Advertisement

ಪ್ರಶ್ನೆಗೆ ಹಿಂಜರಿತ ಬೇಡ

07:35 AM Sep 18, 2018 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ 68ನೇ ವಸಂತಕ್ಕೆ ಕಾಲಿಟ್ಟಿದ್ದು, ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಕೇಂದ್ರ ಸಂಪುಟದ ಸಹೋದ್ಯೋಗಿಗಳು, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ ಸೇರಿದಂತೆ ರಾಜಕೀಯ, ಬಾಲಿವುಡ್‌ ಸೇರಿದಂತೆ ಪ್ರಮುಖ ಕ್ಷೇತ್ರದ ಗಣ್ಯರು ಶುಭ ಹಾರೈಸಿದ್ದಾರೆ.

Advertisement

ತಮ್ಮ ಸ್ವಕ್ಷೇತ್ರ ವಾರಾಣಸಿಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸೋಮವಾರ ಮಕ್ಕಳ ಜತೆಗೆ ಮುಕ್ತವಾಗಿ ಬೆರೆತು ಹುಟ್ಟಿದ ಹಬ್ಬ ಆಚರಿಸಿಕೊಂಡರು. ಈ ವೇಳೆ ಮಾತನಾಡಿದ ಅವರು, ಪ್ರಶ್ನೆ ಕೇಳಲು ಹಿಂಜರಿಕೆ ಬೇಡ. ಅದು ಕಲಿಕೆಗೆ ನೆರವಾಗುತ್ತದೆ ಎಂದರು. ವಿದ್ಯಾರ್ಥಿ ಜೀವನದಲ್ಲಿ ಕಲಿಕೆಯಷ್ಟೇ ಮಹತ್ವ ಕ್ರೀಡೆಗೆ ನೀಡಬೇಕು. ದೇಹದ ಆರೋಗ್ಯಕ್ಕೆ ಕ್ರೀಡಾ ಚಟುವಟಿಕೆ ಸಹಾಯಕ ಎಂದರು. ವಿಶ್ವಕರ್ಮ ಜಯಂತಿಯ ದಿನದಂದೇ ನಿಮ್ಮ ಶಾಲೆಗೆ ಬಂದಿದ್ದೇನೆ. ಅದಕ್ಕೆ ಪೂರಕವಾಗಿ ವಿವಿಧ ಚಟುವಟಿಕೆಗಳನ್ನು ಕಲಿತುಕೊಳ್ಳಿ. ಮುಂದೊಂದು ದಿನ ಅದು ಜೀವನಕ್ಕೆ ನೆರವಾಗುತ್ತದೆ ಎಂದು ಹೇಳಿದ್ದಾರೆ. 

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿ “ನಮ್ಮ ಪ್ರಧಾನಿ ನರೇಂದ್ರ ಮೋದಿಯವರಿಗೆ ಹುಟ್ಟುಹಬ್ಬದ  ಶುಭಾಶಯಗಳು. ಅವರಿಗೆ ಯಾವತ್ತೂ ಉತ್ತಮ ಆರೋಗ್ಯ ಮತ್ತು ಸಂತೋಷ ಸಿಗಲಿ ಎಂದು ಹಾರೈಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಅದಕ್ಕೆ ಪ್ರಧಾನಿ ಧನ್ಯವಾದ ಸಲ್ಲಿಸಿದ್ದಾರೆ. ಟ್ವೀಟ್‌ನಲ್ಲಿ ಶುಭ ಹಾರೈಸಿದ ಎಲ್ಲಾ ಪ್ರಮುಖರಿಗೂ, ಪ್ರಧಾನಿ ನರೇಂದ್ರ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ.

ವಿಭಿನ್ನವಾಗಿ ಆಚರಣೆ: ಉತ್ತರ ಪ್ರದೇಶದಲ್ಲಿ ಪ್ರಧಾನಿ ಜನ್ಮದಿನದ ಹಿನ್ನೆಲೆಯಲ್ಲಿ 68 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಜತೆಗೆ 68 ಸ್ಥಳಗಳಲ್ಲಿ 68 ಕೆಜಿ ತೂಕದ ಕೇಕ್‌ಗಳನ್ನು ಕತ್ತರಿಸಿ ಸಂಭ್ರಮಾಚರಣೆ ನಡೆಸಲಾಗಿದೆ.

ವಾರದ ಕಾರ್ಯಕ್ರಮ: ಹೊಸದಿಲ್ಲಿ ಬಿಜೆಪಿ ಘಟಕ ಹುಟ್ಟುಹಬ್ಬ ಪ್ರಯುಕ್ತ ವಾರ ಕಾಲ ವಿವಿಧ ಕಾರ್ಯಕ್ರಮ ಆಯೋಜಿಸಲಿದೆ.

