ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದರು. ದಿಲ್ಲಿಯ ಏಮ್ಸ್ ನಲ್ಲಿಂದು ಪ್ರಧಾನಿ ಮೋದಿ ಕೋವಿಡ್ ಲಸಿಕೆ ಪಡೆದಿದ್ದಾರೆ.
ಮಾರ್ಚ್ 1ರಂದು ನರೇಂದ್ರ ಮೋದಿಯವರು ಮೊದಲ ಡೋಸ್ ಲಸಿಕೆ ಪಡೆದಿದ್ದರು. ಪುದುಚೇರಿಯ ಪಿ. ನಿವೇದ ಮತ್ತು ಪಂಜಾಬ್ನ ನಿಶಾ ಶರ್ಮಾ ಎಂಬ ಇಬ್ಬರು ನರ್ಸ್ಗಳು ಪ್ರಧಾನಿ ಮೋದಿ ಅವರಿಗೆ ಕೋವಿಡ್ ಲಸಿಕೆಯನ್ನು ನೀಡಿದರು.
ಲಸಿಕೆ ಪಡೆದ ಬಳಿಕ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ಏಮ್ಸ್ ನಲ್ಲಿ ಇಂದು ಎರಡನೇ ಡೋಸ್ ಲಸಿಕೆ ಪಡೆದಿದ್ದೇನೆ. ಕೋವಿಡ್ ವೈರಸ್ ನ್ನು ಸೋಲಿಸಲು ಇರುವ ಕೆಲವೇ ವಿಧಾನಗಳಲ್ಲಿ ಲಸಿಕೆ ಕೂಡಾ ಒಂದು. ನೀವು ಲಸಿಕೆ ಪಡೆಯಲು ಅರ್ಹರಾಗಿದ್ದಲ್ಲಿ ಆದಷ್ಟು ಬೇಗ ಲಸಿಕೆ ಪಡೆಯಿರಿ ಎಂದು ಜನತೆಗೆ ಕರೆ ನೀಡಿದ್ದಾರೆ.
ಸದ್ಯ ದೇಶಾದ್ಯಂತ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಸ್ವದೇಶಿ ನಿರ್ಮಿತ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗೆ ಜನವರಿ 16ರಂದು ಚಾಲನೆ ನೀಡಲಾಗಿತ್ತು. ಆರಂಭದಲ್ಲಿ ಕೋವಿಡ್ ವಾರಿಯರ್ಸ್ ಗೆ ಲಸಿಕೆ ನೀಡಿದ್ದು, ನಂತರ 60 ವರ್ಷ ಮೇಲ್ಪಟ್ಟವರಿಗೆ ನೀಡಲಾಗಿತ್ತು.
ರಾಜ್ಯದಲ್ಲೂ ಕೋವಿಡ್ ಲಸಿಕೆ ಅಭಿಯಾನ ವೇಗವಾಗಿ ನಡೆಯುತ್ತಿದ್ದು, ಈವರೆಗೆ ಅರ್ಧಕೋಟಿ ಡೋಸ್ ನೀಡಲಾಗಿದೆ. ಆರೋಗ್ಯ ಕಾರ್ಯರ್ತರು 5.7 ಲಕ್ಷ, ಮುಂಚೂಣಿ ಕಾರ್ಯಕರ್ತರು 2.52 ಲಕ್ಷ, 60 ವರ್ಷ ಮೇಲ್ಪಟ್ಟವರು 24.5 ಲಕ್ಷ, 45ರಿಂದ 59 ವರ್ಷದವರು 12.5 ಲಕ್ಷ ಸೇರಿ ಒಟ್ಟಾರೆ ಈವರೆಗೂ 45 ಲಕ್ಷ ಮಂದಿಗೆ ಮೊದಲ ಡೋಸ್ ನೀಡಿದೆ. ಈ ಪೈಕಿ ಐದು ಲಕ್ಷ ಮಂದಿ ಈಗಾಗಲೇ 2ನೇ ಡೋಸ್ ಪಡೆದಿದ್ದಾರೆ. ಒಟ್ಟಾರೆ 50 ಲಕ್ಷ ಡೋಸ್ ಪೂರ್ಣಗೊಂಡಿವೆ.