ಈ ಭೇಟಿಯಲ್ಲಿ ರಾಜಕೀಯಕ್ಕಿಂತಲೂ ಮಾನವೀಯತೆಗೆ ಆದ್ಯತೆ ಎನ್ನುವುದನ್ನು ಮೋದಿ ಸ್ಪಷ್ಟ ಪಡಿಸಿದ್ದಾರೆ. ಪ್ಯಾಲೆಸ್ತೀನ್ ಕೂಡಾ ಭಾರತದಿಂದ ರಾಜಕೀಯಕ್ಕಿಂತ ಮಿಗಿಲಾಗಿ ಮಾನವೀಯ ನೆರವನ್ನು ಬಯಸುತ್ತಿದೆ.
ಪ್ರಧಾನಿ ನರೇಂದ್ರ ಮೋದಿಯ ಪ್ಯಾಲೆಸ್ತೀನ್ ಭೇಟಿ ಕಳೆದ ವರ್ಷ ಕೈಗೊಂಡ ಇಸ್ರೇಲ್ ಭೇಟಿಯಂತೆ ಜಾಗತಿಕವಾಗಿ ಗಮನ ಸೆಳೆದಿದೆ. ಶನಿವಾರ ಮೋದಿ ಪ್ಯಾಲೆಸ್ತೀನ್‌ನಲ್ಲಿರುತ್ತಾರೆ. ಭಾರತ ಮತ್ತು ಪ್ಯಾಲೆಸ್ತೀನ್ ಪಾಲಿಗೆ ಇದೊಂದು ಐತಿಹಾಸಿಕ ಕ್ಷಣವಾಗಲಿದೆ. ಭಾರತದ ಪ್ರಧಾನಿಯೊಬ್ಬರು ಪ್ಯಾಲೆಸ್ತೀನ್‌ಗೆ ಹೋಗುತ್ತಿರುವುದು ಇದೇ ಮೊದಲು. ಹೀಗಾಗಿ ಈ ಭೇಟಿ ಅಂತರಾಷ್ಟ್ರೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಹಾವು-ಮುಂಗುಸಿ ಸಂಬಂಧ ಹೊಂದಿರುವ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಜತೆಗೆ ರಾಜತಾಂತ್ರಿಕ ಸಂಬಂಧ ಇಟ್ಟುಕೊಳ್ಳುವುದು ಎಂದರೆ ಒಂದು ರೀತಿಯಲ್ಲಿ ಕತ್ತಿಯ ಅಲುಗಿನ ಮೇಲಿನ ನಡೆಯಂತೆ. ಯಾವುದಾದರೊಂದು ದೇಶದ ಕಡೆಗೆ ತುಸು ಒಲವು ಜಾಸ್ತಿಯಾದರೆ ಅದರ ಪರಿಣಾಮ ಹಲವು ಆಯಾಮಗಳಲ್ಲಿ ಪ್ರಕಟವಾಗುತ್ತದೆ.
ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ದಬ್ಟಾಳಿಕೆ ನಡೆಸುತ್ತಿದೆ. ಅದರ ನೆಲವನ್ನು ಆಕ್ರಮಿಸಿಕೊಂಡಿದೆ ಎಂಬ ಜಾಗತಿಕ ಅಭಿಪ್ರಾಯವಿದೆ. ಜಗತ್ತು ಪ್ಯಾಲೆಸ್ತೀನ್ ಅನ್ನು ಶೋಷಣೆಗೊಳಪಟ್ಟ ದೇಶ ಎಂಬ ಅನುಕಂಪದಿಂದಲೂ ಇಸ್ರೇಲ್‌ನ್ನು ಶೋಷಿಸುವ ದರ್ಪದ ರಾಷ್ಟ್ರ ಎಂಬ ದೃಷ್ಟಿಯಿಂದಲೂ ನೋಡುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಜುಲೈಯಲ್ಲಿ ಮೋದಿ ಇಸ್ರೇಲ್‌ಗೆ ಭೇಟಿ ಕೊಟ್ಟಾಗ ಮತ್ತು ಇತ್ತೀಚೆಗೆ ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಭಾರತಕ್ಕೆ ಬಂದಾಗ ದೇಶದಲ್ಲಂತೂ ಪ್ರಧಾನಿ ಹಿಂದಿನ ಜನಸಂಘದ ಧೋರಣೆಯನ್ನು ಮುಂದುವರಿಸುತ್ತಿದ್ದಾರೆ. ಈ ಭೇಟಿ ಭಾರತದ ಕುರಿತು ಜಗತ್ತಿಗೆ ತಪ್ಪು ಸಂದೇಶ ನೀಡಲಿದೆ ಎಂದೆಲ್ಲ ವ್ಯಾಖ್ಯಾನಿಸಲಾಗಿತ್ತು. ಆದರೆ ಇದೀಗ ಈ ಟೀಕೆಗಳಿಗೆಲ್ಲ ಉತ್ತರ ಎಂಬಂತೆ ಪ್ಯಾಲೆಸ್ತೀನ್ ಭೇಟಿ ಕೈಗೊಂಡಿದ್ದಾರೆ.
