ಹೊಸದಿಲ್ಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಬುಧವಾರ ನಡೆಯಬಹುದು ಎನ್ನಲಾಗಿದೆ. ಇದಕ್ಕೂ ಮುನ್ನ ಪ್ರಮುಖ ಸಚಿವರೊಂದಿಗೆ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಇಂದು ಸಂಜೆ ಸಭೆ ಏರ್ಪಡಿಸಿದ್ದರು. ಆದರೆ ಇದೀಗ ಈ ಸಭೆ ರದ್ದಾಗಿದೆ ಎಂದು ವರದಿ ತಿಳಿಸಿದೆ.
ಮಂಗಳವಾರ ಸಂಜೆ ಐದು ಗಂಟೆಗೆ ನರೇಂದ್ರ ಮೋದಿ ಸಚಿವರೊಂದಿಗೆ ಸಭೆ ನಡೆಸಲು ನಿರ್ಧರಿಸಿದ್ದರು. ಎರಡು ವರ್ಷಗಳಲ್ಲಿ ಸಚಿವರ ಪ್ರದರ್ಶನ ಮತ್ತು ಮುಂದಿನ ದಿನಗಳ ಯೋಜನೆಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಸಲು ತೀರ್ಮಾನಿಸಲಾಗಿತ್ತು. ಅದರೆ ಈ ಸಭೆ ರದ್ದಾಗಿದ್ದು, ಸಂಪುಟ ವಿಸ್ತರಣೆ ಮತ್ತೆ ಮುಂದೂಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಇದನ್ನೂ ಓದಿ:ಸಮುದ್ರ ಸೇತುವೆ ಯೋಜನೆ ಎಂಎಸ್‌ಆರ್‌ಡಿಸಿ ಟೆಂಡರ್‌ಗೆ ಯಾವುದೇ ಪ್ರತಿಕ್ರಿಯೆ ಇಲ್ಲ
ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಇತ ಕೇಂದ್ರ ಸಚಿವರುಗಳಾದ ಧರ್ಮೇಂದ್ರ ಪ್ರಧಾನ್, ಪ್ರಹ್ಲಾದ್ ಜೋಶಿ, ಪಿಯೂಶ್ ಗೋಯಲ್ ಮತ್ತು ನರೇಂದ್ರ ಸಿಂಗ್ ತೋಮರ್ ಈ ಸಭೆಯಲ್ಲಿ ಭಾಗವಹಿಸುವವರಿದ್ದರು.
ಎರಡನೇ ಬಾರಿ ಪ್ರಧಾನಿಯಾದ ಬಳಿಕ ನರೇಂದ್ರ ಮೋದಿ ಮೊದಲ ಬಾರಿಗೆ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆ. ಜ್ಯೋತಿರಾಧಿತ್ಯ ಸಿಂಧಿಯಾ, ಸುಶೀಲ್ ಕುಮಾರ್ ಮೋದಿ, ಸರ್ಬಾನಂದ ಸೋನಾವಲ, ಪಶುಪತಿ ಪರಾಸ್, ಪ್ರತಾಪ್ ಸಿಂಹ ಈ ಬಾರಿ ಮೋದಿ ಸಂಪುಟ ಸೇರುವ ನಿರೀಕ್ಷೆಯಲ್ಲಿದ್ದಾರೆ