Advertisement

ಎಸ್ಪಿಯದ್ದು ಭ್ರಷ್ಟಾಚಾರದ “ಸುಗಂಧ’! ಎಸ್ಪಿ ವಿರುದ್ಧ ಮೋದಿ ವಾಗ್ಧಾಳಿ

07:24 PM Dec 28, 2021 | Team Udayavani |

ಕಾನ್ಪುರ/ಚಂಡೀಗಢ: ಉತ್ತರಪ್ರದೇಶ ಚುನಾವಣೆಯ ಹೊಸ್ತಿಲಲ್ಲಿರುವಂತೆಯೇ, ಕಾನ್ಪುರ ಮೂಲದ ಸುಗಂಧದ್ರವ್ಯ ಉದ್ಯಮಿ ಪಿಯೂಷ್‌ ಜೈನ್‌ ಮನೆಯಲ್ಲಿ ಕೋಟ್ಯಂತರ ರೂ. ನಗದು ಪತ್ತೆಯಾಗಿರುವುದು ಈಗ ಬಿಜೆಪಿಗೆ ಹೊಸ “ಅಸ್ತ್ರ’ ಸಿಕ್ಕಂತಾಗಿದೆ.

Advertisement

ಪಿಯೂಷ್‌ ಜೈನ್‌ಗೂ ಸಮಾಜವಾದಿ ಪಕ್ಷಕ್ಕೂ ನಂಟಿದೆ ಎಂಬ ಆರೋಪವನ್ನು ಪ್ರಧಾನಿ ನರೇಂದ್ರ ಮೋದಿ ಯವರೂ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿ, ಎಸ್ಪಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಮಂಗಳವಾರ ಕಾನ್ಪುರದಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, “ನೋಟುಗಳು ತುಂಬಿರುವ ಪೆಟ್ಟಿಗೆಗಳು ಈಗ ಹೊರಗೆ ಬಂದಿವೆ. ಇದನ್ನು ಕೂಡ ನಾವೇ ಮಾಡಿದ್ದೇವೆ ಎಂದು ಅವರು(ಸಮಾಜವಾದಿ ಪಕ್ಷ) ಹೇಳಬಹುದು. ಉತ್ತರಪ್ರದೇಶದಾದ್ಯಂತ ಚಿಮುಕಿಸಲಾಗಿದ್ದ ಭ್ರಷ್ಟಾಚಾರದ ಸುಗಂಧ ಈಗ ಬಹಿರಂಗವಾಗಿದೆ. ಇದುವೇ ಅವರ ಸಾಧನೆ ಮತ್ತು ಸತ್ಯ’ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಸರ್ಕಾರಗಳು, ತಾವು 5 ವರ್ಷಗಳ ಕಾಲ ರಾಜ್ಯವನ್ನು ಲೂಟಿ ಮಾಡಲು ಲಾಟರಿ ಗೆದ್ದಿದ್ದೇವೆ ಎಂದು ಭಾವಿಸುತ್ತಿದ್ದವು. ಆದರೆ, ಈಗಿರುವ ಡಬಲ್‌ ಎಂಜಿನ್‌ ಸರ್ಕಾರ ಮಾತ್ರ ಪ್ರಾಮಾಣಿಕವಾಗಿ ಅಧಿಕಾರ ನಡೆಸುತ್ತಿದೆ ಎಂದೂ ಮೋದಿ ಹೇಳಿದ್ದಾರೆ.

ಪಿಯೂಷ್‌-ಪುಷ್ಪರಾಜ್‌ ಮಿಕ್ಸ್‌ಅಪ್‌:
ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ನಾಯಕ ಅಖೀಲೇಶ್‌ ಯಾದವ್‌, “ಉದ್ಯಮಿ ಪಿಯೂಷ್‌ ಜೈನ್‌ ಮತ್ತು ನಮ್ಮ ಪಕ್ಷದ ಪುಷ್ಪರಾಜ್‌ ಜೈನ್‌ ನಡುವೆ ಬಿಜೆಪಿ ಗೊಂದಲ ಮಾಡಿಕೊಂಡಿದೆ. ಪುಷ್ಪರಾಜ್‌ ಬದಲಿಗೆ ಪಿಯೂಷ್‌ ಮನೆಗೆ ಐಟಿ ದಾಳಿಯಾಗುವಂತೆ ಮಾಡಿದೆ. ಈ ಮೂಲಕ ತಮ್ಮದೇ ಉದ್ಯಮಿಯನ್ನು ಬಿಜೆಪಿ ರೈಡ್‌ ಮಾಡಿಸಿದೆ’ ಎಂದು ಹೇಳುವ ಮೂಲಕ ಜೈನ್‌ಗೂ ತಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ಗ್ರಾಹಕರನ್ನು ಆಕರ್ಷಿಸುತ್ತಿವೆ ಗಾಜಿನ ಭರಣಿಯ ಕಲರ್ ಕಲರ್ ಮೀನುಗಳು

Advertisement

ಘಟಿಕೋತ್ಸವದಲ್ಲಿ ಭಾಗಿ:
ಇದೇ ವೇಳೆ, ಪ್ರಧಾನಿ ಮೋದಿ ಅವರು ಮಂಗಳವಾರ ಐಐಟಿ ಕಾನ್ಪುರದ ಘಟಿಕೋತ್ಸವದಲ್ಲೂ ಭಾಗಿಯಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈಗಾಗಲೇ ಸಾಕಷ್ಟು ಸಮಯ ವ್ಯರ್ಥವಾಗಿದೆ. ಮುಂದಿನ 25 ವರ್ಷಗಳಲ್ಲಿ ಎಂತಹ ಭಾರತ ನಿಮಗೆ ಬೇಕು ಎಂದು ನಿರೀಕ್ಷಿಸುತ್ತೀರೋ, ಆ ಭಾರತದ ನಿರ್ಮಾಣಕ್ಕಾಗಿ ಈಗಲೇ ಕೆಲಸ ಶುರು ಮಾಡಿ ಎಂದು ಕರೆ ನೀಡಿದ್ದಾರೆ. ಭಾರತವನ್ನು ಸ್ವಾವಲಂಬಿ ದೇಶವನ್ನಾಗಿಸಲು ಅವಿರತವಾಗಿ ಶ್ರಮಿಸುವಂತೆಯೂ ಸಲಹೆ ನೀಡಿದ್ದಾರೆ.

ಮೆಟ್ರೋದಲ್ಲಿ ಮೋದಿ ಸಂಚಾರ
11 ಸಾವಿರ ಕೋಟಿ ರೂ. ವೆಚ್ಚದ ಕಾನ್ಪುರ ಮೆಟ್ರೋ ರೈಲು ಯೋಜನೆಯ ಕಾಮಗಾರಿ ಪೂರ್ಣಗೊಂಡಿರುವ ಸೆಕ್ಷನ್‌ ಅನ್ನು ಪ್ರಧಾನಿ ಮೋದಿ ಮಂಗಳವಾರ ಉದ್ಘಾಟಿಸಿದ್ದಾರೆ. ನಂತರ ಮೆಟ್ರೋದಲ್ಲಿ 10 ನಿಮಿಷಗಳ ಕಾಲ ಸಂಚಾರವನ್ನೂ ನಡೆಸಿದ್ದಾರೆ. ಈ ವೇಳೆ, ಸಿಎಂ ಯೋಗಿ ಆದಿತ್ಯನಾಥ್‌, ಕೇಂದ್ರ ಪೆಟ್ರೋಲಿಯಂ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಅವರೂ ಮೋದಿಗೆ ಸಾಥ್‌ ನೀಡಿದ್ದಾರೆ.

