ಹೊಸದಿಲ್ಲಿ: ಇದು ದುರದೃಷ್ಟ. ಸದುದ್ದೇಶಗಳ ಜತೆಗೆ ಕೇಂದ್ರ ಸರಕಾರ ಜಾರಿ ಮಾಡುವ ಯೋಜನೆಗಳಿಗೆ ರಾಜಕೀಯ ಬಣ್ಣ ಬಳಿಯಲಾಗುತ್ತಿದೆ…
– ಹೀಗೆಂದು ಹೇಳಿದ್ದು ಪ್ರಧಾನಿ ಮೋದಿ. ರವಿವಾರ ದಿಲ್ಲಿಯ ಪ್ರಗತಿ ಮೈದಾನ ಟನೆಲ್ ರಸ್ತೆ ಮತ್ತು ಐದು ಅಂಡರ್‌ಪಾಸ್‌ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಗ್ನಿಪಥ ಯೋಜನೆಯ ವಿರುದ್ಧ ದೇಶದ ಕೆಲವು ಭಾಗಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿಯವರ ಮಾತುಗಳು ಮಹತ್ವ ಪಡೆದಿವೆ. ಆದರೆ ಅವರು ಸದ್ಯ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾವಿಸಲಿಲ್ಲ ಎನ್ನುವುದು ಗಮನಾರ್ಹ.
ಕೇಂದ್ರ ಸರಕಾರವು ದೇಶ ಮತ್ತು ಜನರ ಅನುಕೂಲಕ್ಕಾಗಿ ಉತ್ತಮ ಉದ್ದೇಶಗಳನ್ನು ಇರಿಸಿಕೊಂಡು ಯೋಜನೆಗಳನ್ನು ರೂಪಿಸಿ ಜಾರಿ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ. ಉತ್ತಮ ಉದ್ದೇಶಗಳ ಯೋಜನೆಗಳೆಲ್ಲ ರಾಜಕೀಯದ ಲೇಪನ ಪಡೆದುಕೊಳ್ಳುತ್ತಿರುವುದು ದೇಶದ ದುರದೃಷ್ಟ ಎಂದು ವಿಷಾದಿಸಿದ್ದಾರೆ. ಮಾಧ್ಯಮಗಳೂ ಟಿಆರ್‌ಪಿಯ ಆಸೆಗಾಗಿ ಇಂಥ ಸಂಗತಿಗಳನ್ನು ಬಳಕೆ ಮಾಡಿಕೊಳ್ಳುತ್ತಿವೆ. ವಿಶೇಷವಾಗಿ ದೇಶದ ರಕ್ಷಣ ವಲಯದಲ್ಲಿ 80 ವರ್ಷಗಳಿಂದ ಹೆಚ್ಚಿನ ಬದಲಾವಣೆ ಮಾಡಲಾಗಿರಲಿಲ್ಲ. ಈಗ ಈ ಕ್ಷೇತ್ರದ ಸುಧಾರಣೆಗಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.
ಪ್ರಗತಿ ಮೈದಾನದ ಹೆಸರು ಮಾತ್ರ ಪ್ರಗತಿ ಯಾಗಿತ್ತು. ಅಲ್ಲಿ ಯಾವುದೇ ಅಭಿವೃದ್ಧಿ ಕಂಡುಬಂದಿರಲಿಲ್ಲ. ಎಂಟು ವರ್ಷಗಳ ಅವಧಿಯಲ್ಲಿ ದಿಲ್ಲಿ ಮೆಟ್ರೋ 193 ಕಿ.ಮೀ.ಗಳಿಂದ 400 ಕಿ.ಮೀ.ಗಳಿಗೆ ವಿಸ್ತರಣೆಯಾಗಿದೆ. ಮುಂದಿನ 25 ವರ್ಷಗಳಲ್ಲಿ ದೇಶ ಅಭಿವೃದ್ಧಿ ಯಾಗುವುದರ ಜತೆಗೆ ನಗರಗಳ ವ್ಯಾಪ್ತಿಯಲ್ಲಿ ಹೆಚ್ಚು ಮರಗಳನ್ನು ಬೆಳೆಸಬೇಕು ಮತ್ತು ಶುಚಿತ್ವ ವನ್ನು ಕಾಪಾಡಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಹೇಳಿದರು.