ಅಯೋಧ್ಯೆ: ಆಧುನಿಕ ಸೌಲಭ್ಯಗಳೊಂದಿಗೆ ಉನ್ನತೀಕರಿಸಿದ ಅಯೋಧ್ಯಾ ಧಾಮ್ ಜಂಕ್ಷನ್ ರೈಲು ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಇಂದು(ಶನಿವಾರ) ಉದ್ಘಾಟಿಸಿದರು.
ಪ್ರಸ್ತುತ ನಿಲ್ದಾಣದ ಬಳಿ ಮೊದಲ ಹಂತವಾಗಿ ನಿರ್ಮಿಸಲಾದ ಹೊಸ ನಿಲ್ದಾಣವನ್ನು ಪ್ರಧಾನಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಭಾರತೀಯ ರೈಲ್ವೇಗೆ ಹೊಸ ಸೇರ್ಪಡೆಯಾದ ಎರಡು ಅಮೃತ್ ಭಾರತ್ ರೈಲುಗಳು ಮತ್ತು ಆರು ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳಿಗೆ ಪ್ರಧಾನಮಂತ್ರಿ ಚಾಲನೆ ನೀಡಿದರು.
ಮೂರು ಪ್ಲಾಟ್‌ಫಾರ್ಮ್‌ಗಳು ಸೇರಿದಂತೆ ವಿಮಾನ ನಿಲ್ದಾಣದ ಟರ್ಮಿನಲ್‌ಗಳಂತೆಯೇ ಸೌಲಭ್ಯಗಳನ್ನು ಒದಗಿಸಲಾಗಿದೆ. 1 ಲಕ್ಷ ಚದರ ಅಡಿ ವಿಸ್ತೀರ್ಣದ ನಿಲ್ದಾಣದಲ್ಲಿ ಲಿಫ್ಟ್‌ಗಳು, ಎಸ್ಕಲೇಟರ್‌ಗಳು, ಫುಡ್ ಪ್ಲಾಜಾಗಳು, ಪೂಜಾ ಉದ್ದೇಶಗಳಿಗಾಗಿ ಅಂಗಡಿಗಳು, ಕ್ಲೋತ್ ರೂಮ್‌ಗಳು, ಶಿಶುಪಾಲನಾ ಕೊಠಡಿಗಳು, ವಿಶ್ರಾಂತಿ ಕೊಠಡಿಗಳು ಮತ್ತು ಆರೋಗ್ಯ ಕೇಂದ್ರದಂತಹ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲಾಗಿದೆ.
ಪ್ರಧಾನಮಂತ್ರಿಯವರು ದರ್ಭಾಂಗ-ಅಯೋಧ್ಯೆ-ದೆಹಲಿ ಮತ್ತು ಮಾಲ್ಡಾ-ಬೆಂಗಳೂರು ಅಮೃತ್ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದರು. ಇದಾದ ಬಳಿಕ ಶ್ರೀ ಮಾತಾ ವೈಷ್ಣೋದೇವಿ ಕತ್ರಾ-ನವದೆಹಲಿ, ಅಮೃತಸರ-ದೆಹಲಿ, ಕೊಯಮತ್ತೂರು-ಬೆಂಗಳೂರು, ಮಂಗಳೂರು-ಮಡ್ಗಾಂವ್, ಜಲ್ನಾ-ಮುಂಬೈ, ಅಯೋಧ್ಯೆ-ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದರು.
ಅಮೃತ್ ಭಾರತ್ ರೈಲುಗಳು 130 ಕಿಮೀ ವೇಗದಲ್ಲಿ ಚಲಿಸುವ ಮತ್ತು ಪುಶ್-ಪುಲ್ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುವ ವಂದೇ ಭಾರತ್‌ಗೆ ಪ್ರತಿಸ್ಪರ್ಧಿಯಾಗಿ ಸೌಲಭ್ಯಗಳನ್ನು ಹೊಂದಿವೆ.
ಶನಿವಾರ ಬೆಳಗ್ಗೆ 10 ಗಂಟೆಗೆ ಅಯೋಧ್ಯೆಯ ಮಹರ್ಷಿ ವಾತ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಅವರನ್ನು ರಾಜ್ಯಪಾಲ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬರಮಾಡಿಕೊಂಡರು. ಅಲ್ಲಿಂದ ರೋಡ್ ಶೋ ಮೂಲಕ 13 ಕಿ.ಮೀ ದೂರದ ಅಯೋಧ್ಯಾ ಧಾಮ್ ಜಂಕ್ಷನ್ ರೈಲು ನಿಲ್ದಾಣ ತಲುಪಿದರು.