ನವದೆಹಲಿ: ಕೋವಿಡ್ ಮಹಾಮಾರಿ ಭೀತಿಯನ್ನು ದೂರ ಮಾಡಿ, ರಕ್ಷಣೆ ನೀಡುವ ನಿಟ್ಟಿನಲ್ಲಿ ಬಹುನಿರೀಕ್ಷಿತ ಲಸಿಕೆ ವಿತರಣೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ(ಜನವರಿ 16, 2021) ವಿಡಿಯೋ ಕಾನ್ಫರೆನ್ಸ್ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕೋ ವಿನ್ ಆ್ಯಪ್ ಉದ್ಘಾಟಿಸುವ ಮೂಲಕ 3 ಕೋಟಿ ಮಂದಿಗೆ ಮೊದಲ ಹಂತದ ಲಸಿಕೆ ನೀಡಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಮೂಲಕ ಆಯ್ದ ಫಲಾನುಭವಿಗಳ ಜತೆ ಪ್ರಧಾನಿ ಸಂವಾದ ಆರಂಭಿಸಿದ್ದಾರೆ.
ಮೊದಲ ದಿನ ದೇಶದ 3006 ಕೇಂದ್ರಗಳಲ್ಲಿ 3 ಲಕ್ಷ ಫಲಾನುಭವಿಗಳಿಗೆ ಲಸಿಕೆ ನೀಡಲಾಗುತ್ತಿದೆ. ಮುಂದಿನ 3-4 ತಿಂಗಳಲ್ಲಿ ಸುಮಾರು 30 ಕೋಟಿ ಫಲಾನುಭವಿಗಳಿಗೆ ಲಸಿಕೆ ನೀಡಲಾಗುವುದು ಎಂದು ವರದಿ ತಿಳಿಸಿದೆ.
ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ: ಪ್ರಧಾನಿ
ಕೋವಿಡ್ 19 ಲಸಿಕೆ ವಿತರಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿ ಮಾತನಾಡಿದ ಅವರು ನಾನು ಇಂದು ಭಾರತದ ಆರೋಗ್ಯ ಸಿಬಂದಿಗಳು ಹಾಗೂ ವಿಜ್ಞಾನಿಗಳಿಗೆ ನನ್ನ ಅಭಿನಂದನೆ ತಿಳಿಸುತ್ತೇನೆ. ಅಲ್ಲದೇ ಯಾವುದೇ ಕಾರಣಕ್ಕೂ ಲಸಿಕೆ ಕುರಿತು ದುರುದ್ದೇಶ ಪೂರ್ವಕವಾದ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಎಚ್ಚರಿಸಿದರು.
ಇದು ಭಾರತಕ್ಕೆ ಹೊಸ ಭಾಷ್ಯ ಬರೆದಿದ್ದು, “ಲಸಿಕೆ ಜತೆ ಶಿಸ್ತು” ಅಗತ್ಯ ಎಂದು ಎಚ್ಚರಿಸಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಯೊಬ್ಬ ನಾಗರಿಕರು ಸೋಂಕಿನ ಬಗ್ಗೆ ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.