Advertisement

ರಾಜ-ಮಹಾರಾಜರು ಬೇಕಿಲ್ಲ

01:38 AM Apr 01, 2019 | Team Udayavani |

ಹೊಸದಿಲ್ಲಿ: “ದೇಶದ ಜನರಿಗೆ ತಮ್ಮನ್ನು ಕಾಯುವ ಚೌಕೀದಾರ ಬೇಕೇ ಹೊರತು, ರಾಜ-ಮಹಾರಾಜರಲ್ಲ’.

Advertisement

– ಕಾಂಗ್ರೆಸ್‌ನ ಚೌಕೀದಾರ್‌ ವಾಗ್ಧಾಳಿಯನ್ನೇ ತಿರುಮಂತ್ರ ವನ್ನಾಗಿಸಿ, ಅದೇ ಪದವನ್ನು ಚುನಾವಣೆಯ ಪ್ರಬಲ ಅಸ್ತ್ರ ವನ್ನಾಗಿ ಬಳಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಆಡಿರುವ ಮಾತಿದು.

ಕೆಲವು ದಿನಗಳ ಹಿಂದೆಯೇ “ಮೈ ಭಿ ಚೌಕೀದಾರ್‌’ (ನಾನೂ ಚೌಕೀದಾರ) ಎಂಬ ಅಭಿಯಾನವನ್ನು ಆರಂಭಿಸಿ, ದೇಶಾದ್ಯಂತ ಹೊಸ ಅಲೆ ಎಬ್ಬಿಸಿದ್ದ ಮೋದಿ ರವಿವಾರ ಅದೇ ಹೆಸರಿನಲ್ಲಿ ಬೃಹತ್‌ ಕಾರ್ಯಕ್ರಮವೊಂದನ್ನು ನಡೆಸುವ ಮೂಲಕ ರಾಜಕೀಯ ಪ್ರತಿಸ್ಪರ್ಧಿಗಳಿಗೆ ಉತ್ತರ ನೀಡಿದ್ದಾರೆ. ದೇಶದಲ್ಲಿ ಎಲ್ಲರೂ ಚೌಕೀದಾರರಾದರೆ ಲೂಟಿ ಮಾಡಲು ಯಾರೂ ಇರುವುದಿಲ್ಲ ಎನ್ನುವ ಮೂಲಕ ನಾನು ಮತ್ತು ನೀವೆಲ್ಲರೂ ಚೌಕೀದಾರರೇ ಆಗಬೇಕು ಎಂದು ಪುನರುಚ್ಚರಿಸಿದ್ದಾರೆ. ಅಲ್ಲದೆ, ನನ್ನ ರಕ್ಷಣೆಯಲ್ಲಿ ಯಾರಿಗೂ ನಮ್ಮ ಹಣಕ್ಕೆ ಕೈ ಹಾಕಲು ಬಿಡುವುದಿಲ್ಲ. ದೇಶದ ಸಂಪತ್ತು ಸುರಕ್ಷಿತವಾಗಿರಿಸುವುದು ನನ್ನ ಜವಾಬ್ದಾರಿ ಎಂದು ಭರವಸೆ ನೀಡಿದರು.

ದಿಲ್ಲಿಯ ತಲ್ಕಾತೋರಾ ಸ್ಟೇಡಿಯಂನಲ್ಲಿ ರವಿವಾರ ನಡೆದ “ಮೈ ಭಿ ಚೌಕೀದಾರ್‌’ ಕಾರ್ಯಕ್ರಮವನ್ನು ದೇಶದ 500ಕ್ಕೂ ಹೆಚ್ಚು ಕಡೆ ಪ್ರಸಾರ ಮಾಡಲಾಗಿದ್ದು, ಸಮಾಜದ ವಿವಿಧ ಸ್ತರಗಳ ಜನರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು. ಈ ವೇಳೆ ವಿವಿಧ ರಾಜ್ಯಗಳ ಜನರು ಕೇಳಿರುವ ಪ್ರಶ್ನೆಗಳಿಗೂ ಅವರು ಉತ್ತರಿಸಿದರು. ಬಾಲಾಕೋಟ್‌ ದಾಳಿ, ಪಾಕಿಸ್ಥಾನದ ನೀತಿ, ವಿಪಕ್ಷಗಳ ಸುಳ್ಳು ಸಹಿತ ಹಲವು ವಿಚಾರಗಳನ್ನು ಪ್ರಸ್ತಾವಿಸಿದರು.

