ಮುಂಬೈ: ಸಂಗೀತದಲ್ಲಿ ಮಾತೃವಾತ್ಸಲ್ಯ ಮತ್ತು ಪ್ರೀತಿ ಉಣಬಡಿಸುವ ಮಾಂತ್ರಿಕ ಶಕ್ತಿ ಅಡಗಿದೆ. ದೇಶಭಕ್ತಿ ಮತ್ತು ಕರ್ತವ್ಯಪ್ರಜ್ಞೆಯನ್ನು ಪರಾಕಾಷ್ಠೆಗೆ ತಲುಪಿಸುವ ಸಾಮರ್ಥ್ಯವೂ ಅದರಲ್ಲಿದೆ. ಸಂಗೀತದ ಈ ಎಲ್ಲ ಶಕ್ತಿಗಳನ್ನು ನಾವು ಲತಾ ದೀದಿಯೊಳಗೆ ಕಾಣಲು ಸಾಧ್ಯವಾಗಿದ್ದು, ನಮ್ಮೆಲ್ಲರ ಅದೃಷ್ಟ. ಲತಾ ನನ್ನ ಪಾಲಿಗೆ ಹಿರಿಯ ಸೋದರಿ ಇದ್ದಂತೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.
ಜಮ್ಮು ಮತ್ತು ಕಾಶ್ಮೀರದ ಪ್ರವಾಸ ಮುಗಿಸಿ, ಭಾನುವಾರ ಸಂಜೆ ವೇಳೆಗೆ ಮುಂಬೈಗೆ ಬಂದಿಳಿದ ಪ್ರಧಾನಿ ಅವರು ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿ, ಮಾತನಾಡಿದರು. “ತಲೆಮಾರುಗಳವರೆಗೆ ಪ್ರೀತಿ ಮತ್ತು ಭಾವನೆಯನ್ನು ಉಡುಗೊರೆಯಾಗಿ ಹಂಚಿದವರು, ಲತಾ ದೀದಿ. ಇಂಥ ಸಾಧಕಿಯಿಂದ ನನಗೆ ಸೋದರಿಪ್ರೀತಿ ಸಿಕ್ಕಿರುವುದೇ ಒಂದು ಪುಣ್ಯ’ ಎಂದು ಭಾವುಕರಾದರು.
ಜನತೆಗೆ ಸಮರ್ಪಣೆ: “ಲತಾ ದೀದಿ ಆಶಿಸುತ್ತಿದ್ದ ಏಕತೆ ಮತ್ತು ಪ್ರೀತಿಯ ದ್ಯೋತಕವಾಗಿ ಈ ಗೌರವ ನನಗೆ ಒಲಿದಿದೆ. ಇದನ್ನು ಸ್ವೀಕರಿಸದೇ ಇರಲು ನನಗೆ ಸಾಧ್ಯವೇ ಇಲ್ಲ. ಈ ಪ್ರಶಸ್ತಿಯನ್ನು ನನ್ನೆಲ್ಲ ದೇಶವಾಸಿಗಳಿಗೆ ಸಮರ್ಪಿಸಲು ಬಯಸುತ್ತೇನೆ’ ಎಂದು ಭಾವುಕರಾದರು.
“ಹಲವು ದಶಕಗಳವರೆಗೆ ಭಾರತೀಯ ಸಿನಿಮಾ ಜಗತ್ತಿನ ನಾನಾ ಪರಿವರ್ತನೆಗಳಿಗೆ ಲತಾ ಮಂಗೇಶ್ಕರ್ ಅತ್ಯಂತ ನಿಕಟವಾಗಿ ಸಾಕ್ಷಿಯಾಗಿದ್ದರು. ಸಿನಿಮಾರಂಗದ ಆಚೆಗೂ ಅವರು ಭಾರತದ ಬೆಳವಣಿಗೆಯ ಬಗ್ಗೆ ಸದಾ ಚಿಂತಿಸುತ್ತಿದ್ದರು. ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನೋಡುವುದು ಅವರ ಕನಸಾಗಿತ್ತು’ ಎಂದು ತಿಳಿಸಿದರು.
ಚೊಚ್ಚಲ ಪ್ರಶಸ್ತಿ: ಮಾಸ್ಟರ್ ದೀನನಾಥ್ ಮಂಗೇಶ್ಕರ್ ಸ್ಮತಿ ಪ್ರತಿಷ್ಠಾನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿತರಿಸಿದ ಚೊಚ್ಚಲ ಪ್ರಶಸ್ತಿ ಇದಾಗಿದೆ. ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿದ ಸಾಧಕರನ್ನು ಗುರುತಿಸುವ ನಿಟ್ಟಿನಲ್ಲಿ ಪ್ರಶಸ್ತಿ ಸ್ಥಾಪನೆಗೊಂಡಿದ್ದು, ಇದರ ಚೊಚ್ಚಲ ಗೌರವ ಮೋದಿ ಅವರ ಮುಡಿಗೇರಿದೆ.
ಸೋದರಿಗೆ ಭೋಸ್ಲೆ ಹಾಡು ಸಮರ್ಪಣೆ
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಿಗ್ಗಜ ಗಾಯಕಿ ಆಶಾ ಭೋಸ್ಲೆ ಅವರು ತಮ್ಮ ಸೋದರಿ ಲತಾ ಮಂಗೇಶ್ಕರ್ ಅವರಿಗೆ “ಆಯೇಗಾ ಆನೆವಾಲಾ…’ ಎಂಬ ಗೀತೆಯನ್ನು ಹಾಡಿ, ಸಮರ್ಪಿಸಿದ್ದು ವಿಶೇಷವಾಗಿತ್ತು. ಈ ಹಾಡನ್ನು ಲತಾ ಮಂಗೇಶ್ಕರ್, 1949ರಲ್ಲಿ ತೆರೆಕಂಡ “ಮಹಲ್’ ಸಿನಿಮಾದಲ್ಲಿ ಹಾಡಿದ್ದರು.