ವಾರಾಣಸಿ: ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ಮಂಗಳವಾರ) ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಪ್ರತಿಪಾದಕರಾಗಿ ಪಂಡಿತ್ ಗಣೇಶ್ವರ್ ಶಾಸ್ತ್ರಿ, ಬೈಜನಾಥ್ ಪಟೇಲ್, ಲಾಲ್‌ಚಂದ್ ಕುಶ್ವಾಹಾ ಹಾಗೂ ಸಂಜಯ್ ಸೋಂಕರ್ ಜೊತೆಗಿದ್ದರು.
ನಾಮಪತ್ರ ಸಲ್ಲಿಸುವ ಮುನ್ನ ಪ್ರಧಾನಿ ಮೋದಿ ಇಂದು ಬನಾರಸ್‌ನ ದಶಾಶ್ವಮೇಧ ಘಾಟ್‌ನಲ್ಲಿ ಗಂಗಾ ನದಿಗೆ ಪೂಜೆ ಸಲ್ಲಿಸಿದರು. ಇದಾದ ಬಳಿಕ ಕಾಲಭೈರವ ದೇವಾಲಯಕ್ಕೂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
2014ರಲ್ಲಿ ಮೊದಲ ಬಾರಿಗೆ ಗೆದ್ದಿದ್ದ ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಮೂರನೇ ಬಾರಿಗೆ ಆಯ್ಕೆಯಾಗುವ ಭರವಸೆಯನ್ನು ಮೋದಿ ವ್ಯಕ್ತಪಡಿಸಿದ್ದಾರೆ. ‘ಕಾಶಿಯೊಂದಿಗಿನ ನನ್ನ ಸಂಬಂಧ ಬೇರ್ಪಡಿಸಲಾಗದಂತದ್ದು. ಪದಗಳಲ್ಲಿ ಅದನ್ನು ವರ್ಣಿಸಲು ಸಾಧ್ಯವಿಲ್ಲ’ ಎಂದು ಅವರು ಎಕ್ಸ್ ನಲ್ಲಿ ಹೇಳಿದ್ದಾರೆ.
ಕಾಲಭೈರವನ ದರ್ಶನದ ನಂತರ ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಎಲ್ಜೆಪಿ-ರಾಮ್ ವಿಲಾಸ್ ಮುಖ್ಯಸ್ಥ ಚಿರಾಗ್ ಪಾಸ್ವಾನ್, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಮತ್ತು ರಾಷ್ಟ್ರೀಯ ಲೋಕ ಮೋರ್ಚಾ ಮುಖ್ಯಸ್ಥ ಉಪೇಂದ್ರ ಕುಶ್ವಾಹ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: Miyazaki: ಧಾರವಾಡ ಮಾವು ಮೇಳದಲ್ಲಿ ಗಮನ ಸೆಳೆದ 2.5 ಲಕ್ಷ ರೂ.ಬೆಲೆಯ ಮಿಯಾ ಜಾಕಿ ಮಾವು