ಹೊಸದಿಲ್ಲಿ: ಹೊಸ ಆಲೋಚನೆಗಳು, ಹೊಸ ಪರಿಕಲ್ಪನೆಗಳನ್ನು ಸ್ವಾಗತಿಸಲು ಸದಾ ಸಿದ್ಧರಾಗಿ. ನಿಮ್ಮ ವ್ಯಾಪ್ತಿಯಡಿ ಬರುವ ಎಲ್ಲಾ ಜಿಲ್ಲೆಗಳನ್ನು ಹಾಗೂ ಪ್ರಾಂತ್ಯಗಳನ್ನು ಉತ್ಕೃಷ್ಟವಾಗಿಸಲು ಪ್ರಯತ್ನಿಸಿ ಎಂದು ಪ್ರಧಾನಿ ನರೇಂದ್ರ ಮೋದಿಯವರು, ಕೇಂದ್ರ ಸರಕಾರದ ಸೇವೆಗೆ ಹೊಸದಾಗಿ ಸೇರ್ಪಡೆಗೊಂಡಿರುವ 169 ಜನರ ಐಎಎಸ್ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ. ಕೇಂದ್ರದ ವಿವಿಧ ಇಲಾಖೆಗಳಲ್ಲಿ ಅಧೀನ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸುತ್ತಿರುವ ಈ ಅಧಿಕಾರಿಗಳ ವೃಂದ, ಮಂಗಳವಾರ, ಪ್ರಧಾನಿಯವರನ್ನು ಭೇಟಿ ಮಾಡಿತು. ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, “”ಹೊಸ ಪರಿಕಲ್ಪನೆಗೆ, ಹೊಸ ಆಲೋಚನೆಗಳಿಗೆ ಆದ್ಯತೆ ನೀಡಿ. ನಿಮ್ಮ ಇಲಾಖೆಗಳ ಕಾರ್ಯವೈಖರಿಗಳ ಬಗ್ಗೆ ವಿವಿಧ ಮೂಲಗಳಿಂದ ಪ್ರತಿಕ್ರಿಯೆ ಪಡೆಯಿರಿ. ಅವೆಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸಿ, ನಿಮ್ಮ ಕಾರ್ಯವಿಧಾನಗಳಲ್ಲಿ ಅವುಗಳನ್ನು ಅಳವಡಿಸಿಕೊಳ್ಳರಿ. ಪಾರದರ್ಶಕ ಆಡಳಿತ ನಿಮ್ಮ ಗುರಿಯಾಗಿರಲಿ” ಎಂದು ಅವರಲ್ಲಿ ಉತ್ಸಾಹ ತುಂಬಿದರು.