Advertisement

ಲಸಿಕೆ ಪಾಲಿಟಿಕ್ಸ್‌ ಬೇಡ

01:26 AM Jan 23, 2021 | Team Udayavani |

ಹೊಸದಿಲ್ಲಿ: ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಅಂಜಿಕೆ ಬೇಡ. ದೇಶದ ಪ್ರಮುಖ ವಿಜ್ಞಾನಿಗಳು ಮತ್ತು ವೈದ್ಯರೇ ಸರ್ವಸಮ್ಮತವಾಗಿ ಸುರಕ್ಷಿತ ಎಂದು ಸಾರಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ. ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿ ಲಸಿಕೆ ಹಾಕಿಸಿಕೊಂಡ ಆರೋಗ್ಯ ಕಾರ್ಯಕರ್ತರು ಮತ್ತು ಇತರ ಕೊರೊನಾ ವಾರಿಯರ್ಸ್‌ ಜತೆಗೆ ಅವರು ವೀಡಿಯೋ ಕಾನ್ಫರೆನ್ಸ್‌ ಮೂಲಕ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಈ ಅಂಶ ಸಾರಿದ್ದಾರೆ.

Advertisement

“ಕೋವಿಡ್ ಲಸಿಕೆ ವಿಚಾರದಲ್ಲಿ ರಾಜಕೀಯ ಮಾಡುವುದೇ ಬೇಡ. ರಾಜಕಾರಣಿಗಳು ಒಮ್ಮೆ ಅದು ಮತ್ತೂಮ್ಮೆ ಇದು ಎಂಬಂತೆ ಮಾತಾಡುತ್ತಾರೆ. ಆದರೆ ಲಸಿಕೆಯ ವಿಚಾರದಲ್ಲಿ ವಿಜ್ಞಾನಿಗಳು ಸಲಹೆ ನೀಡಿದ ಬಳಿಕವೇ ಅದನ್ನು ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ. “ವಿಜ್ಞಾನಿಗಳು ಏನು ಸಲಹೆ ನೀಡಿದ್ದಾರೆಯೋ ಅದನ್ನು ಜಾರಿ ಮಾಡಿದ್ದೇನೆ ಎಂದು ನಾನು ಟೀಕೆಗಳಿಗೆ ಉತ್ತರ ಕೊಡುತ್ತೇನೆ’ ಎಂದರು ಪ್ರಧಾನಿ.

“ವಿಜ್ಞಾನಿಗಳು ಲಸಿಕೆ ನೀಡಬಹುದು ಎಂದು ಸೂಚಿಸಿದ ಬಳಿಕ ಅದನ್ನು ಯಾರಿಗೆ ನೀಡುವ ಮೂಲಕ ಪ್ರಕ್ರಿಯೆ ಶುರು ಮಾಡಬಹುದು ಎಂಬ ಬಗ್ಗೆ ಚಿಂತಿಸಲಾಯಿತು. ಸೋಂಕಿನ ನಿಯಂತ್ರಣಕ್ಕಾಗಿ ಆರೋಗ್ಯ ಕಾರ್ಯಕರ್ತರು ಮತ್ತು ಕೊರೊನಾ ವಾರಿಯರ್ಸ್‌ ಮುಂಚೂಣಿಯಲ್ಲಿದ್ದಾರೆ. ಹೀಗಾಗಿ ಅವರಿಗೇ ಮೊದಲು ಲಸಿಕೆ ಹಾಕುವ ಬಗ್ಗೆ ಒಮ್ಮತಕ್ಕೆ ಬರಲಾಯಿತು’ ಎಂದರು.

ಕ್ಲೀನ್‌ಚಿಟ್‌ ಕೊಟ್ಟಿದ್ದಾರೆ: ಲಸಿಕೆಯ ಬಗ್ಗೆ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಮೆಚ್ಚುಗೆ ಮತ್ತು ಸುರಕ್ಷತೆಯಿಂದ ಕೂಡಿದೆ ಎಂದು ಈಗಾಗಲೇ ಹೇಳಿದ್ದಾರೆ. ಹೀಗಾಗಿ ಅದನ್ನು ಹಾಕಿಸಿಕೊಳ್ಳುವ ಬಗ್ಗೆ ಹಿಂಜರಿಕೆಯೇ ಅಗತ್ಯವಿಲ್ಲ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.

