Advertisement
ಮತ್ತೆ ಮತ್ತೆ ಏಕೆ ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದೀರಿ ಎಂಬ ಖರ್ಗೆ ಅವರ ಟೀಕೆಗೆ ರಾಜ್ಯಸಭೆಯಲ್ಲೇ ತಿರುಗೇಟು ನೀಡಿದ ಪ್ರಧಾನಿ ಮೋದಿ, “”ಕೆಲವರ ಅಕೌಂಟ್‌ಗಳು ಬಂದ್ ಆಗುತ್ತವೆ. ಇದಕ್ಕೆ ಕಾರಣ, ಹಲವಾರು ವರ್ಷಗಳಿಂದ ಕ್ಷೇತ್ರಕ್ಕೆ ಏನೂ ಮಾಡದೇ ಇರುವ ಬಗ್ಗೆ ಜನರಿಗೆ ಅರಿವಾಗಿದೆ,” ಎಂದು ಟಾಂಗ್ ನೀಡಿದ್ದಾರೆ.
Related Articles
Advertisement
ಇಂದಿರಾ ಗಾಂಧಿಯವರು ಪ್ರಧಾನಮಂತ್ರಿಗಳಾಗಿದ್ದ ವೇಳೆ, ಸಂವಿಧಾನದ 356ನೇ ವಿಧಿಯನ್ನು 50 ಬಾರಿ ಬಳಕೆ ಮಾಡಲಾಗಿದೆ ಎಂದು ಮೋದಿ ಹೇಳಿದರು. ದೇಶದ ಮೊತ್ತಮೊದಲ ಪ್ರಧಾನಿಯಾಗಿದ್ದ ಜವಹಾರಲ್ ಲಾಲ್ ನೆಹರೂ ಅವರಿಗೆ ಕೇರಳದಲ್ಲಿ ಅಧಿಕಾರದಲ್ಲಿ ಇದ್ದ ಸಿಪಿಎಂ ನೇತೃತ್ವದ ಸರ್ಕಾರ ಇರುವುದು ಇಷ್ಟವಿರಲಿಲ್ಲ. ಹೀಗಾಗಿ, ಅದನ್ನು ವಜಾ ಮಾಡಲಾಗಿತ್ತು ಎಂದರು.
ಕೆಸೆರೆಚಿದಷ್ಟೂ ಅನುಕೂಲ:
ನಮ್ಮ ಬಗ್ಗೆ ಆರೋಪ ಮಾಡಿದಷ್ಟೂ ಕಮಲ (ಬಿಜೆಪಿಯ ಚಿಹ್ನೆ) ಅರಳಲಿದೆ ಎಂದು ಪ್ರಧಾನಿ ಮೋದಿ ಪ್ರತಿಪಕ್ಷದ ನಾಯಕರನ್ನು ಛೇಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಪ್ರತಿಪಕ್ಷಗಳ ಸದಸ್ಯರು “ಮೋದಿ- ಅದಾನಿ ಭಾಯಿ ಭಾಯಿ’ ಎಂದು ಘೋಷಣೆ ಕೂಗುತ್ತಿರುವಂತೆಯೇ ಮಾತನಾಡಿದ ಪ್ರಧಾನಿ, “ನಾನು ದೇಶಕ್ಕಾಗಿ ಜೀವಿಸುತ್ತೇನೆ. ಜತೆಗೆ ದೇಶಕ್ಕಾಗಿ ಏನಾದರೂ ಮಾಡುವುದೇ ನನ್ನ ಗುರಿ. ಇದುವೇ ಪ್ರತಿಪಕ್ಷಗಳನ್ನು ಕಂಗೆಡಿಸಿದೆ. ಹೀಗಾಗಿ, ಅವರನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ರಾಜಕೀಯ ಆಟಗಳನ್ನು ಆಡುತ್ತಿದ್ದಾರೆ’ ಎಂದು ಕಟುವಾಗಿ ವಾಗ್ಧಾಳಿ ನಡೆಸಿದರು ಪ್ರಧಾನಿ ಮೋದಿ.
600 ಯೋಜನೆಗಳು:
ದೇಶದಲ್ಲಿ ನೆಹರೂ ಮತ್ತು ಗಾಂಧಿ ಹೆಸರಿನಲ್ಲಿಯೇ 600 ಯೋಜನೆಗಳು ಇವೆ. ಅದು ಆದದ್ದೂ ಕಾಂಗ್ರೆಸ್ ಅವಧಿಯಲ್ಲಿಯೇ ಎಂದು ಚುಚ್ಚಿದ್ದಾರೆ. “ನಾವು ಕೇವಲ ಭರವಸೆ ನೀಡುವುದರಲ್ಲಿ ನಂಬಿಲ್ಲ. ದೇಶದ ಅಭಿವೃದ್ಧಿಗಾಗಿ ಕಠಿಣ ದುಡಿಮೆಯನ್ನು ಆಯ್ಕೆ ಮಾಡಿಕೊಂಡಿದ್ದೇವೆ’ ಎಂದರು.
ಖರ್ಗೆ ಮಾತಿನ ಅಂಶಗಳಿಗೆ ಕತ್ತರಿ:
ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಸಮರ್ಪಿಸುವ ಗೊತ್ತುವಳಿ ಬಗ್ಗೆ ಮಾತನಾಡಿದ್ದ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮಾತುಗಳ ಕೆಲವು ಭಾಗಗಳನ್ನು ಕಡತದಿಂದ ತೆಗೆದು ಹಾಕಲಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದ ಖರ್ಗೆ, “ಯಾವ ಕಾರಣಕ್ಕಾಗಿ ನನ್ನ ಮಾತುಗಳನ್ನು ತೆಗೆಯಲಾಗಿದೆ. ಅದೇ ಪದಗಳನ್ನು ದಿ.ಅಟಲ್ ಬಿಹಾರಿ ವಾಜಪೇಯಿ ದಿ.ಪಿ.ವಿ.ನರಸಿಂಹ ರಾವ್ ವಿರುದ್ಧ ಬಳಕೆ ಮಾಡಿದ್ದು ಇನ್ನೂ ಕಡತಗಳಲ್ಲಿ ಇದೆ’ ಎಂದರು. ಅದಕ್ಕೆ ಸಭಾಪತಿ ಜಗದೀಪ್ ಧನ್ಕರ್ “ಸಭಾಪತಿಯ ನಿರ್ಧಾರ ಅಂತಿಮ’ ಎಂದರು.