ಉಡುಪಿ:ಪ್ರಧಾನಿ ನರೇಂದ್ರ ಮೋದಿ ಅವರು ನಿರೀಕ್ಷೆಯಂತೆ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿಲ್ಲ. ಉಡುಪಿ ಶ್ರೀಕೃಷ್ಣಮಠ ಭೇಟಿಗೆ ಮತ್ತೊಂದು ದಿನಾಂಕವನ್ನು ನಿಗದಿ ಮಾಡುವಂತೆ ಬಿಜೆಪಿ ಮುಖಂಡರಿಗೆ ಸೂಚಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಉಡುಪಿಯಿಂದ ಪ್ರಧಾನಿ ಅವರು ಚಿಕ್ಕೋಡಿಗೆ ತೆರಳಿದ್ದರು.
ಮಂಗಳವಾರ ಕೃಷ್ಣನಗರಿ ಉಡುಪಿಯ ಎಂಜಿಎಂ ಮೈದಾನದಲ್ಲಿ ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದರು. ತಮ್ಮ ಭಾಷಣದಲ್ಲಿ ಇದು ಶ್ರೀಕೃಷ್ಣನಗರಿ, ಕನಕದಾಸರಿಗೆ ಶ್ರೀಕೃಷ್ಣ ಒಲಿದ ಪುಣ್ಯಭೂಮಿ ಎಂದು ಹೇಳಿದ್ದರು.
ಏತನ್ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಕೃಷ್ಣಮಠಕ್ಕೆ ಭೇಟಿ ನೀಡಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಸಮಯದ ಅಭಾವದಿಂದ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿಯ ಬಗ್ಗೆ ಮಠದ ಆಡಳಿತ ಮಂಡಳಿಗೆ ತಿಳಿಸಿ, ಮತ್ತೊಂದು ದಿನ ನಿಗದಿಪಡಿಸಿ ಎಂದು ಮೋದಿ ಅವರು ಸೂಚಿಸಿದ್ದಾರೆ ಎಂದು ವರದಿ ವಿವರಿಸಿದೆ.
ಮೋದಿಯವರು ಯಾವುದೇ ಕ್ಷಣದಲ್ಲಿ ನಿರ್ಧಾರ ಬದಲಿಸಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಬಹುದು ಎಂಬ ನಿರೀಕ್ಷೆಯಲ್ಲಿ ಮಂಗಳವಾರ ಬೆಳಗ್ಗೆ 12.30ರಿಂದ ಸಂಜೆ 4.30ರವರೆಗೆ ಸಾರ್ವಜನಿಕರಿಗೆ ಶ್ರೀಕೃಷ್ಣ ದರ್ಶನಕ್ಕೆ ಅವಕಾಶ ಕೊಟ್ಟಿರಲಿಲ್ಲವಾಗಿತ್ತು. ಅಲ್ಲದೇ ಮಠದ ಸುತ್ತಮುತ್ತಲಿನ ಎಲ್ಲ ಅಂಗಡಿಗಳನ್ನು ಮುಚ್ಚಲು ಪೊಲೀಸರು ಸೂಚನೆ ನೀಡಿದ್ದರು. ವಿಶೇಷ ಭದ್ರತಾ ಪಡೆ(ಎಸ್ ಪಿಜಿ) ಮಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಶ್ರೀಕೃಷ್ಣಮಠಕ್ಕೆ ಮೋದಿ ಭೇಟಿ ಇನ್ನೂ ಮುಗಿಯದ ಕುತೂಹಲ ಎಂದು ಉದಯವಾಣಿ ಪತ್ರಿಕೆ ಇಂದು ಪ್ರಕಟಿಸಿತ್ತು.