Advertisement

ಗಣಿನಾಡಲ್ಲಿ ಮೋದಿ; ಕಾಂಗ್ರೆಸ್ ಬಳ್ಳಾರಿಯನ್ನು ಕೆಟ್ಟದಾಗಿ ಬಿಂಬಿಸಿದೆ

04:10 PM May 03, 2018 | Sharanya Alva |

ಬಳ್ಳಾರಿ:ಕಾಂಗ್ರೆಸ್ ಪಕ್ಷದಿಂದಾಗಿಯೇ ಬಳ್ಳಾರಿ ಹಿಂದುಳಿದಿದೆ. ಬಳ್ಳಾರಿಯನ್ನು ಕಾಂಗ್ರೆಸ್ ಪಕ್ಷ ಕೆಟ್ಟ ರೀತಿಯಲ್ಲಿ ಬಿಂಬಿಸಿದೆ. ಪಾದಯಾತ್ರೆ ನಡೆಸುವ ನಾಟಕವಾಡುವ ಮೂಲಕ ಕಾಂಗ್ರೆಸ್ ಅಧಿಕಾರ ಗಿಟ್ಟಿಸಿಕೊಂಡಿದೆ. ಆದರೆ ಅಪೂರ್ವ ಸಂಪತ್ತು ಹೊಂದಿರುವ ಬಳ್ಳಾರಿ ಅಭಿವೃದ್ಧಿ ನಿರ್ಲಕ್ಷಿಸಿದ್ದು ಕಾಂಗ್ರೆಸ್ ಪಕ್ಷ ಎಂದು ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದರು.

Advertisement

ಗುರುವಾರ ಗಣಿನಾಡು ಬಳ್ಳಾರಿಯ ಮೈದಾನದಲ್ಲಿ ನಡೆದ ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಭ್ರಷ್ಟಾಚಾರದಲ್ಲಿ ಮುಳುಗಿರುವ ವ್ಯಕ್ತಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟಿದೆ. ತುಂಗಭದ್ರಾ ಡ್ಯಾಂ ನಿರ್ಲಕ್ಷ್ಯದಿಂದಾಗಿ ಜನರಿಗೆ, ರೈತರಿಗೆ ನೀರು ಸಿಗುತ್ತಿಲ್ಲ. ಡ್ಯಾಂ ಅಡಿಯಲ್ಲಿ ಸಿಲುಕಿರುವ ಹೂಳನ್ನು ಎತ್ತುತ್ತಿಲ್ಲ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಾವಿರಾರು ಚೆಕ್ ಡ್ಯಾಂ ನಿರ್ಮಾಣದ ಘೋಷಣೆ ಮಾಡಿದೆ. ಚಿಕ್ಕಚಿಕ್ಕ ಕೆಲಸ ಆಗಬೇಕಾದ್ರೂ ಲಂಚ ಕೊಡಬೇಕು. 5 ವರ್ಷಗಳಲ್ಲಿ ಗಣಿಗಾರಿಕೆಗೆ ಯಾವುದೇ ನೀತಿ ರೂಪಿಸಿಲ್ಲ. ಕರ್ನಾಟಕ ರಾಜ್ಯದಲ್ಲಿ ಸಿದ್ಧರುಪಯ್ಯ ಸರ್ಕಾರವಿದೆ ಎಂದು ಕಿಡಿಕಾರಿದರು.

ಸುಳ್ಳು ಭರವಸೆ ಕೊಟ್ಟ ಸೋನಿಯಾ:

ಅಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬಳ್ಳಾರಿಯಿಂದ ಸ್ಪರ್ಧಿಸಿದ್ದರು. ಅಲ್ಲದೇ 3 ಸಾವಿರ ಕೋಟಿ ರೂಪಾಯಿ  ಪ್ಯಾಕೇಜ್ ಘೋಷಿಸಿದ್ದರು. ಆದರೆ ಗೆದ್ದ ಮೇಲೆ ಅದನ್ನು ಮರೆತು ಬಿಟ್ಟರು. ಗಣಿಗಾರಿಕೆ ಕುರಿತ ಕಾನೂನಿನಲ್ಲಿ ಬದಲಾವಣೆ ತಂದೆವು ಎಂದರು.

Advertisement

ಸಿದ್ದರಾಮಯ್ಯ ಏಳೆಂಟು ಕೆರೆ ನೀರು ಕುಡಿದು ಬಂದಿದ್ದಾರೆ:

ಆಡಳಿತಾರೂಢ, ಕಾಂಗ್ರೆಸ್ ಚರಿತ್ರೆ ಬಗ್ಗೆ ಟೀಕಾಪ್ರಹಾರ ನಡೆಸಿದ ಪ್ರಧಾನಿ ಮೋದಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಏಳೆಂಟು ಕೆರೆ ನೀರು ಕುಡಿದುಕೊಂಡು ಬಂದಿರುವ ನಾಯಕ. ಅಧಿಕಾರಕ್ಕಾಗಿ ಪಾರ್ಟಿಗಳನ್ನು ಬದಲಿಸಿಕೊಂಡು ಬಂದ ನಾಯಕ ಅವರು. ದಲಿತ ಹಾಗೂ ಮುಸ್ಲಿಂ ವರ್ಗಕ್ಕೆ ವಿರೋಧವಾಗಿಯೇ ಕಾಂಗ್ರೆಸ್ ನಡೆ. ಚುನಾವಣೆವರೆಗೂ ಖರ್ಗೆ ಸಿಎಂ ಎಂದು ಹೇಳಿ ವಂಚಿಸಿರುವ ಕಾಂಗ್ರೆಸ್ ಪಕ್ಷ. ನಿಜಲಿಂಗಪ್ಪ ಅವರಿಗೂ ವಂಚಿಸಿರುವುದು ಕಾಂಗ್ರೆಸ್ ಪಕ್ಷ. ಆದರೆ ಟೀ ಮಾರುತ್ತಿದ್ದ ನನ್ನ ಪ್ರಧಾನಿ ಹುದ್ದೆಗೇರಿಸಿದ್ದು ಬಿಜೆಪಿ ಎಂದು ಹೇಳಿದರು.

900 ಕೋಟಿಯಲ್ಲಿ ಈ ಸರ್ಕಾರ ಬರೇ 37 ಲಕ್ಷ ರೂಪಾಯಿ ಮಾತ್ರ ಖರ್ಚು ಮಾಡಿದೆ. ಕಾಂಗ್ರೆಸ್ ಸರ್ಕಾರ ಅಕ್ರಮಗಳನ್ನು ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಬಳ್ಳಾರಿ ಅಭಿವೃದ್ಧಿಯಾದರೆ ಕರ್ನಾಟಕ ಅಭಿವೃದ್ಧಿಯಾದಂತೆ. ಮೇ 12ರಂದು ಬೂತ್, ಬೂತ್ ಗೆ ಜನರನ್ನು ಕರೆದುಕೊಂಡು ಬಂದು ಬಿಜೆಪಿಗೆ ಮತ ಹಾಕಿಸಿ, ಬನ್ನಿ ಎಲ್ಲರೂ ಕೈಜೋಡಿ, ಸರ್ಕಾರ ಬದಲಿಸಿ, ಈ ಸಿದ್ಧರುಪಯ್ಯ ಸರ್ಕಾರವನ್ನು ತೊಲಗಿಸಿ ಎಂದು ಮನವಿ ಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next