ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಮಾರಣಾಂತಿಕ ಕೋವಿಡ್ 19 ವೈರಸ್ ವೇಗವಾಗಿ ಹರಡುತ್ತಿದ್ದು ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಕುರಿತು ವಿರೋಧ ಪಕ್ಷಗಳ ಮುಖಂಡರ ಜತೆ ಚರ್ಚೆ ನಡೆಸಿದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು, ದೇಶಾದ್ಯಂತ ಏಪ್ರಿಲ್ 14ರ ನಂತರವೂ ಲಾಕ್ ಡೌನ್ ಮುಂದುವರಿಸುವ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿರುವುದಾಗಿ ವರದಿ ತಿಳಿಸಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಸಭೆ ನಡೆಸಿದ ವೇಳೆ, ಜನರಿಂದಲೂ ಬಹಳಷ್ಟು ಸಲಹೆಗಳು ಬಂದಿದೆ. ಅಲ್ಲದೇ ತಜ್ಞರು ಕೂಡಾ ಇನ್ನಷ್ಟು ದಿನ ಲಾಕ್ ಡೌನ್ ಮುಂದುವರಿಸುವಂತೆ ಸಲಹೆ ನೀಡಿರುವುದಾಗಿ ತಿಳಿಸಿದರು.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್, ಎನ್ ಸಿಪಿಯ ಶರದ್ ಪವಾರ್ ಹೊರತುಪಡಿಸಿ ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್, ಬಿಎಸ್ಪಿಯ ಸತೀಶ್ ಮಿಶ್ರಾ, ಲೋಕ್ ಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್, ಶಿರೋಮಣಿ ಅಕಾಲಿ ದಳದ ಸುಖ್ ಬೀರ್ ಸಿಂಗ್ ಬಾದಲ್, ಜನತಾದಳದ (ಯು) ರಾಜೀವ್ ರಾಜನಾಥ್ ಸಿಂಗ್, ಬಿಜು ಜನತಾ ದಳದ ಪಿನಾಕಿ ಮಿಶ್ರಾ, ಶಿವಸೇನಾದ ಸಂಜಯ್ ರಾವತ್, ಟಿಎಂಸಿ ಸುದೀಪ್ ಬಂಡೋಪಧ್ಯಾಯ ವಿಡಿಯೋ ಕಾನ್ಫರೆನ್ಸ್ ನಲ್ಲಿ ಪಾಲ್ಗೊಂಡಿದ್ದರು.
ಈ ಎಲ್ಲಾ ನಾಯಕರಿಗೆ ವಿವಿಧ ಸಚಿವಾಲಯದ ಆರೋಗ್ಯ, ಗೃಹ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಕೋವಿಡ್ 19 ಸೋಂಕಿನ ವಿರುದ್ಧದ ಹೋರಾಟಕ್ಕೆ ಲಾಕ್ ಡೌನ್ ಎಷ್ಟು ಅಗತ್ಯ ಎಂಬ ಬಗ್ಗೆ ವಿವರ ನೀಡಿರುವುದಾಗಿ ವರದಿ ತಿಳಿಸಿದೆ.