ವಾರಾಣಸಿ : ಇಲ್ಲಿಂದ ಸುಮಾರು 20 ಕಿ.ಮೀ. ದೂರದ ಮಘಾರ್ ಎಂಬಲ್ಲಿ ಸಾರ್ವಜನಿಕ ಭಾಷಣ ಕಾರ್ಯಕ್ರಮವನ್ನು ನಡೆಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಂದು 2019ರ ಲೋಕಸಭಾ ಚುನಾವಣೆಯ ಪ್ರಚಾರಾಭಿಯಾನಕ್ಕೆ ಚಾಲನೆ ನೀಡಿದರು.
ವಿರೋಧ ಪಕ್ಷಗಳು ಲೋಕಸಭಾ ಚುನಾವಣೆಗಾಗಿ ಒಗ್ಗೂಡುತ್ತಿರುವ ಬಗ್ಗೆ ವಾಗ್ಧಾಳಿ ನಡೆಸಿದ ಪ್ರಧಾನಿ ಮೋದಿ, ಮತ್ತೂಮ್ಮೆ ತುರ್ತು ಪರಿಸ್ಥಿತಿಯ ಕರಾಳ ನೆನಪುಗಳನ್ನು ಕೆದಕಿದರಲ್ಲದೆ ವಿರೋದ ಪಕ್ಷಗಳೆಲ್ಲ ಅಧಿಕಾರಕ್ಕಾಗಿ ಹಸಿದಿವೆ ಎಂದು ಹೇಳಿದರು.
“ಕೆಲವೊಂದು ರಾಜಕೀಯ ಪಕ್ಷಗಳಿವೆ; ಅವುಗಳಿಗೆ ಶಾಂತಿ, ಅಭಿವೃದ್ಧಿ ಬೇಕಾಗಿಲ್ಲ; ಅರಾಜಕತೆ, ಗೊಂದಲ, ಕ್ಷೋಭೆ ಬೇಕಾಗಿದೆ; ಏಕೆಂದರೆ ಸಮಾಜದಲ್ಲಿ ಈ ಪಿಡುಗುಗಳಿದ್ದರೆ ತಮಗೆ ಅದರಿಂದ ರಾಜಕೀಯ ಲಾಭ ದಕ್ಕುವುದೆಂದು ಅವು ಭಾವಿಸುತ್ತವೆ. ಆ ಪಕ್ಷಗಳಿಗೆ ಈ ದೇಶ ಮತ್ತು ಜನರ ಸ್ವಭಾವ ತಿಳಿದಿಲ್ಲ. ಸಂತ ಕಬೀರ್, ಮಹಾತ್ಮಾ ಗಾಂಧಿ, ಬಾಬಾ ಅಂಬೇಡ್ಕರ್ ಅವರಂತಹ ಮಹೋನ್ನತ ವ್ಯಕ್ತಿಗಳನ್ನು ನೀಡಿರುವ ದೇಶ ಇದಾಗಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.
ಮೋದಿ ಅವರು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ನಾಯಕ ಅಖೀಲೇಶ್ ಯಾದವ್ ಅವರ ಬಂಗಲೆ ಲೂಟಿ ವಿವಾದವನ್ನು ಉಲ್ಲೇಖೀಸಿ, ಈ ನಾಯಕರು ತಮ್ಮ ಬಂಗಲೆಗಳ ಬಗ್ಗೆ ಹೊಂದಿರುವಷ್ಟು ಕಾಳಜಿಯನ್ನು ದೇಶದ ಜನರ ಕಲ್ಯಾಣದ ಬಗ್ಗೆ ಹೊಂದಿಲ್ಲದಿರುವುದು ದುರದೃಷ್ಟಕರ’ ಎಂದು ಹೇಳಿದರು.
ಇದಕ್ಕೆ ಮೊದಲು ಪ್ರಧಾನಿ ಮೋದಿ ಅವರು ಸಂತ ಕಬೀರ್ ಅವರ 500ನೇ ಪುಣ್ಯತಿಥಿಯ ಪ್ರಯುಕ್ತ ಕಬೀರ್ ಮಝರ್‌ನಲ್ಲಿ ಛಾದರ್ ಅರ್ಪಿಸಿದರು.