Advertisement

“ದಿ ಕಾಶ್ಮೀರ್‌ ಫೈಲ್ಸ್‌’ಸಿನಿಮಾ ವಿರುದ್ಧ ಅಪಪ್ರಚಾರಕ್ಕೆ ಪ್ರಧಾನಿ ಮೋದಿ ಕಿಡಿ

01:16 AM Mar 16, 2022 | Team Udayavani |

ನವದೆಹಲಿ: “ಕಾಶ್ಮೀರ್‌ ಫೈಲ್ಸ್‌’ ಸಿನಿಮಾ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ವಾಕ್‌ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತದೆ ಎಂದು ಪ್ರತಿಪಾದಿಸುವ ಕೆಲವರು 5-6 ದಿನಗಳಿಂದ ವ್ಯಗ್ರರಾಗಿದ್ದಾರೆ. ಸಿನಿಮಾವನ್ನು ನೋಡಿ, ಅದರಲ್ಲಿ ಏನಿದೆ ಎಂಬುದನ್ನು ವೀಕ್ಷಿಸಿ ಸತ್ಯ ಪರೀಕ್ಷಿಸುವ ಬದಲು ಅದರ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

Advertisement

ಬಹಳ ಕಾಲದಿಂದ ಉದ್ದೇಶ ಪೂರ್ವಕವಾಗಿ ಮುಚ್ಚಿಟ್ಟ ಸತ್ಯ ಈಗ ಬಹಿರಂಗವಾಗಿರುವುದಕ್ಕೆ ಕೆಲವರಿಗೆ ಅಸಮಾಧಾನ ಇದೆ ಎಂದೂ ಮೋದಿ ಛೇಡಿಸಿದ್ದಾರೆ. ಆ.24 (ದೇಶ ವಿಭಜನೆಗೊಂಡ ದಿನ) ವನ್ನು ಕರಾಳ ದಿನ ಎಂದು ನಾವು ಭಾವಿಸುತ್ತೇವೆ. ಹಲವು ಮಂದಿಗೆ ದೇಶ ವಿಭಜನೆಗೊಂಡದ್ದರ ಬಗ್ಗೆ ಆಕ್ಷೇಪ ಇದೆ. ಆದರೆ, ಅದರ ವಿರುದ್ಧ ಯಾರಾದರೂ ಸಿನಿಮಾ ಮಾಡಿದ್ದರೇ ಎಂದು ಮೋದಿ ಪ್ರಶ್ನಿಸಿದ್ದಾರೆ. ಇತಿಹಾಸವನ್ನು ಕಾಲ ಕಾಲಕ್ಕೆ ಜನರ ಮುಂದೆ ಪ್ರಸ್ತುತ ಪಡಿಸಬೇಕು. ಪುಸ್ತಕ, ಸಾಹಿತ್ಯ, ಕವನಗಳಂತೆ ಸಿನಿಮಾ ಕೂಡ ಇತಿಹಾಸ ತಿಳಿಸುವ ಒಂದು ಮಾಧ್ಯಮವೇ ಆಗಿದೆ ಎಂದೂ ಪ್ರಧಾನಿ ಹೇಳಿದ್ದಾರೆ.

ತುರ್ತುಪರಿಸ್ಥಿತಿಯ ಅವಧಿಯಲ್ಲಿನ ಬೆಳವಣಿಗೆ ಬಗ್ಗೆ ಕೂಡ ಯಾರೂ ಸಿನಿಮಾ ಮಾಡಿರಲಿಲ್ಲ. ಏಕೆಂದರೆ ಆ ದಿನಗಳಲ್ಲಿ ಏನಾಗಿತ್ತು ಎಂಬುದನ್ನು ಉದ್ದೇಶಪೂರ್ವಕವಾಗಿ ಮುಚ್ಚಿ ಹಾಕಲು ಪ್ರಯತ್ನಿಸಲಾಗಿತ್ತು ಎಂದು ಹೇಳಿದ್ದಾರೆ.