ಕ್ಯಾಪ್ಟನ್‌ ಸಹಚರರು ಬಿಜೆಪಿ ಸೇರುತ್ತಿರುವುದೇಕೆ?
ಪಂಜಾಬ್‌ ಅಸೆಂಬ್ಲಿ ಚುನಾವಣೆ ಸಮೀಪಿಸುತ್ತಿರುವಂತೆಯೇ, ಮಾಜಿ ಕ್ರಿಕೆಟಿಗ ದಿನೇಶ್‌ ಮೋಂಗ್ಯಾ ಹಾಗೂ ಕಾಂಗ್ರೆಸ್‌ನ ಹಾಲಿ ಶಾಸಕರಾದ ಫ‌ತೇಹ್‌ ಸಿಂಗ್‌ ಬಾಜ್ವಾ, ಬಲ್ವಿಂದರ್‌ ಸಿಂಗ್‌ ಲಡ್ಡಿ ಮಂಗಳವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಕಳೆದ ವಾರವೂ ಕ್ಯಾ.ಅಮರೀಂದರ್‌ ಸಿಂಗ್‌ಗೆ ಆಪ್ತರಾಗಿದ್ದ ಮೂವರು ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಸೇರಿದ್ದರು. ಇವರೆಲ್ಲರೂ ಅಮರೀಂದರ್‌ ಅವರ ಹೊಸ ಪಕ್ಷ ಪಂಜಾಬ್‌ ಲೋಕ್‌ ಕಾಂಗ್ರೆಸ್‌ಗೆ ಸೇರುವ ಬದಲು ಬಿಜೆಪಿಗೇಕೆ ಸೇರುತ್ತಿದ್ದಾರೆ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ. ಸದ್ಯದಲ್ಲೇ ಅಮರೀಂದರ್‌ ಅವರ ಪಕ್ಷವು ಬಿಜೆಪಿ ಜತೆ ವಿಲೀನವಾಗಲಿದೆ ಎಂಬ ಸುದ್ದಿಯೂ ಹರಿದಾಡುತ್ತಿದ್ದು, ಅದೇ ಕಾರಣಕ್ಕೆ ಇವರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಆಪ್‌ನಿಂದ ಅಭ್ಯರ್ಥಿಗಳ ಪಟ್ಟಿ:
ಆಮ್‌ ಆದ್ಮಿ ಪಕ್ಷ ಪಂಜಾಬ್‌ ಚುನಾವಣೆಗೆ ಮತ್ತೆ 15 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇದು ಆಪ್‌ ಬಿಡುಗಡೆ ಮಾಡುತ್ತಿರುವ 5ನೇ ಪಟ್ಟಿಯಾಗಿದೆ. ಈ ಮೂಲಕ ಪಕ್ಷದಿಂದ ಒಟ್ಟಾರೆ 88 ಅಭ್ಯರ್ಥಿಗಳನ್ನು ಘೋಷಿಸಿದಂತಾಗಿದೆ.

ಸಮಾಜವಾದಿ ಪಕ್ಷದ ಎಬಿಸಿಡಿಯೇ ಬೇರೆ ಇದೆ. ಅಲ್ಲಿ “ಎ’ ಎಂದರೆ “ಅಪರಾಧ’, “ಬಿ’ ಎಂದರೆ “ಭಾಯಿ-ಭತೀಜಾವಾದ್‌'(ಸ್ವಜನಪಕ್ಷಪಾತ), “ಸಿ’ ಎಂದರೆ “ಕರಪ್ಶನ್‌'(ಭ್ರಷ್ಟಾಚಾರ), “ಡಿ’ ಎಂದರೆ ದಂಗೆ. ಈ ಎಬಿಸಿಡಿಯನ್ನು ಬಿಜೆಪಿ ಅಳಿಸಿಹಾಕಿದೆ.
– ಅಮಿತ್‌ ಶಾ, ಕೇಂದ್ರ ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next