ನವದೆಹಲಿ: ಇಂದು ಮೊದಲ ಹಂತದ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದ್ದು ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಪ್ರಧಾನಿ ಮೋದಿ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಲೋಕಸಭಾ ಚುನಾವಣೆ ಕುರಿತು ಸಾಮಾಜಿಕ ಜಾಲತಾಣ X ನಲ್ಲಿ ಇಂಗ್ಲಿಷ್, ಹಿಂದಿ, ತಮಿಳು, ಮರಾಠಿ, ಬೆಂಗಾಲಿ ಮತ್ತು ಅಸ್ಸಾಮಿ ಸೇರಿ ಆರು ಭಾಷೆಗಳಲ್ಲಿ ಪೋಸ್ಟ್ ಮಾಡಿದ ಪ್ರಧಾನಿ ‘ಯುವ ಮತ್ತು ಮೊದಲ ಬಾರಿಗೆ ಮತದಾನ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಬೇಕು ಅಲ್ಲದೆ ಇಲ್ಲಿ ಪ್ರತಿಯೊಬ್ಬರ ಧ್ವನಿಯೂ ಮುಖ್ಯವಾಗಿದೆ, ಒಂದೊಂದು ಮತವೂ ಒಬ್ಬ ಉತ್ತಮ ಅಭ್ಯರ್ಥಿಯ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸುವವರು ಮತದಾರರು ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎಂದು ಕೇಳಿಕೊಂಡಿದ್ದಾರೆ.
ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನವು 21 ರಾಜ್ಯಗಳ 102 ಸ್ಥಾನಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂದು ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಯಿತು.
ಅದರಂತೆ ತಮಿಳುನಾಡಿನ – 39, ರಾಜಸ್ಥಾನದ 12, ಉ.ಪ್ರದೇಶದ 8, ಮಧ್ಯ ಪ್ರದೇಶ 6, ಉತ್ತರಾಖಂಡ 5, ಮಹಾರಾಷ್ಟ್ರ 5, ಅಸ್ಸಾಂನ 5, ಬಿಹಾರದ 4 , ಪ. ಬಂಗಾಳದ 3, ಮಣಿಪುರ 2, ಅರುಣಾಚಲ ಪ್ರದೇಶ 2 , ಮೇಘಾಲಯ 2, ಪುದುಚೆರಿ, ಛತ್ತೀಸ್‌ಘಡ, ಜಮ್ಮು ಕಾಶ್ಮೀರ, ಲಡಾಕ್, ಲಕ್ಷದೀಪ, ಮಿಜೋರಾಮ್, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರದಲ್ಲಿ ತಲಾ 1 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ 16.63 ಕೋಟಿಗೂ ಹೆಚ್ಚು ಜನರು ಮತದಾನ ಮಾಡಲು ಅರ್ಹರಾಗಿದ್ದು. ಇದರಲ್ಲಿ 35.67 ಲಕ್ಷ ಪ್ರಥಮ ಬಾರಿ ಮತ ಚಲಾಯಿಸುವ ಮತದಾರರು, 20-29 ವರ್ಷದೊಳಗಿನ 3.51 ಕೋಟಿ ಯುವ ಮತದಾರರು ಮತ್ತು 11,371 ತೃತೀಯಲಿಂಗಿಗಳಿದ್ದಾರೆ.