“ಈ ಸಿನಿಮಾ ಸರಿಯಾಗಿಲ್ಲ ಎಂದಾದರೆ, ಅವರು ತಮ್ಮದೇ ರೀತಿಯಲ್ಲಿ ಸಿನಿಮಾ ನಿರ್ಮಿಸಲಿ. ಅವರನ್ನು ತಡೆಯುತ್ತಿರುವವರು ಯಾರು? ಹಲವು ವರ್ಷಗಳಿಂದ ಮುಚ್ಚಿಟ್ಟಿದ್ದ ಸತ್ಯ ಈಗ ಎಲ್ಲರಿಗೂ ಗೊತ್ತಾಗುತ್ತಿದೆ ಎನ್ನುವುದೇ ಸಿನಿಮಾ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ಚಿಂತೆಯಾಗಿದೆ. ಸತ್ಯದ ವಿಚಾರವಾಗಿ ಮಾತನಾಡುತ್ತಿರುವವರು ಹೊಣೆ ಅರಿತೇ ಮಾತನಾಡುತ್ತಾರೆ. ಅವರ ಪರವಾಗಿ ನಿಲ್ಲಬೇಕಾದ ಅಗತ್ಯವಿದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದೇ ಮೊದಲು:
ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಪ್ರಧಾನಿ ಕಾಶ್ಮೀರ್‌ ಫೈಲ್ಸ್‌ ಬಗ್ಗೆ ಮಾತನಾಡಿದ ಅಂಶವನ್ನು ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ತೀರಾ ಅಪರೂಪವೆಂಬಂತೆ ಪ್ರಧಾನಿ ಬಿಜೆಪಿ ಸಭೆಯಲ್ಲಿ ಮಾಡಿದ ಭಾಷಣದ ಅಂಶವನ್ನು ಬಹಿರಂಗಗೊಳಿಸಲಾಗಿದೆ.

Advertisement

ತೆರಿಗೆ ವಿನಾಯಿತಿ ಕೊಟ್ಟ ಉ.ಪ್ರ:
ದೇಶಾದ್ಯಂತ ಪ್ರದರ್ಶನ ಕಾಣುತ್ತಿರುವ “ದ ಕಾಶ್ಮೀರ್‌ ಫೈಲ್ಸ್‌’ ಸಿನಿಮಾಗೆ ಉತ್ತರ ಪ್ರದೇಶ ಸರ್ಕಾರ ತೆರಿಗೆ ವಿನಾಯಿತಿ ನೀಡಿದೆ. ಈ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಟ್ವೀಟ್‌ ಮಾಡಿದ್ದಾರೆ. “ಕಾಶ್ಮೀರದ ಹಿಂದೂಗಳು ಅನುಭವಿಸಿದ ನೋವಿನ ಆಧಾರದಲ್ಲಿ ಅದನ್ನು ನಿರ್ಮಿಸಲಾಗಿದೆ. ಅದನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ನೋಡಬೇಕು’ ಎಂದು ಉಪಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ ಟ್ವೀಟ್‌ ಮಾಡಿದ್ದಾರೆ.

ಭಾವುಕರಾದ ಅನುಪಮ್‌ ಖೇರ್‌, ವಿವೇಕ್‌
ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಕಥೆಯನ್ನೇ ತೆರೆ ಮೇಲೆ ತಂದಿರುವ ಕಾಶ್ಮೀರ್‌ ಫೈಲ್ಸ್‌ ಸಿನಿ ತಂಡದೊಂದಿಗೆ “ಆಜ್‌ ತಕ್‌’ ವಾಹಿನಿಯು ಸಂವಾದ ನಡೆಸಿದೆ. ಸಂವಾದಕ್ಕೆ ವಿಶೇಷವಾಗಿ ಕಾಶ್ಮೀರಿ ಪಂಡಿತರ ಕುಟುಂಬಗಳನ್ನೇ ಕರೆಸಲಾಗಿತ್ತು. ಕುಟುಂಬದ ಸದಸ್ಯರು ತಮ್ಮ ಮೇಲಾದ ಹಲ್ಲೆಯನ್ನು ವಿವರಿಸುವಾಗ ಸಿನಿಮಾದ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಮತ್ತು ನಟ ಅನುಪಮ್‌ ಖೇರ್‌ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next