Advertisement

ಆಕ್ಸಿಜನ್ ಕೊರತೆ, ಸರಬರಾಜು ಕುರಿತು ಉನ್ನತ ಮಟ್ಟದ ಸಭೆ ಕರೆದ ಪ್ರಧಾನಿ ಮೋದಿ

05:43 PM Apr 22, 2021 | Team Udayavani |

ನವದೆಹಲಿ:ದೇಶಾದ್ಯಂತ ಮಾರಣಾಂತಿಕ ಕೋವಿಡ್ ಎರಡನೇ ಅಲೆ ಹೆಚ್ಚಳವಾಗುತ್ತಿರುವ ನಡುವೆಯೇ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ(ಏಪ್ರಿಲ್ 22)ಉನ್ನತ ಮಟ್ಟದ ಸಭೆಯನ್ನು ಕರೆದಿರುವುದಾಗಿ ವರದಿ ತಿಳಿಸಿದೆ.

Advertisement

ಕಳೆದ ಕೆಲವು ವಾರಗಳಲ್ಲಿ ಆಕ್ಸಿಜನ್ ಸರಬರಾಜು ಮಾಡಲು ತೆಗೆದುಕೊಂಡ ಕ್ರಮದ ಬಗ್ಗೆ ಅಧಿಕಾರಿಗಳು ಪ್ರಧಾನಿ ಮೋದಿ ಅವರಿಗೆ ಸಭೆಯಲ್ಲಿ ಮಾಹಿತಿ ನೀಡಲಿದ್ದಾರೆ ಎಂದು ಪ್ರಧಾನಿ ಕಚೇರಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಈ ತುರ್ತು ಸಭೆಯಲ್ಲಿ ಪ್ರಧಾನಿ ಮೋದಿ ಅವರು ಆಕ್ಸಿಜನ್ ಉತ್ಪಾದನೆಯನ್ನು ಹೆಚ್ಚಳ ಮಾಡುವ ಮೂಲಕ ವಿವಿಧ ಆಯಾಮಗಳಲ್ಲಿ ಶೀಘ್ರವಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ ಎಂಬ ಬಗ್ಗೆ ತಿಳಿಸಲಿದ್ದಾರೆ ಎಂದು ವರದಿ ವಿವರಿಸಿದೆ.

ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಬಲ ನೀಡಲು ಸಕಾಲಕ್ಕೆ ಆಕ್ಸಿಜನ್ ಸರಬರಾಜು ಮಾಡಬೇಕಾಗಿದೆ. ಅಲ್ಲದೇ ಆಕ್ಸಿಜನ್ ವಿತರಣೆಯನ್ನು ತ್ವರಿತಗೊಳಿಸಬೇಕು ಎಂದು ಪ್ರಧಾನಿ ಮೋದಿ ಅವರು ಸಭೆಯಲ್ಲಿ ವಿವರಿಸಲಿದ್ದಾರೆ ಎಂದು ವರದಿ ತಿಳಿಸಿದೆ.

ಸಭೆಯಲ್ಲಿ ವಿವಿಧ ರಾಜ್ಯಗಳ ಬೇಡಿಕೆಯಂತೆ ಆಕ್ಸಿಜನ್ ಪೂರೈಕೆಗೆ ಬಳಸಬಹುದಾದ ಮಾರ್ಗೋಪಾಯದ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗುವುದು. ಜನರ ಜೀವ ಉಳಿಸಲು ಅಗತ್ಯವಾಗಿರುವ ಆಕ್ಸಿಜನ್ ಅನ್ನು ರಾಜ್ಯಗಳಿಗೆ ತ್ವರಿತವಾಗಿ ಸರಬರಾಜು ಮಾಡಬೇಕಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

Advertisement

ದೇಶದ ಸುಮಾರು 20 ರಾಜ್ಯಗಳು ಪ್ರತಿದಿನ 6,785 ಮೆಟ್ರಿಕ್ ಟನ್ ಗಳಷ್ಟು ಮೆಡಿಕಲ್ ಆಕ್ಸಿಜನ್ ಬೇಡಿಕೆ ಇಟ್ಟಿದ್ದು, ಇದರ ಹೊರತಾಗಿಯೂ ಕೇಂದ್ರ ಸರ್ಕಾರ ಏಪ್ರಿಲ್ 21ರಿಂದ ಈ ರಾಜ್ಯಗಳಿಗೆ 6,822 ಮೆಟ್ರಿಕ್ ಟನ್ ನಷ್ಟು ಆಕ್ಸಿಜನ್ ನಿಗದಿಪಡಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕೆಲವು ದಿನಗಳಿಂದ ಖಾಸಗಿ, ಸ್ಟೀಲ್ ಪ್ಲ್ಯಾಂಟ್, ಇಂಡಸ್ಟ್ರೀಸ್, ಆಕ್ಸಿಜನ್ ಉತ್ಪಾದಕರ ಸಹಕಾರದೊಂದಿಗೆ ಪ್ರತಿದಿನ ವೈದ್ಯಕೀಯ ಆಕ್ಸಿಜನ್ ಅನ್ನು 3,300 ಮೆಟ್ರಿಕ್ ಟನ್ ಗಳಷ್ಟು ಹೆಚ್ಚಿಸಲಾಗಿದೆ. ಇದರಲ್ಲಿ ತುರ್ತು ಅಗತ್ಯವಿಲ್ಲದ ಕೈಗಾರಿಕೆಗಳಿಗೆ ಆಕ್ಸಿಜನ್ ಸರಬರಾಜನ್ನು ನಿಲ್ಲಿಸಲಾಗಿದೆ ಎಂದು ವರದಿ ತಿಳಿಸಿದೆ.

ಪಶ್ಚಿಮಬಂಗಾಳ ಭೇಟಿ ರದ್ದು, ನಾಳೆ ಉನ್ನತ ಮಟ್ಟದ ಸಭೆ

ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮಬಂಗಾಳದ ಶುಕ್ರವಾರ(ಏ.23)ದ ಭೇಟಿಯನ್ನು ರದ್ದುಗೊಳಿಸಿದ್ದು, ಏತನ್ಮಧ್ಯೆ ಕೋವಿಡ್ 19 ಸೋಂಕಿಗೆ ಸಂಬಂಧಿಸಿದಂತೆ ನಾಳೆ ಉನ್ನತ ಮಟ್ಟದ ಸಭೆಯನ್ನು ಕರೆದಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next