ಬಾಲಾಕೋಟ್‌ ದಾಳಿ ಬಗ್ಗೆ ಬಾಲಾಕೋಟ್‌ನಲ್ಲಿ ಭಾರತ ದಾಳಿ ಮಾಡಿದ ಅನಂತರ ಅಲ್ಲಿ ದಾಳಿ ನಡೆದೇ ಇಲ್ಲ ಎಂಬುದನ್ನು ಸಾಬೀತುಪಡಿಸಲು ಪಾಕಿಸ್ಥಾನ ಅಲ್ಲಿ ಶಾಲೆಗಳನ್ನು ನಿರ್ಮಿಸುತ್ತಿದೆ. ನಿರ್ಮಾಣವಾದ ಅನಂತರ ಮಾಧ್ಯಮವನ್ನು ಕರೆದುಕೊಂಡು ಹೋಗಿ ಇಲ್ಲಿ ಶಾಲೆಗಳ ಮೇಲೆ ಭಾರತ ದಾಳಿ ಮಾಡಿದೆ ಎಂದು ಹೇಳುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಬಾಲಾಕೋಟ್‌ನಲ್ಲಿ ದಾಳಿ ನಡೆದಿದೆ ಎಂದು ಹೇಳಿದರೆ, ಅಲ್ಲಿ ಉಗ್ರರ ನೆಲೆ ಇತ್ತು ಎಂದು ಒಪ್ಪಿಕೊಂಡಂತಾಗುತ್ತದೆ. ಅಲ್ಲಿ ಏನೂ ಇಲ್ಲ ಎಂದು ಪಾಕಿಸ್ಥಾನ ಹೇಳುತ್ತಲೇ ಇತ್ತು. ಆದರೆ ಕಳೆದ ಒಂದೂವರೆ ವರ್ಷದಿಂದಲೂ ಅಲ್ಲಿಗೆ ಯಾರಿಗೂ ಭೇಟಿ ನೀಡಲು ಅವಕಾಶ ನೀಡಿಲ್ಲ. ಅಕ್ರಮ ಚಟುವಟಿಕೆಗೆ ಇದೇ ಸಾಕ್ಷಿ ಎಂದರು.

Advertisement

ಮೋದಿ ಹೇಳಿಕೆ
– ನನ್ನ ರಕ್ಷಣೆಯಲ್ಲಿ ಯಾರಿಗೂ ನಮ್ಮ ಹಣಕ್ಕೆ ಕೈ ಹಾಕಲು ಬಿಡುವುದಿಲ್ಲ. ದೇಶದ ಸಂಪತ್ತು ಸುರಕ್ಷಿತವಾಗಿರಿಸುವುದು ನನ್ನ ಜವಾಬ್ದಾರಿ.
– ಚೌಕೀದಾರ್‌ ಎಂಬುದು ವ್ಯವಸ್ಥೆಯಲ್ಲ, ಚೌಕೀದಾರನಿಗೆ ಚೌಕಟ್ಟು ಇಲ್ಲ, ಇದೊಂದು ಸ್ಫೂರ್ತಿ, ಇದೊಂದು ಭಾವ.
– ದೇಶದಲ್ಲಿ ಎಲ್ಲರೂ ಚೌಕೀದಾರರಾದರೆ ಲೂಟಿ ಮಾಡಲು ಯಾರೂ ಇರುವುದಿಲ್ಲ. ದೇಶದ ಜನರಿಗೆ ಚೌಕೀದಾರರು ಇಷ್ಟ, ಅವರಿಗೆ ರಾಜ, ಮಹಾರಾಜರು ಬೇಕಿಲ್ಲ .
– ಕೆಲವು ಪಕ್ಷಗಳು ಹುಸಿ ಭರವಸೆಗಳನ್ನು ನೀಡುತ್ತಿವೆ. ಈ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು. ಅವರ ಭರವಸೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು.
– 2014ರಲ್ಲಿ ನಾನು ಪ್ರಧಾನಿಯಾಗುವುದಕ್ಕಿಂತ ಮೊದಲು ಪ್ರಧಾನಿ ಆಕಾಂಕ್ಷಿಗಳ ಸರದಿ ಇತ್ತು. ಈಗ ಇದು ಇನ್ನೂ ದೊಡ್ಡದಾಗಿದೆ.
– ಕಾಂಗ್ರೆಸ್‌ ಕಾಲ ಕಾಲಕ್ಕೆ ಹೊಸ ಸುಳ್ಳುಗಳನ್ನು ಹೇಳುತ್ತದೆ. ದಿಲ್ಲಿ ಚುನಾವಣೆ ಬಂದಾಗ ಚರ್ಚ್‌ ಮೇಲಿನ ದಾಳಿಯ ಸುಳ್ಳು ಹೇಳಲು ಆರಂಭಿಸಿತು. ಅಸಹಿಷ್ಣುತೆ ಎಂದು ಬೊಬ್ಬಿಟ್ಟವು. ಅಸಹಿಷ್ಣುತೆಯ ಆರೋಪಕ್ಕೆ ಚುನಾವಣೆಯಲ್ಲಿ ಉತ್ತರ ಸಿಕ್ಕಿತು.
– ಈ ದೇಶ ಮತ್ತು ಈ ಸರಕಾರವು ಅವರ ತಂದೆಯ ಸ್ವತ್ತು ಎಂದು ಕೆಲವರು ಭಾವಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next