ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ದೇವರ ನಾಡು ಕೇರಳದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದರು.ವಿಪಕ್ಷಗಳ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದಾರೆ.
ತ್ರಿಶೂರ್‌ನಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಕೇರಳದ ಕಮ್ಯೂನಿಷ್ಟ್ ಸರ್ಕಾರ ಸಂಸ್ಕೃತಿಯ ಎಲ್ಲಾ ಅಂಶಗಳನ್ನು ಅಗೌರವಗೊಳಿಸುತ್ತಿದೆ. ದೇಶದ ಜನ ಸರ್ಕಾರದ ವರ್ತನೆಯನ್ನು ಗಮನಿಸುತ್ತಿದ್ದಾರೆ. ದೇವಾಲಯದ ವಿಚಾರ ಇಡೀ ದೇಶದ ಗಮನ ಸೆಳೆದಿದೆ ಎಂದರು.
ಮಹಿಳಾ ಸಬಲೀಕರಣದ ಕುರಿತು ಕಾಂಗ್ರೆಸಿಗರಿಗಾಗಲಿ ,ಕಮ್ಯುನಿಷ್ಟ್ರಿಗಾಗಲಿ ಯಾವುದೇ ಕಾಳಜಿ ಇಲ್ಲ. ಅವರಿಗೆ ಕಾಳಜಿ ಇದ್ದಿದ್ದರೆ, ಅವರು ಎನ್‌ಡಿಎ ಸರ್ಕಾರದ ತ್ರಿವಳಿ ತಲಾಖ್ ಕಾನೂನನ್ನು ವಿರೋಧಿಸುತ್ತಿರಲಿಲ್ಲ ಎಂದು ಕಿಡಿ ಕಾರಿದರು. ಭಾರತದಲ್ಲಿ ಹಲವು ಮಹಿಳೆಯರು ಮುಖ್ಯಮಂತ್ರಿಗಳಾಗಿದ್ದಾರೆ, ಆದರೆ ಅವರಲ್ಲಿ ಯಾರೊಬ್ಬರಾದರೂ ಕಮ್ಯುನಿಷ್ಟ್ ಪಕ್ಷದ ಮಹಿಳೆಯಿದ್ದಾರಾ ಎಂದು ಪ್ರಶ್ನಿಸಿದರು.
ಬಿಪಿಸಿಎಲ್ ನ ಕೊಚ್ಚಿ ಸಂಸ್ಕರಣಾಗಾರ ರಾಷ್ಟ್ರಕ್ಕೆ ಸಮರ್ಪಣೆ
ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ (ಬಿಪಿಸಿಎಲ್) ನ ಕೊಚ್ಚಿ ಸಂಸ್ಕರಣಾಗಾರದ ಸಮಗ್ರ ಸಂಸ್ಕರಣಾ ವಿಸ್ತರಣಾ ಸಂಕೀರ್ಣವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.
ಮೇ 2016 ರಿಂದ ಇಲ್ಲಿಯವರೆಗೆ ಗೀವ್ ಅಪ್ ಅಭಿಯಾನದಲ್ಲಿ ಒಂದು ಕೋಟಿ ಗ್ರಾಹಕರು ಎಲ್‌ಪಿಡಿ ಸಬ್ಸಿಡಿಯನ್ನು ಬಿಟ್ಟು ಬಿಟ್ಟಿದ್ದಾರೆ ಎಂದರು.
ನಮ್ಮ ಸರ್ಕಾರ ಕಚ್ಚಾ ತೈಲದ ಆಮದನ್ನು ಶೇಕಡ 10 ರಷ್ಟು ಕಡಿಮೆಗೊಳಿಸಲು ಮತ್ತು ಅಮೂಲ್ಯವಾದ ವಿದೇಶಿ ವಿನಿಮಯವನ್ನು ಉಳಿಸುವ ಕಡೆಗೆ ನಿರ್ಣಾಯಕ ಕ್ರಮಗಳನ್ನು ಕೈಗೊಂಡಿದೆ ಎಂದರು.