ಲಡಾಖ್: ಯೋಧರ ಶೌರ್ಯ, ತ್ಯಾಗ ಬೆಲೆ ಕಟ್ಟಲಾಗದ್ದು. ನಿಮ್ಮ ಶೌರ್ಯದಿಂದ ಇಡೀ ವಿಶ್ವ ಭಾರತದ ಶಕ್ತಿ ನೋಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇಂದು ಲೇಹ್ ಗೆ ಅಚ್ಚರಿಯ ಭೇಟಿ ನೀಡಿದ ಪ್ರಧಾನಿ ಮೋದಿ, ಗಡಿ ಪ್ರದೆಶದ ಸ್ಥಿತಿ ಗತಿಗಳ ಬಗ್ಗೆ ಮಾಹಿತಿ ಪಡೆದರು. ಸೇನಾಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದರು. ನಂತರ ಯೋಧರನ್ನು ಉದ್ದೇಶಿಸಿ ಮಾತನಾಡಿದರು.
ಸೈನಿಕರ ಶೌರ್ಯ ಈ ಪರ್ವತಗಳಿಗಿಂತಲೂ ದೊಡ್ಡದು. ನೀವು ತೋರಿದ ಶೌರ್ಯದಿಂದ ಭಾರತ ಹೆಮ್ಮೆ ಪಡುವಂತಾಗಿದೆ. ದೇಶದ ರಕ್ಷಣೆ ಯೋಧರ ಕೈಯಲ್ಲಿದೆ. ನಮಗೆ ನಿಮ್ಮ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದರು.
ಗಾಲ್ವಾನ್ ಕಣಿವೆ ನಮ್ಮದು. ಲಡಾಖ್ ನ ಪೂರ್ಣ ಭಾಗ ಭಾರತದ ಗೌರವದ ಪ್ರತೀಕ. ಲಡಾಖ್ ನ ಜನರು ಪ್ರತಿ ಹಂತದಲ್ಲಿ ಭಾರತದ ಜೊತೆಗೆ ನಿಂತಿದ್ದಾರೆ ಎಂದರು.
ನಿಮ್ಮ ತ್ಯಾಗ ಬಲಿದಾನಗಳ ಕಾರಣದಿಂದ ಆತ್ಮ ನಿರ್ಭರ ಭಾರತ ಸಂಕಲ್ಪವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದೀರಿ ಎಂದ ಅವರು ಗಾಲ್ವಾನ್ ಕಣಿವೆಯಲ್ಲಿ ನೀವು ತೋರಿದ ಪ್ರತಿರೋಧದ ಶೌರ್ಯದ ಕಥೆಗಳನ್ನು ಭಾರತದ ಮನೆಮನೆಗಳಲ್ಲೂ ಪ್ರತಿಧ್ವನಿಸುತ್ತಿದೆ ಎಂದರು.
ವಿಸ್ತಾರವಾದದ ಯುಗ ಸಮಾಪ್ತಿಯಾಗಿದೆ. ಈಗ ವಿಕಾಸವಾದದ ಸಮಯ. ವಿಸ್ತಾರವಾದ ಮಾನವೀಯತೆಗೆ ಮಾರಕವಾಗಿದೆ. ವಿಕಾಸವಾದವು ಭವಿಷ್ಯದ ಆಧಾರವಾಗಿದೆ ಎಂದು ಚೀನಾದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ದೇಶದ ರಕ್ಷಣೆಯ ಬಗ್ಗೆ ಯೋಚಿಸುವಾಗ ನಾನು ಯಾವಾಗಲೂ ಇಬ್ಬರು ಮಾತೆಯರನ್ನು ನೆನೆಯುತ್ತೇನೆ. ಒಬ್ಬರು ಭಾರತ ಮಾತೆ, ಮತ್ತೊಬ್ಬರು ನಿಮ್ಮಂತಹ ವೀರ ಯೋಧರನ್ನು ಹೆತ್ತ ಮಾತೆಯರು ಎಂದು ಪ್ರಧಾನಿ ಮೋದಿ ಹೇಳಿದರು.
ದುರ್ಬಲರಿಂದ ಶಾಂತಿ ಸ್ಥಾಪನೆ ನಡೆಸಲು ಸಾಧ್ಯವಿಲ್ಲ. ಶಾಂತಿ ಸ್ಥಾಪನೆಗೆ ಧೈರ್ಯ ಶೌರ್ಯವೇ ಅಗತ್ಯ. ಭಾರತಕ್ಕೆ ಅತ್ಯಾಧುನಿಕ ತಂತ್ರಾಜ್ಞಾನಗಳನ್ನು ತರುತ್ತಿದ್ದೇವೆ. ಯಾವುದೇ ವಿಶ್ವಯುದ್ಧ ಆಗಲಿ, ಶಾಂತಿಯ ಸ್ಥಿತಿಯಾಗಲಿ ನಮ್ಮ ಹೆಮ್ಮೆಯ ಸೈನಿಕರ ಶಕ್ತಿಯನ್ನು ಇಡೀ ವಿಶ್ವ ನೋಡಿದೆ. ನಾವು ಮಾನವೀಯತೆಯ ಉದ್ಧಾರಕ್ಕಾಗಿ ಕೆಲಸ ಮಾಡಿದ್ದೇವೆ ಎಂದರು.