Advertisement

ಬಾಂಧವ್ಯ ಗಟ್ಟಿಗೊಳಿಸಿದ ಅನೌಪಚಾರಿಕ ಭೇಟಿ

12:27 AM Oct 12, 2019 | Team Udayavani |

ಚೆನ್ನೈ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ಭಾರತ ಭೇಟಿ, ತಮಿಳುನಾಡಿನ ಮಹಾಬಲಿಪುರಂನಲ್ಲಿ ಪ್ರಧಾನಿ ಮೋದಿ ಜತೆ ನಡೆದ ಅನೌಪಚಾರಿಕ ಮಾತು ಕತೆಯು ಭಾರತ ಮತ್ತು ಚೀನಾದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಬಳಿಕ ಪಾಕಿಸ್ತಾನದ ಕುತಂತ್ರಕ್ಕೆ ಬಲಿಯಾಗಿ ಚೀನಾವು ಪಾಕ್‌ ಪರ ನಿಲುವು ತಳೆದಿದ್ದ ಸಂದರ್ಭದಲ್ಲೇ ಈ ಭೇಟಿಗೆ ವೇದಿಕೆ ಕಲ್ಪಿಸಿರುವುದು ರಾಜತಾಂತ್ರಿಕ ಮಟ್ಟದಲ್ಲೂ ಭಾರತದ ಜಾಣ ನಡೆಗೆ ಸಾಕ್ಷಿಯಾಗಿದೆ.

Advertisement

ಶಿಥಿಲ ಸರೋವರಕ್ಕೆ ಮರುಜೀವ
ಪ್ರಧಾನಿ ಮೋದಿ- ಚೀನಾ ಅಧ್ಯಕ್ಷ ಜಿನ್‌ಪಿಂಗ್‌ ಅವರ ಮಹಾಬಲಿಪುರಂ ಭೇಟಿಯು ಇಲ್ಲಿನ ಶಿಥಿಲಗೊಂಡಿದ್ದ ಸರೋವರಕ್ಕೆ ಜೀವ ನೀಡಿದೆ. ಅದು ಹೇಗೆ ಗೊತ್ತಾ? ಮೋದಿ-ಕ್ಸಿ ಭೇಟಿ ಹಿನ್ನೆಲೆಯಲ್ಲಿ ಇಡೀ ಮಹಾಬಲಿಪುರಂ ಅನ್ನು ಚೆಂದಗಾಣಿಸುವ ಪ್ರಕ್ರಿಯೆ ಕೆಲ ತಿಂಗಳ ಹಿಂದೆಯೇ ಆರಂಭವಾಗಿತ್ತು. ಅದರ ಭಾಗವಾಗಿ, ನಿರ್ಜೀವವಾಗಿದ್ದ ಕೊನೇರಿ ಸರೋವರಕ್ಕೆ ಜೀವ ತುಂಬಲಾಗಿದೆ. ಮಹಾಬಲಿಪುರಂ ಸ್ಮಾರಕದ ಪಕ್ಕದಲ್ಲೇ ಇರುವ ಈ ಕೆರೆಯಲ್ಲಿ ಹೂಳು, ಕಳೆಗಳು ತುಂಬಿದ ಪರಿಣಾಮ ಅಲ್ಲೊಂದು ಕೆರೆಯಿತ್ತು ಎಂಬುದೇ ಮರೆತುಹೋಗಿತ್ತು. ಆದರೆ, ಮೋದಿ-ಕ್ಸಿ ಭೇಟಿ ಹಿನ್ನೆಲೆಯಲ್ಲಿ ಎನ್‌ಜಿಒವೊಂದು ಈ ಜಲಮೂಲದ ಪುನಶ್ಚೇತನ ಕಾರ್ಯ ನಡೆಸಿದೆ.