Advertisement

5 ಕೆ.ಜಿ ತೂಕದ ಪುಸ್ತಕ
ಪ್ರಧಾನಿ ಜನ್ಮದಿನ ಪ್ರಯುಕ್ತ ಹೊಸದಿಲ್ಲಿಯಲ್ಲಿ 672 ಪುಟಗಳ 5 ಕೆಜಿ ತೂಕದ ಪುಸ್ತಕ ಬಿಡುಗಡೆ ಮಾಡಲಾಗಿದೆ. “ನರೇಂದ್ರ ಮೋದಿ: ಎ ಚರಿಷ್ಮಾಟಿಕ್‌ ಆ್ಯಂಡ್‌ ವಿಷನರಿ ಸ್ಟೇಟ್ಸ್‌ಮ್ಯಾನ್‌’ ಎಂಬ ಹೆಸರಿನ ಪುಸ್ತಕ ಅದಾಗಿದೆ. ಜಪಾನ್‌ನ ಮಟ್ಟೆ ಆರ್ಟ್‌ ಪೇಪರ್‌ನಲ್ಲಿ ಅದನ್ನು ರಚಿಸಲಾಗಿದ್ದು, ಲಂಡನ್‌ನ ಯು.ಕೆ.ಪಬ್ಲಿಷರ್ಸ್‌ ಆ್ಯಂಡ್‌ ಡಿಸ್ಟ್ರಿಬ್ಯೂಟರ್ಸ್‌ ಪ್ರಕಟಿಸಿದೆ.

568 ಕೆಜಿ ಲಡ್ಡು 
ಹುಟ್ಟಿದ ಹಬ್ಬದ ಪ್ರಯುಕ್ತ ಹೊಸದಿಲ್ಲಿಯಲ್ಲಿ ಕೇಂದ್ರ ಸಚಿವರಾದ ಪ್ರಕಾಶ್‌ ಜಾವಡೇಕರ್‌ ಮತ್ತು ಮುಖಾ¤ರ್‌ ಅಬ್ಟಾಸ್‌ ನಖೀ 568 ಕೆಜಿ ತೂಕದ ಲಡ್ಡು ಅನಾವರಣ ಮಾಡಿದ್ದಾರೆ. 

ಶುಭಾಶಯ ಕೋರಿದ ಕುಮಾರಸ್ವಾಮಿ
ಕರ್ನಾಟಕದ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಕನ್ನಡದಲ್ಲಿ ಟ್ವೀಟ್‌ ಮಾಡಿ ಪ್ರಧಾನಿಯವರಿಗೆ ಶುಭ ಹಾರೈಸಿದ್ದಾರೆ. “ದೇವರು ತಮಗೆ ಆಯುಷ್ಯ, ಆರೋಗ್ಯ ಕರುಣಿಸಲಿ’ ಎಂದು ಬರೆದಿದ್ದಾರೆ.

ಶಿಶುವಿಗೆ  ಚಿನ್ನದ ಉಂಗುರ
ತಮಿಳುನಾಡು ಬಿಜೆಪಿ ಘಟಕದ ವತಿಯಿಂದ ಪ್ರಧಾನಿ ಹುಟ್ಟಿದ ಹಬ್ಬ ಪ್ರಯುಕ್ತ ನವಜಾತ ಶಿಶುವಿಗೆ ಚಿನ್ನದ ಉಂಗುರ ವಿತರಿಸಲಾಗಿದೆ. ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆಯಾಗಿರುವ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷೆ ತಮಿಳ್‌ಸೈ ಸುಂದರರಾಜನ್‌ ಕೇಂದ್ರ ಚೆನ್ನೈನಲ್ಲಿರುವ ಸರಕಾರಿ ಆಸ್ಪತ್ರೆಯಲ್ಲಿ ಜನಿಸಿದ ಗಂಡು ಮಗುವಿಗೆ ಉಂಗುರ ನೀಡಿದ್ದಾರೆ. ಮಗುವಿನ ಅಜ್ಜಿ ಸಂತಸಗೊಂಡು ಮಾತನಾಡಿ ಮಗುವಿಗೆ “ಮೋ’ ಎಂಬ ಅಕ್ಷರದಿಂದ ಆರಂಭವಾಗುವ ಹೆಸರನ್ನೇ ಇರಿಸುವುದಾಗಿ ಹೇಳಿದ್ದಾರೆ. ಇತರ ನವಜಾತ ಶಿಶುಗಳಿಗೆ ಉಡುಗೊರೆಗಳನ್ನು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next