ಭಾರತ ಮತ್ತು ಪ್ಯಾಲೆಸ್ತೀನ್ ಸಂಬಂಧಕ್ಕೆ ದಶಕಗಳ ಇತಿಹಾಸವಿದೆ. ಯಾಸರ್ ಅರಾಫತ್ ನೇತೃತ್ವದ ಪ್ಯಾಲೆಸ್ತೀನ್ ಲಿಬರೇಶನ್ ಓರ್ಗನೈಸೇಶನ್‌ಗೆ ಮಾನ್ಯತೆ ನೀಡಿದ ಮೊದಲ ಅರಬ್‌ಯೇತರ ದೇಶ ಭಾರತ. 1988ರಲ್ಲಿ ಪ್ಯಾಲೆಸ್ತೀನ್ ಸ್ವತಂತ್ರ ದೇಶ ಎಂದು ಘೋಷಿಸಲ್ಪಟ್ಟಾಗ ಭಾರತ ಅದಕ್ಕೂ ಮಾನ್ಯತೆ ನೀಡಿತ್ತು. ಇತ್ತೀಚೆಗೆ ಜೆರುಸಲೇಂನ್ನು ಇಸ್ರೇಲ್‌ನ ರಾಜಧಾನಿ ಎಂದು ಪರಿಗಣಿಸುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಣಯದ ವಿರುದ್ಧ ಭಾರತ ಮತ ಹಾಕಿದೆ. ಹೀಗೆ ನಿರ್ಣಾಯಕ ಸಂದರ್ಭಗಳಲೆಲ್ಲ ಪ್ಯಾಲೆಸ್ತೀನ್ ಬೆನ್ನಿಗೆ ಭಾರತ ನಿಂತಿದೆ. ಹಾಗೆಂದು ಎರಡು ದೇಶಗಳ ನಡುವಿನ ಸಂಬಂಧ ಸಂಪೂರ್ಣ ಸೌಹಾರ್ದಯುತವಾಗಿತ್ತು ಎಂದು ಹೇಳುವಂತಿಲ್ಲ. 2002ರ ಗಲಭೆಯ ಬಳಿಕ ಪ್ಯಾಲೆಸ್ತೀನ್ ರಾಯಭಾರಿ ಖಾಲಿದ್ ಅಲ್ ಶೇಖ್ ಗಲಭೆಯನ್ನು ಖಂಡಿಸುವ ಸಭೆಯಲ್ಲಿ ಭಾಗವಹಿಸಿದ ಕಾರಣ ಯಾಸರ್ ಅರಾಫತ್ ಅವರನ್ನು ವಾಪಸು ಕರೆಸಿಕೊಂಡಿದ್ದರು. ಇತ್ತೀಚೆಗೆ ರಾವಲ್ಪಿಂಡಿಯಲ್ಲಿ ಉಗ್ರ ಮುಖಂಡ ಹಾಫಿಜ್ ಸಯೀದ್ ನಡೆಸಿದ ರ್ಯಾಲಿಯಲ್ಲಿ ಪ್ಯಾಲೆಸ್ತೀನ್‌ನ ಪಾಕಿಸ್ಥಾನ ರಾಯಭಾರಿ ಭಾಗವಹಿಸಿದ್ದಕ್ಕೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಇದರ ಪರಿಣಾಮವಾಗಿ ರಾಯಭಾರಿಯನ್ನು ಪ್ಯಾಲೆಸ್ತೀನ್ ವಾಪಸು ಕರೆಸಿಕೊಂಡಿದೆ. ಇಂಥ ಚಿಕ್ಕಪುಟ್ಟ ಘಟನೆಗಳ ಹೊರತಾಗಿಯೂ ಇಷ್ಟರತನಕ ಪ್ಯಾಲೆಸ್ತೀನ್ ಭಾರತದ ಸರ್ವಋತು ಮಿತ್ರನಾಗಿ ಉಳಿದುಕೊಂಡಿದೆ. ಈ ಮಿತ್ರತ್ವ ಮೋದಿ ಭೇಟಿಯಿಂದ ಇನ್ನಷ್ಟು ಬಲಿಷ್ಠವಾಗಲಿದೆ. ಅನೇಕ ದೇಶಗಳ ಅನುಕಂಪದ ನೆರಳಿನಲ್ಲಿ ಇದ್ದರೂ ಪ್ಯಾಲೆಸ್ತೀನ್ ಇನ್ನೂ ಬಡತನದಲ್ಲಿ ಬಳಲುತ್ತಿದೆ. ಹೆಚ್ಚೇಕೆ ಸರಿಯಾದ ಒಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆ ದೇಶದಲ್ಲಿಲ್ಲ. ಹೀಗಾಗಿಯೇ ಮೋದಿ ಜೋರ್ಡಾನ್‌ಗೆ ಹೋಗಿ ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ರಮಲ್ಲಾಗೆ ಪ್ರಯಾಣಿಸಬೇಕು. ಇನ್ನು ಆರೋಗ್ಯ, ಶಿಕ್ಷಣ, ಉದ್ಯೋಗ ಮುಂತಾದ ಕ್ಷೇತ್ರಗಳಲ್ಲಿ ಆ ದೇಶ ಬಹಳ ಹಿಂದುಳಿದಿದೆ. ಹೀಗಾಗಿ ಈ ಭೇಟಿಯಲ್ಲಿ ರಾಜಕೀಯಕ್ಕಿಂತಲೂ ಮಾನವೀಯತೆಗೆ ಹೆಚ್ಚು ಆದ್ಯತೆ ಎನ್ನುವುದನ್ನು ಮೋದಿ ಸ್ಪಷ್ಟಪಡಿಸಿದ್ದಾರೆ. ರಮಲ್ಲಾದಲ್ಲೊಂದು ನೂರು ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಒಪ್ಪಂದವಾಗುವ ಸಾಧ್ಯತೆಯಿದೆ. ಅಂತೆಯೇ ಶಾಲೆ, ಐಟಿ ಪಾರ್ಕ್‌ನಂತಹ ಸೌಲಭ್ಯಗಳ ಸ್ಥಾಪನೆಯ ಘೋಷಣೆಯಾಗಲಿದೆ. ಮೂಲಸೌಕರ್ಯ, ಶಿಕ್ಷಣ ಮತ್ತು ಐಟಿ ಕ್ಷೇತ್ರದಲ್ಲಿ ಭಾರತದಿಂದ ಪ್ಯಾಲೆಸ್ತೀನ್ ಬಹಳಷ್ಟು ನಿರೀಕ್ಷಿಸುತ್ತಿದೆ. ಪ್ಯಾಲೆಸ್ತೀನ್ ಕೂಡಾ ಭಾರತದಿಂದ ರಾಜಕೀಯಕ್ಕಿಂತ ಮಿಗಿಲಾಗಿ ಮಾನವೀಯ ನೆರವನ್ನು ಬಯಸುತ್ತಿದೆ.
ಪರಸ್ಪರರ ವೈರಿಗಳಾಗಿರುವ ನೆರೆಹೊರೆಯ ಎರಡು ದೇಶಗಳಿಗೆ ಪ್ರತ್ಯೇಕವಾಗಿ ಭೇಟಿ ನೀಡುವ ಮೂಲಕ ಮೋದಿ ಆ ದೇಶಗಳ ಜತೆಗಿನ ಸಂಬಂಧದ ನಡುವೆ ನೇರವಾದ ಗೆರೆಯೊಂದನ್ನು ಎಳೆದಿದ್ದಾರೆ. ಪ್ಯಾಲೆಸ್ತೀನ್ ಜತೆಗಿನ ಸಂಬಂಧವೇ ಬೇರೆ, ಇಸ್ರೇಲ್ ಜತೆಗಿನ ಸಂಬಂಧವೇ ಬೇರೆ. ಈ ಎರಡು ದೇಶಗಳ ಜತೆಗಿನ ಸಂಬಂಧವನ್ನು ಪರಸ್ಪರ ತಳಕು ಹಾಕಿಕೊಂಡು ನೋಡುವ ಅಗತ್ಯವಿಲ್ಲ ಎನ್ನುವುದು ಈ ಗೆರೆಯ ಅರ್ಥ. ರಾಜಕೀಯವಾಗಿ ಇದು ಮುತ್ಸದ್ದಿತನದ ಸಮುಚಿತ ನಡೆಯೆಂದೇ ಹೇಳಬಹುದು.