ಸ್ವಾಗತಕ್ಕೆ 18 ಬಗೆಯ ತರಕಾರಿ
ಜಿನ್‌ಪಿಂಗ್‌ ಅವರಿಗೆ ಅದ್ಧೂರಿ ಸ್ವಾಗತ ನೀಡುವ ಸಲುವಾಗಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದ ಮಹಾಬಲಿಪುರಂನಲ್ಲಿ ವಿಶೇಷವಾದ ಸ್ವಾಗತ ಕಮಾನು ನಿರ್ಮಿಸಲಾಗಿತ್ತು. ಇಲ್ಲಿನ ಐತಿಹಾಸಿಕ ಪಂಚರಥ ಸ್ಮಾರಕದ ಸಮೀಪವೇ 18 ಬಗೆಯ ಸಾವಯವ ತರಕಾರಿ ಗಳು ಹಾಗೂ ಹಣ್ಣುಗಳನ್ನು ಬಳಸಿಕೊಂಡು ಬೃಹತ್‌ ಸ್ವಾಗತ ಕಮಾನನ್ನು ನಿರ್ಮಿಸಲಾಗಿತ್ತು. ಈ ಕಮಾನಿನ ಅಲಂಕಾರಕ್ಕಾಗಿ ತೋಟಗಾರಿಕಾ ಇಲಾಖೆಯ ಸುಮಾರು 200 ಸಿಬ್ಬಂದಿ 10 ಗಂಟೆ ಕಾಲ ಶ್ರಮಿಸಿದ್ದರು.

ಚೆಟ್ಟಿನಾಡ್‌ನಿಂದ ಥಕ್ಕಾಲಿ ರಸಂವರೆಗೆ ಖಾದ್ಯಗಳ ದರ್ಬಾರ್‌
ಭಾರತ ಭೇಟಿಯಲ್ಲಿರುವ ಜಿನ್‌ಪಿಂಗ್‌ ಅವರಿಗೆ ಪ್ರಧಾನಿ ಮೋದಿ ಶುಕ್ರವಾರ ರಾತ್ರಿ ವಿಶೇಷ ಔತಣಕೂಟ ಆಯೋಜಿಸಿದ್ದರು. ಇಲ್ಲಿ ಚೆಟ್ಟಿನಾಡ್‌ನಿಂದ ಕರೈಕುಡಿವರೆಗೆ ತಮಿಳುನಾಡಿನ ಸಾಂಪ್ರದಾಯಿಕ ಖಾದ್ಯಗಳೇ ಸದ್ದು ಮಾಡಿದವು. ಅರಚವಿಟ್ಟ ಸಾಂಬಾರ್‌, ಕವನರಾಸಿ ಹಲ್ವ, ಕಡಲೆ ಕುರ್ಮ, ಥಕ್ಕಾಲಿ ರಸಂ ಮತ್ತಿತರ ಬಾಯಲ್ಲಿ ನೀರೂರಿಸುವಂಥ ಆಹಾರಗಳು ದಕ್ಷಿಣ ಭಾರತದ ಖಾದ್ಯ ವೈವಿಧ್ಯತೆಯನ್ನು ಸಾರಿದವು.

ಪ್ರತಿಭಟನಾಕಾರರು ವಶಕ್ಕೆ
ಚೀನಾ ಅಧ್ಯಕ್ಷ ಜಿನ್‌ಪಿಂಗ್‌ ತಂಗಲಿರುವ ಚೆನ್ನೈನ ಪಂಚತಾರಾ ಹೋಟೆಲ್‌ ಹೊರಗಡೆ ಪ್ರತಿಭಟನೆ ನಡೆಸಲು ಮುಂದಾಗಿದ್ದ ಐವರು ಟಿಬೆಟಿಯನ್ನರನ್ನು ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ. ಟಿಬೆಟಿಯನ್‌ ಧ್ವಜ ಹಿಡಿದುಕೊಂಡು ದಿಢೀರ್‌ ಪ್ರತಿಭಟನೆಗೆ ಯತ್ನಿಸಿದವರನ್ನು ತಡೆದ ಪೊಲೀಸರು, ಘೋಷಣೆಗಳನ್ನು ಕೂಗದಂತೆಯೂ ತಡೆದು ಆಟೋರಿಕ್ಷಾದಲ್ಲಿ ಠಾಣೆಗೆ ಕರೆದೊಯ್ದಿದ್ದಾರೆ.

