ಲಕ್ನೋ:ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀರಾಮ ಮಂದಿರಕ್ಕಾಗಿ ನಡೆಯಲಿರುವ ಭೂಮಿ ಪೂಜೆ ನೆರವೇರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ (ಆ.5-2020) ದೆಹಲಿಯಿಂದ ಲಕ್ನೋಗೆ ಆಗಮಿಸಿದ್ದಾರೆ. 12.40ಕ್ಕೆ ಭೂಮಿ ಪೂಜೆ ನೆರವೇರಲಿದೆ.
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈಗಾಗಲೇ ಅಯೋಧ್ಯೆಗೆ ಭೇಟಿ ನೀಡಿದ್ದು, ಸಿದ್ಧತೆ ಪರಿಶೀಲಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರು ವಿಶೇಷ ವಿಮಾನದಲ್ಲಿ ದೆಹಲಿಯಿಂದ ಲಕ್ನೋಗೆ ಬಂದಿಳಿದಿದ್ದಾರೆ. ಬಳಿಕ 11.30ಕ್ಕೆ ಅಯೋಧ್ಯೆಗೆ ಆಗಮಿಸಲಿದ್ದಾರೆ ಎಂದು ವರದಿ ತಿಳಿಸಿದೆ.
ಅಯೋಧ್ಯೆಗೆ ಬಂದ ಬಳಿಕ ಪ್ರಧಾನಿ ಮೋದಿ ಅವರು ಹನುಮಾನ್ ಗಡಿಗೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಐತಿಹಾಸಿಕ ಕಾರ್ಯಕ್ರಮಕ್ಕಾಗಿ ಇಡೀ ಅಯೋಧ್ಯೆ ನಗರಿ ಶೃಂಗಾರಗೊಂಡಿದ್ದು, ಎಲ್ಲೆಡೆ ಬೃಹತ್ ಎಲ್ ಇಡಿ, ಸಿಸಿಟಿವಿ ಸ್ಕ್ರೀನ್ ಇಡಲಾಗಿದ್ದು, ಸಾರ್ವಜನಿಕರು ಭೂಮಿ ಪೂಜೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ವರದಿ ತಿಳಿಸಿದೆ.
*ಅಯೋಧ್ಯೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದು, ಮೊದಲಿಗೆ ಹನುಮಾನ್ ಗಡಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ನಂತರ ರಾಮ್ ಲಲ್ಲಾಗೆ ಪೂಜೆ ಸಲ್ಲಿಸಿದರು.
*ಅಯೋಧ್ಯೆ ತಲುಪಿದ ಪ್ರಧಾನಿ ನರೇಂದ್ರ ಮೋದಿ. ನಿಗದಿಯಂತೆ 12.40ಕ್ಕೆ ಕೋಟ್ಯಂತರ ಹಿಂದೂಗಳ ಆಶಯದಂತೆ ರಾಮಮಂದಿರ ನಿರ್ಮಾಣಕ್ಕಾಗಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಪ್ರಧಾನಿ ಮೋದಿ ಅವರ ಹೆಲಿಕಾಪ್ಟರ್ ಸಾಕೇತ್ ಕಾಲೇಜ್ ನ ಹೆಲಿಪ್ಯಾಡ್ ನಲ್ಲಿ ಲ್ಯಾಂಡ್ ಆಗಿದ್ದು, ಇದೀಗ ಮೋದಿ ಅವರು ಹನುಮಾನ್ ಗಡಿಗೆ ತೆರಳಿದ್ದಾರೆ.
*ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಭೂಮಿ ಪೂಜೆ ನಡೆಯಲಿರುವ ಸ್ಥಳಕ್ಕೆ ತಲುಪಿದ್ದಾರೆ.
*ಪ್ರಧಾನಿ ನರೇಂದ್ರ ಮೋದಿ ಅವರು ಬರೋಬ್ಬರಿ 29 ವರ್ಷಗಳ ಬಳಿಕ ಅಯೋಧ್ಯೆಗೆ ಭೂಮಿ ಪೂಜೆ ನೆರವೇರಿಸಲು ಆಗಮಿಸುತ್ತಿದ್ದಾರೆ. ಶತಮಾನಗಳಷ್ಟು ಹಳೆಯ ವಿವಾದಿತ ಪ್ರಕರಣದ ಬಗ್ಗೆ ಕಳೆದ ವರ್ಷ ಸುಪ್ರೀಂಕೋರ್ಟ್ ರಾಮಜನ್ಮಭೂಮಿಯನ್ನು ಹಿಂದೂಗಳಿಗೆ ಒಪ್ಪಿಸಿ ಮಹತ್ವದ ತೀರ್ಪು ನೀಡಿತ್ತು.
ಪ್ರಧಾನಿ ಮೋದಿ ಅವರು ಚಿನ್ನದ ಬಣ್ಣದ ಕುರ್ತಾ ಹಾಗೂ ಬಿಳಿ ಧೋತಿ ಧರಿಸಿ ವಿಶೇಷ ವಿಮಾನದಲ್ಲಿ ಲಕ್ನೋಕ್ಕೆ ಆಗಮಿಸಿದ್ದಾರೆ. ಮೋದಿ ಅವರು 12.40ರ ಶುಭ ಮುಹೂರ್ತದಲ್ಲಿ 40 ಕಿಲೋ ತೂಕದ ಮೊದಲ ಬೆಳ್ಳಿ ಇಟ್ಟಿಗೆ ಪ್ರತಿಷ್ಠಾಪಿಸುವ ಮೂಲಕ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ವಿಶ್ವಹಿಂದೂ ಪರಿಷತ್ ಮುಖಂಡ ದಿ.ಅಶೋಕ್ ಸಿಂಘಾಲ್ ಅವರ ಸೋದರಳಿಯ ಸಲಿಲ್ ಸಿಂಘಾಲ್ ಯಜಮಾನನಾಗಿ ಭೂಮಿ ಪೂಜೆ ನೆರವೇರಿಸಲಿದ್ದಾರೆ.
ನವಭಾರತದ ಹೊಸ ಅಧ್ಯಾಯಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ. ಈ ಮೂಲಕ ದೇಶದಲ್ಲಿ ರಾಮರಾಜ್ಯದ ಯುಗಾರಂಭವಾಗಲಿದೆ. ಅಯೋಧ್ಯೆಯಲ್ಲಿ ಪತಂಜಲಿ ಯೋಗಪೀಠ ಬೃಹತ್ ಗುರುಕುಲವನ್ನು ತೆರೆಯಲಿದೆ. ಜಗತ್ತಿನ ಬೇರೆ, ಬೇರೆ ದೇಶಗಳಿಂದ ಆಗಮಿಸುವ ಜನರಿಗೆ ವೇದ ಮತ್ತು ಆರ್ಯುವೇದ ಕಲಿಯಲು ಇಲ್ಲಿ ಅವಕಾಶ ಕಲ್ಪಿಸಲಾಗುತ್ತದೆ ಎಂದು ಯೋಗಗುರು ಬಾಬಾರಾಮ್ ದೇವ್ ತಿಳಿಸಿದ್ದಾರೆ.