂವನಲ್ಲಿ ನಡೆಯಲಿರುವ ಭಾರತ ಸೌರ ವಿದ್ಯುತ್ ಸಪ್ತಾಹದ ಉದ್ಘಾಟನೆಗಾಗಿ ಫೆ. 6 ರಂದು ಗೋವಾದ ಮಡಗಾಂವಗೆ ಬರಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಮಡಗಾಂವ್‍ನಲ್ಲಿ ಸಾರ್ವಜನಿಕ ಸಭೆ ಆಯೋಜಿಸಲು ಬಿಜೆಪಿ ಯೋಜಿಸಿದೆ. ಪಣಜಿಯಲ್ಲಿ ನಡೆದ ಬಿಜೆಪಿ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ಪ್ರಾಥಮಿಕ ಚರ್ಚೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ, ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಶೇಟ್ ತಾನಾವಡೆ ಉಪಸ್ಥಿತಿಯಲ್ಲಿ ನಡೆದ ಈ ಸಭೆಗೆ ಮಡಗಾಂವ್ ಶಾಸಕ ದಿಗಂಬರ ಕಾಮತ್ ಅವರನ್ನು ವಿಶೇಷವಾಗಿ ಆಹ್ವಾನಿಸಲಾಗಿತ್ತು. ಲಭ್ಯವಾಗಿರುವ ಮಾಹಿತಿ ಪ್ರಕಾರ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಗೋವಾ ಲೋಕಸಭಾ ಕ್ಷೇತ್ರದ ಮೇಲೆ ಬಿಜೆಪಿ ವಿಶೇಷವಾಗಿ ಗಮನ ಹರಿಸಿದೆ ಎನ್ನಲಾಗಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ದಕ್ಷಿಣ ಗೋವಾ ಲೋಕಸಭಾ ಕ್ಷೇತ್ರದಲ್ಲಿ ಸೋಲು ಅನುಭವಿಸುವಂತಾಗಿತ್ತು. ಹಾಗಾಗಿ ಪ್ರಧಾನಿ ಮಡಗಾಂವ್ ನಲ್ಲಿ ಸಾರ್ವಜನಿಕ ಸಭೆ ನಡೆಸಿದರೆ ಸಕಾರಾತ್ಮಕ ವಾತಾವರಣ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂಬ ವಿಶ್ವಾಸದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕುಂಕಳ್ಳಿಯಲ್ಲಿ ಎನ್‍ಐಟಿ ಸಂಕೀರ್ಣ, ವೆರೆಯಲ್ಲಿ ನೌಕಾ ತರಬೇತಿ ಕಾಲೇಜು ಮತ್ತು ಇತರ ಎರಡು ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸುವ ಸಾಧ್ಯತೆಯಿದೆ.
ಈ ಕುರಿತು ಮುಖ್ಯಮಂತ್ರಿ ಪ್ರಮೋದ ಸಾವಂತ್ ಪ್ರತಿಕ್ರಿಯಿಸಿ, ಪ್ರಧಾನಿ ಭೇಟಿಯು ಸರ್ಕಾರಿ ಕಾರ್ಯಕ್ರಮಗಳನ್ನು ಒಳಗೊಂಡಿದೆ. ಕೆಲವು ಯೋಜನೆಗಳನ್ನು ಉದ್ಘಾಟಿಸಲು ಯೋಜಿಸಲಾಗಿದೆ. ವಿವರಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಅದು ಮುಗಿದ ನಂತರ ನಾನು ನಿಮಗೆ ತಿಳಿಸುತ್ತೇನೆ ಎಂಬ ಮಾಹಿತಿ ನೀಡಿದರು.
ಸಭೆ ನಡೆಯುವ ಸ್ಥಳ, ವಿವರಗಳನ್ನು ಈ ಸಭೆಯಲ್ಲಿ ಕೂಲಂಕುಷವಾಗಿ ಚರ್ಚಿಸಲಾಗಿದೆ. ಪ್ರಧಾನ ಮಂತ್ರಿಗಳ ಕಚೇರಿಯಿಂದ ಅನುಮೋದನೆ ಪಡೆದ ನಂತರ ಕಾರ್ಯಕ್ರಮವನ್ನು ಪ್ರಕಟಿಸಲಾಗುವುದು. ಈ ಸಭೆಯಲ್ಲಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಸಿದ್ಧತೆ ನಡೆಸಲಾಗಿದೆ ಎಂಬ ಮಾಹಿತಿಯನ್ನು ಮುಖ್ಯಮಂತ್ರಿ ನೀಡಿದರು.