Advertisement

ಗೋಬ್ಯಾಕ್‌ ಮೋದಿ ಹ್ಯಾಷ್‌ಟ್ಯಾಗ್‌: ಪಾಕ್‌ ಕುತಂತ್ರ ಬಯಲು
ಪ್ರಧಾನಿ ಮೋದಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಜತೆಗೆ ಅನೌಪಚಾರಿಕ ಮಾತುಕತೆ ನಡೆಸಲು ಚೆನ್ನೈ ಆಗಮಿಸುತ್ತಿದ್ದಂತೆ ಟ್ವಿಟರ್‌ನಲ್ಲಿ “ಗೋ ಬ್ಯಾಕ್‌ ಮೋದಿ’ ಎಂಬ ಹ್ಯಾಶ್‌ಟ್ಯಾಗ್‌ನಲ್ಲಿ ಪ್ರತಿಭಟನೆ ಶುರುವಾಗಿತ್ತು. ಈ ಹ್ಯಾಷ್‌ಟ್ಯಾಗ್‌ನ ಮೂಲ ಹುಡುಕಿದಾಗ, ಇದನ್ನು ಟ್ರೆಂಡಿಂಗ್‌ ಮಾಡಿದ ಟ್ವಿಟರ್‌ ಖಾತೆಗಳು ಪಾಕಿಸ್ತಾನದಲ್ಲಿರುವುದು ತಿಳಿದುಬಂತು ಎಂದು ಸರ್ಕಾರ ತಿಳಿಸಿದೆ. ಅಲ್ಲದೆ ಇಂಥ ಕುಕೃತ್ಯದಲ್ಲಿ ತೊಡಗಿದ 25 ಹ್ಯಾಶ್‌ಟ್ಯಾಗ್‌ಗಳ ವಿವರಗಳನ್ನೂ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ಮೂಲಕ ಪಾಕಿಸ್ತಾನದ ಕುತಂತ್ರವನ್ನು ಬಯಲು ಮಾಡಲಾಗಿದೆ. ಸಂವಿಧಾನದ 370ನೇ ವಿಧಿ ರದ್ದು ಮಾಡಿದ್ದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನ ಟ್ವಿಟರ್‌ನಲ್ಲಿ ಕೃತ್ರಿಮವಾಗಿ ಈ ಕ್ರಮ ಕೈಗೊಂಡಿದೆ. ಶುಕ್ರವಾರ ಬೆಳಗ್ಗಿನಿಂದಲೇ ಮೈಕ್ರೋಬ್ಲಾಗಿಂಗ್‌ ಜಾಲತಾಣದಲ್ಲಿ ನೆರೆಯ ರಾಷ್ಟ್ರ ಹತಾಶೆಯ ಪ್ರಯತ್ನ ನಡೆಸಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಇಂದು ಏನು?
ಶನಿವಾರ ಬೆಳಗ್ಗೆ ಉಭಯ ನಾಯಕರು ಫಿಶರ್‌ವೆುನ್ಸ್‌ ಕೇವ್‌ ರೆಸಾರ್ಟ್‌ನಲ್ಲಿ ಪರಸ್ಪರ ಮಾತುಕತೆ ನಡೆಸಲಿದ್ದಾರೆ. ಅದಾದ ಬಳಿಕ ಎರಡೂ ದೇಶಗಳ ನಿಯೋಗ ಮಟ್ಟದ ಮಾತುಕತೆ ನಡೆಯಲಿದೆ. ಮಧ್ಯಾಹ್ನ ಕ್ಸಿ ಅವರಿಗಾಗಿ ಪ್ರಧಾನಿ ಮೋದಿ ಔತಣಕೂಟ ಏರ್ಪಡಿಸಿದ್ದು, ಮಧ್ಯಾಹ್ನ 12.45ಕ್ಕೆ ಸರಿಯಾಗಿ ಜಿನ್‌ಪಿಂಗ್‌ ಚೆನ್ನೈ ಏರ್‌ಪೋರ್ಟ್‌ಗೆ ತೆರಳಿ ಅಲ್ಲಿಂದ ಚೀನಾಗೆ ವಾಪಸಾಗಲಿದ್ದಾರೆ.

ಮೋದಿಯವರೇ, ಕ್ಸಿ ಜಿನ್‌ಪಿಂಗ್‌ ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನವನ್ನು ಬೆಂಬಲಿಸುತ್ತಿದ್ದಾರೆ. ಅವರಿಗೆ ಚೀನಾ ಆಕ್ರಮಿಸಿರುವ 5,000 ಕಿ.ಮೀ. ಪಾಕ್‌ ಆಕ್ರಮಿತ ಕಾಶ್ಮೀರ ಪ್ರದೇಶವನ್ನು ತೆರವುಗೊಳಿಸಲು ಹೇಳಿ. ಆ ಮೂಲಕ ನಿಮ್ಮ 56 ಇಂಚಿನ ಎದೆ ಪ್ರದರ್ಶಿಸಿ.
ಕಪಿಲ್‌ ಸಿಬಲ್‌, ಕಾಂಗ್ರೆಸ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next