ಲಸಿಕೆ ಜನರ ಬಳಿಗೆ ಬರುವುದಕ್ಕೆ ಮೊದಲು ಅದನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಹಲವಾರು ಮಂದಿ ವಿಜ್ಞಾನಿಗಳು, ಸಂಶೋಧಕರು ಮತ್ತು ಇತರರ ಪಾತ್ರ ಧಾರಾಳವಾಗಿಯೇ ಇದೆ. ಲಸಿಕೆ ಸಿದ್ಧಗೊಂಡಿಲ್ಲ ಎಂಬ ಬಗ್ಗೆ ನಾನೂ ಒತ್ತಡಕ್ಕೆ ಒಳಗಾಗಿದ್ದೆ ಎಂದಿದ್ದಾರೆ ಪ್ರದಾನಿ ಮೋದಿ.

Advertisement

ಅಗೋಚರ ವೈರಿ: ವಿಜ್ಞಾನಿಗಳನ್ನು ಆಧುನಿಕ ಋಷಿಗಳು ಎಂದು ಬಣ್ಣಿಸಿದ ಪ್ರಧಾನಿ, ಅವರು ಅಗೋಚರ ವೈರಿಯಾಗಿರುವ ಕೋವಿಡ್ ಜತೆಗೆ ಹೋರಾಟ ನಡೆಸುತ್ತಿದ್ದಾರೆ. ನಮ್ಮ ದೇಶದಲ್ಲಿಯೇ ಸಿದ್ಧಗೊಂಡ ಕೋವಿಡ್ ನಿಯಂತ್ರಣ ಮಾರ್ಗೋ  ಪಾಯಗಳು ಸೋಂಕಿನ ಪ್ರಭಾವ ತಗ್ಗಿಸುವಲ್ಲಿ ನೆರವಾಗಿವೆ ಎಂದರು.  ದೇಶದಲ್ಲಿಯೇ ಸಂಶೋಧನೆ ಗೊಂಡು ಸಿದ್ಧಗೊಂಡ ಲಸಿಕೆ ಎಲ್ಲೆಡೆ ತಲಪುತ್ತಿವೆ. ಇದು ದೇಶವನ್ನು ಸ್ವಾವಲಂಬನೆಯತ್ತ ಕೊಂಡೊ ಯ್ಯಲಿದೆ. ಜತೆಗೆ ನಾವು ಲಸಿಕೆಗಳನ್ನು ನೆರೆಯ ದೇಶಗಳಿಗೆ ರಫ್ತು ಮಾಡಿದ್ದೇವೆ ಎಂದರು.

ವಾರಾಣಸಿಯಿಂದ ಲಭ್ಯವಾಗಿರುವ ಅಭಿಪ್ರಾಯ ಗಳು ದೇಶದ ಇತರ ಭಾಗಗಳಲ್ಲಿರುವ ಜನರಿಗೆ ಅನುಕೂಲವಾಗಲಿದೆ ಎಂದರು.

ಜಿಲ್ಲಾ ಮಹಿಳಾ ಆಸ್ಪತ್ರೆಯಲ್ಲಿ ಸಿಬಂದಿಯಾಗಿರುವ ಪುಷ್ಪಾ ದೇವಿ ಅವರು ಪ್ರಧಾನಿಗಳ ಜತೆಗೆ ಮೊದಲು ಸಂವಾದ ನಡೆಸಿದರು. “ಲಸಿಕೆ ಸುರಕ್ಷಿತವಾಗಿದೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತೀರಾ’ ಎಂದು ಪ್ರಧಾನಿ ಪ್ರಶ್ನಿಸಿದ್ದಕ್ಕೆ “ನಾನು ಅದೃಷ್ಟದಿಂದ ಲಸಿಕೆ ಹಾಕಿಸಿಕೊಂಡಿದ್ದೇನೆ ಎಂದು ಹೇಳಲು ಬಯಸುತ್ತೇನೆ’ ಎಂದರು. ಅದರಿಂದ ಯಾವುದೇ ರೀತಿ ಪ್ರತಿಕೂಲ ಪರಿಣಾಮ ಉಂಟಾಗಿಲ್ಲ. ಇತರ ಇಂಜೆಕ್ಷನ್‌ಗಳಂತೆಯೇ ಅದೂ ಆಗಿದೆ. ಹೀಗಾಗಿ ಎಲ್ಲರೂ ನಿರ್ಭೀತಿಯಿಂದ ಪಡೆದುಕೊಳ್ಳಿ ಎಂದು ಕರೆ ನೀಡಿದ್ದಾರೆ ಪುಷ್ಪಾ ದೇವಿ.

Advertisement

Udayavani is now on Telegram. Click here to join our channel and stay updated with the latest news.

Next